ಬಂಗಾರು ಚೆಟ್ಟಿಯನ್ನು ಕೊಂದೇ ಬಿಡುತ್ತೇನೆ ಇವತ್ತು ಎಂದುಕೊಂಡು ಮುಂದೆ ಧಾವಿಸುತ್ತಿರುವ ದೀಕ್ಷಿತನನ್ನು ಹೇಗಾದರೂ ಮಾಡಿ ತಡಯಲೇಬೇಕೆಂದು ವಿನಯಚಂದ್ರನಿಗೆ ಅನಿಸಿತು. ದೀಕ್ಷಿತನ ಕೈಯಲ್ಲಿ ತೆಂಗಿನಕಾಯಿ ಒಡೆಯುವಂಥ ಕತ್ತಿಯಿತ್ತು. ವಿನಯಚಂದ್ರ ಮೆಟ್ಟಲಲ್ಲಿ ಬಿದ್ದು ತುಳಿತಕ್ಕೊಳಗಾಗಿರುವ ಡೋರ್ ಮ್ಯಾಟನ್ನೇ ಗುರಾಣಿಯಂತೆ ಎತ್ತಿಕೊಂಡು ದೀಕ್ಷಿತನನ್ನು ತಡೆಯಬೇಕೆಂದಿರುವಾಗ ಯಾರೋ ಅವನಿಗೆ ಹೇಳಿದಂತಯಿತು : “ಚರಿತ್ರೆ ಮತ್ತು ಮನುಷ್ಯನ ಮಧ್ಯೆ ಬಂದು ನಿಲ್ಲುವ ಮೂರ್ಖ ಕೆಲಸ ಮಾಡಬೇಡ!” ಯೀರೆಂದು ನೋಡಿದ. ಮಾವೋ ದೆ ದುಂಗ್ ಅಚ್ಚ ಕೆಂಬಣ್ಣದ ದಿರುಸಿನಲ್ಲಿ. “ಫೂಕಿಯನ್, ಕ್ವಾಂಗ್ ಟುಂಗ್, ಕಿಯಾಂಗ್ಸಿ : ಹಾಗೂ ಚಿಂಕಿಯಾಂಗ್ ಪರ್ವತ ಪ್ರದೇಶದಲ್ಲಿ ನಡೆದ ಹೋರಾಟಗಳು – ಇವನ್ನು ನೆನೆದುಕೋ! ” ಎಂದ ಮಾವೋ. ಆತ ದೀಕ್ಷಿತನನ್ನು ಚೀನೀ ಭಾಷೆಯಲ್ಲಿ ಹುರಿದುಂಬಿಸುತ್ತಲೇ ಇದ್ದಾನೆ. ಇತ್ತ ಬಂಗಾರು ಚೆಟ್ಟಿ ಕೂಡಲೆ ಮನೆಯೊಳಕ್ಕೆ ಹೋಗಿ ಪಳನಿಸ್ವಾಮಿಯ ವೇಷ ಧರಿಸಿ ಮುಂಬಾಗಿಲಿನಿಂದಲೆ ಶಿಷ್ಯ ವೃಂದದ ಸಮೇತ ವಾದ್ಯ ಘೋಷದಲ್ಲಿ ಹೊರಟು ಹೋಗುತ್ತಿದ್ದಾನೆ. ಇವನೇ ಬಂಗಾರುಚೆಟ್ಟಿ, ತಪ್ಪಿಸಿಕೊಂಡು ಹೊರಟು ಹೋಗುತ್ತಿದ್ದಾನೆ ಎಂದು ಕೂಗಬೇಕೆನಿಸಿತು ವಿನಯಚಂದ್ರನಿಗೆ, ದೀಕ್ಷಿತನಿಗೆ ಮಾತ್ರ ಇದೊಂದೂ ಗೊತ್ತಾಗದೇ ಇದೆ.
