(ಭಾರತದಿಂದ ಗಡೀಪಾರು ಮಾಡಲ್ಪಟ್ಟ ಬೌದ್ಧದರ್‍ಮ ಚೀನಾ, ಜಾಪಾನುಗಳಿಗೆ ವಲಸೆ ಹೋಗಿ ಕ್ರಮೇಣ ಅಲ್ಲಿ ಕವಲೊಡೆದ ಶಾಖೆಗಳಲ್ಲಿ ಪ್ರಮುಖವಾದ ಶಾಖೆಯೆ ‘ಝೆನ್’. ಶೊಯ್‌ಚಿ ಒಬ್ಬ ಝೆನ್ ಧರ್‍ಮಗುರು. ಆತ ತನ್ನ ಶಿಷ್ಯರಿಗೆ ಸೂತ್ರಗಳ ಪಠಣ ಕೈಬಿಟ್ಟು ಕೇವಲ ಧ್ಯಾನದಲ್ಲಿ ನಿರತರಾಗುವಂತೆ ಆದೇಶ ನೀಡುತ್ತಾನೆ. ದೇವಾಲಯ ಹಗಲು ರಾತ್ರಿಯ ಪರಿವೆಯಿಲ್ಲದೆ ಮೌನದಲ್ಲಿ ಮುಳುಗುತ್ತದೆ. ಅದೊಂದು ದಿನ ಇದ್ದಕ್ಕಿದ್ದ ಹಾಗೆ ದೇವಾಲಯದಿಂದ ಸೂತ್ರಗಳ ಪಠಣ ಕೇಳಿ ಬರುತ್ತದೆ. ಗುರುವಿನ ಮರಣವಾರ್‍ತೆ ಆ ಮೂಲಕ ಎಲ್ಲೆಡೆ ಬಿತ್ತರಗೊಳ್ಳುತ್ತದೆ.)
ಅದೊಂದು ದಿನ ಶೊಯ್‌ಚಿ
ಗಂಟೆಗಳಿಗೆ ಮೊಳಗಿದ್ದು ಸಾಕು ಅಂದ
ತಾಳಗಳಿಗೆ ಕುಣಿದದ್ದು ಸಾಕು ಅಂದ
ಮಂತ್ರಗಳಿಗೆ ಪಠಿಸಿದ್ದು ಸಾಕು ಅಂದ.
ಗಂಟೆಗಳಿಗೆ ಒಂದು ಚಣ ಗಾಬರಿಯಾಯಿತು
ತಾಳಗಳು ಕುಣಿತದ ಮಧ್ಯೆ ಕೆರಳಿ ನಿಂತವು
ಮಂತ್ರಗಳು ಮುಖ ಊದಿಸಿಕೊಂಡವು
ಶಿಷ್ಯರು ತಳಮಳಿಸಿದರು.
೨
ಇದೀಗ ಶೊಯ್‌ಚಿ ಎಲ್ಲರಿಗೂ
ಧ್ಯಾನಿಸಲು ಹೇಳಿದ.
ಇಷ್ಟಾನಿಷ್ಟವನೆಲ್ಲ ಮೆಟ್ಟಿ
ಗಂಟೆಗಳು ಗರಬಡಿದು ನಿಂತವು
ತಾಳಗಳು ತಲ್ಲೀನವಾದವು
ಮಂತ್ರಗಳು ಮಗ್ನವಾದವು
ದೇವಾಲಯ ಧ್ಯಾನಸ್ಥವಾಯಿತು.
ಶಿಷ್ಯರು-
ಬುದ್ಧನನ್ನೊಮ್ಮೆ ನೋಡಿದರು
ಮುಗುಳುನಗೆಯನ್ನೂ ನೋಡಿದರು
ಧ್ಯಾನದಲ್ಲಿ ಮುಳುಗಿದರು.
೩
‘ಧ್ಯಾನಿಸಿ’ ಅಂದದ್ದು
ಅಲ್ಲೇ ಭುಸುಗುಡುತ್ತಾ
ಅಡ್ಡಾಡುತ್ತಿದ್ದ ಸೂರ್‍ಯನ
ಕಿವಿಗೂ ಬಿತ್ತು.
ಅಗ್ನಿಪರ್‍ವತದೊಳಗೊಂದು
ಅಂತರ್‍ಗಾಮಿ ನದಿ
ತಣ್ಣಗೆ ಹರಿದು ಹೋಯಿತು.
