ಎಲ್ಲ ನೆನಪುಗಳಿಗೆ ವಿರಾಮ
ಹೋಗಿ ಬರುವೆ ರಾಮ
ಇರಿಸುವೆ ನನ್ಹೆಸರ
ಉರಿಸಿಕೊ ನಿನ್ನೊಳಗೆ
ಹೋಗಿ ಬರುವೆ ರಾಮ….
ನಾ ಬಲ್ಲೆ ನಿನ್ನೊಲುಮೆ
ಇತ್ತ ಬಿತ್ತಿ ಬೆಳೆದಿಹ ಪ್ರೇಮ
ಅತ್ತ ಒತ್ತಿ ಸುತ್ತಿಹ ನೇಮ
ಕೊರಗದಿರು ಮರುಗದಿರು
ಹೋಗಿ ಬರುವೆ ರಾಮ….
ಹಿಂಡನಗಲಿದಾ ಚುಕ್ಕಿ
ಒಂಟಿ ರೆಕ್ಕೆಯ ಹಕ್ಕಿ
ಎಣ್ಣೆ ತೀರಿದ ಬತ್ತಿ
ಹುರಿದುಂಬಿಸಿ ಉರಿಸು
ಹೋಗಿ ಬರುವೆ ರಾಮ….
ಹಗಲು ಮುಗಿದಾ ಮೇಲೆ
ಕಾರಿರುಳು ಜಗದ ಲೀಲೆ
ಹೊರಡು ಹೊತ್ತಾಯಿತು ಎಂದು
ಹರಸಿ ಕಳಿಸು
ಹೋಗಿ ಬರುವೆ ರಾಮ….
೨
ಹೊತ್ತಿ ಉರಿಯಿತದು ಉಂಡೆ
ಧಗಧಗ ಧಗಧಗ
ಹಿಮ್ಮೇಳದಲ್ಲಿ ಗವ್ವಿರುಳ ಚಂಡೆ
ಅಬ್ಬಾ! ಎಷ್ಟಾದರೂ ಗಂಡು ಗಂಡೆ
ಹೋಗುವೆನು ರಾಮ….
ಅಗಸನ ಕತ್ತೆಗೆ ಸಮವಂತೆ
ಅರಸೊತ್ತಿಗೆಯ ನ್ಯಾಯ
ನಾ ಹೇಳೆ…. ನೀ ಕೇಳೆ….
ಹೋಗುವೆನು ರಾಮ….
ಗಾಯದ ಮೇಲೆ ಗಾಯ
ಮಾಯದಾ ಗಾಯ
ಕರಗಬಾರದೆ ಕಾಯ?
ಹೋಗುವೆನು ರಾಮ….
೩
ನೆನಪುಗಳಿಗೆಲ್ಲಿ ವಿರಾಮ?
ಹೇಗೆ ಹೋಗಲಿ ರಾಮ?
ತುಟಿಯೊತ್ತಿ ನೂರೊಂದು ಮುತ್ತನಿರಿಸಿ
ಹನಿಗಣ್ಣ ಒರೆಸಿ
ಗೋಣಪ್ಪಿ ಮೈದಡವಿ
ಕಣ್ಣೀರ ಕರೆದರೆ ಹೇಗೆ ಹೋಗಲಿ ರಾಮ?
ಮುನ್ನಡೆಸು ಮುನ್ನಡೆಸು
ರಾಮ…. ನನ್ನ ರಾಮ….
ಸೀತಾರಾಮ….
*****