‘ಧ್ಯಾನಿಸಿ’ ಅಂದದ್ದು
ಅಲ್ಲೇ ಚಿನ್ನಾಟವಾಡುತ್ತಿದ್ದ
ಮರಿಮೋಡಗಳ ಹಿಂಡಿಗೂ ತಟ್ಟಿತು
ಮಿಂಚಿನ ಸೆಳಕೊಂದು
ಮೆರೆದು ಮರೆಯಾಯಿತು.
ಹೀಚು, ಮೊಗ್ಗು, ಹೂವು, ಹಣ್ಣು,
ಕೆಂಪೆಲೆ, ಹಸಿರೆಲೆ, ಹಣ್ಣೆಲೆಗಳ
ಲೆಕ್ಕಾಚಾರದಲ್ಲಿ ಮಗ್ನವಾಗಿದ್ದ
ಹೆಮ್ಮರಿಗಳಿಗೆ ಗಾಳಿಗಿವಿಯೂದಿ
‘ಧ್ಯಾನಿಸಿ’ ಅಂತು.
ಅತ್ತಿಂದಿತ್ತ ಹೊಯ್ದಾಡಿ
ಧ್ಯಾನಕ್ಕೆ ಶರಣಾಯಿತು.
ಧುಮುಧುಮು ಎಂದು
ಧುಮುಗುಡುತ್ತಾ ಧುಮ್ಮಿಕ್ಕಿ
ಹರಿಯುತ್ತಿದ್ದ ನದಿಯ
ಎದೆ ಸುಳಿಯೊಳಗೆ
ದನಿಯೊಂದು ಚಿಮ್ಮಿ
ತಡೆದು ನಿಲ್ಲಿಸಿತು.
ಚಂದ್ರ ಓಡೋಡಿ ಬಂದು
ಇರುಳ ಮನೆಗೆ ದೀಪ ಹಚ್ಚಿದ
ಬೆಳಕು ಸಾಲದು
ಎಂದು ಅವನಿಗೂ ಅನ್ನಿಸಿತು.
ದುಂಬಿಯ ಝೇಂಕಾರದ ಹಾಗೆ
ಹಕ್ಕಿಯ ಹಾಡಿನ ಹಾಗೆ
ಹೂವಿನ ಗಂಧದ ಹಾಗೆ
ಧ್ಯಾನ ಎಲ್ಲರನ್ನೂ ತಬ್ಬುತ್ತಿತ್ತು
ದಟ್ಟವಾಗುತ್ತಿತ್ತು.
೪
ಅದೊಂದು ದಿನ ಶೊಯ್‌ಚಿ
ಇನ್ನಿಲ್ಲವಾದ.
ಸೂರ್‍ಯ ಬೆಂಕಿಯ ನಾಲಗೆ ತೆರೆದು
ನದಿ ಧುಮ್ಮಿಕ್ಕಿ ನಡೆದು
ಶೊಯ್‌ಚಿ ಇನ್ನಿಲ್ಲ ಎಂದು ಸಾರಿದವು.
ಗಂಟೆಗಳು ಮೊಳಗತೊಡಗಿದವು
ತಾಳಗಳು ಕುಣಿಯತೊಡಗಿದವು
ಮಂತ್ರಗಳ ಗರ್‍ಜನೆ ಮುಗಿಲು ಮುಟ್ಟಿತು.
ಯಾರಿಗೋ ಗೊತ್ತಾಯಿತು
ಶೊಯ್‌ಚಿ ಇನ್ನಿಲ್ಲ
ಎಲ್ಲರಿಗೂ ಗೊತ್ತಾಯಿತು-
ಶೊಯ್‌ಚಿ ಇನ್ನಿಲ್ಲ
ಜಗತ್ತೇ ನುಡಿಯಿತು
ಶೊಯ್‌ಚಿ ಇನ್ನಿಲ್ಲ
೫
ಶಿಷ್ಯರು ನೋಡಿದರು
ಸದ್ದುಗದ್ದಲ ಸಂಭ್ರಮದಲ್ಲಿ
ಕರಗುತ್ತಿದ್ದ
ಬುದ್ಧನನ್ನು ನೋಡಿದರು
ದುಂಬಿಯ ಝೇಂಕಾರದಲ್ಲಿ
ಹಕ್ಕಿಯ ಹಾಡಿನಲ್ಲಿ
ಹೂವಿನ ಪರಿಮಳದಲ್ಲಿ
ಕರಗುತ್ತಿದ್ದ
ಮುಗುಳುನಗೆಯನ್ನು ನೋಡಿದರು.
ಧೂಪದ ಹೊಗೆ ಕಣ್ಣ
ಕವಿಯುವ ತನಕ ನೋಡಿದರು.
*****