ಅಷ್ಟರಲ್ಲಿ ಯಾರೋ ಚೀಸಿನ ಕರಡಿಗೆಯನ್ನು ಉರುಳಲು ಬಿಟ್ಟಿದ್ದರು. ಛೀ! ಅನಿಸಿತು ವಿನಯಚಂದ್ರನಿಗೆ. ಅದು ಒಮ್ಮೆ ಉರುಳಲು ಸುರುವಾದರೆ ಸಿಗೋದು ಕಷ್ಟವೆಂದು ಯಾರಿಗೂ ಗೊತ್ತಾಗಲ್ಲ! ಅಂತೂ ಅದನ್ನು ಹಿಡಿದಿಡೋದು ತನ್ನ ಕರ್ತವ್ಯವೆಂಬಂತೆ ವಿನಯಚಂದ್ರ ಮೆಟ್ಟಲುಗಳನ್ನಿಳಿಯಲು ಸುರುಮಾಡಿದ. ಎದುರಿನಿಂದ ಮೆಟ್ಟಲೇರಿ ಬರುತ್ತಿದ್ದ ರೇಶ್ಮ ತನ್ನನು ಕೇರೇ ಮಾಡದೆ ಹಾದುಹೋದಾಗ ಅವನಿಗುಂಟಾದ ಬೇಸರ ಅಷ್ಟಿಷ್ಟಲ್ಲ. “ರೇಶ್ಮಾ!” ಎಂದು ಕೂಗಬೇಕೆಂದು ಬಾಯಿ ತೆರೆದರೆ ಮಾತೇ ಹೊರಡಲಿಲ್ಲ. ಬೆಲ್ಲದ ಭರಣಿಯನ್ನೆತ್ತಿಕೊಂಡು ಬಂದ ತಾಯಿಯ ಮಡಿಲಲ್ಲಿ ತಲೆಯಿಟ್ಟು ಅಳಬೇಕೆನಿಸಿತು. ಯಾರೋ ಒಂದು ರಿಮೋಟ್ ಕಂಟ್ರೋಲರನ್ನ ಹಿಡಿದುಕೊಂಡು ತನ್ನ ಚಲನವಲನಗಳೆಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ! ಅದ್ದರಿಂದಲೆ ಕೂಗಬೇಕೆಂದರೆ ಬಾಯಿ ತೆರೆಯೋದಿಲ್ಲ. ಅಳಬೇಕೆಂದರೆ ಕಣ್ಣಲ್ಲಿ ನೀರು ಹೊರಡೋದಿಲ್ಲ. ಸೈನ್ಸ್! ಅದು ಮನುಷ್ಯನನ್ನ ಬೇಕೆಂದರೆ ಉಳಿಸಬಲ್ಲುದು, ಬೇಕೆಂದರೆ ಅಳಿಸಬಲ್ಲುದು. ರಿಮೋಟ್ ಕಂಟ್ರೋಲ್ ಅನ್ನೋದು ಮಹಾ ಡೇಂಜರಸ್ ಇನ್ವೆನ್ಶನ್! ಇದು ತರಂಗಾಂತರಗಳ ಮೂಲಕ ಪ್ರವರ್ತಿಸುತ್ತದೆ. ಇದರ ಅಪಾಯದ ಬಗ್ಗೆ ನಾನು ನಿಮ್ಮನ್ನು ಕಳೆದ ಶತಮಾನದಲ್ಲೆ ಎಚ್ಚರಿಸಿಲ್ಲವೆ ಎಂದು ವಿನಯಚಂದ್ರ ಪ್ರೊಫ಼ೆಸರ್ ಶೇಷಗಿರಿ ಜತೆ ವಾದಿಸತೊಡಗಿದ.
ಶೇಷಗಿರಿಗೆ ಮಾತ್ರ, ಉದುರುತ್ತಿರುವ ತಮ್ಮ ತಲೆಗೊದಲ ಚಿಂತನೇ ಜಾಸ್ತಿಯಿದ್ದಂತೆ ಕಂಡಿತು. ಇದಕ್ಕೂ ಈಗೊಂದು ಔಷಧಿ ಬಂದು ಬಿಟ್ಟಿದೆ ಸಾರ್ ಎಂದು ಯಾರೋ ಒಬ್ಬ ಅಂದದ್ದಕ್ಕೆ ಶೇಷಗಿರಿ ತಮ ಪೂರ್ತಾ ಲಕ್ಷವನ್ನು ಆ ಕಡೆ ಹರಿಸಿದರು.
ಒಂದು ಆಟೋ ಬಂದು ನಿಂತ ಹಾಗಾಯಿತು. ಆಟೋ ಡ್ರೈವರ್ ಒಳಗೆ ಕುಳಿತ ವ್ಯಕ್ತಿಯತ್ತ ಬೆರಳು ಮಾಡಿ ಇತರರಿಗೆ ಹೇಳಿದ : “ನೋಡಿ ಸರ್, ಈ ಮನುಷ್ಯ ಅದೆಲ್ಲಿಗೋ ಹೋಗಬೇಕಂತೆ. ನನಗೆ ಅರ್ಥವಾಗ್ತ ಇಲ್ಲ!” ದೀಕ್ಷಿತ ಅವನಿಗೆ “ನೀವೆಲ್ಲಿಗೆ ಹೋಗಬೇಕೋ ಸ್ಪಷ್ಟವಾಗಿ ಹೇಳಬಾರದೆ” ಎಂದು ಜೋರುಮಾಡಿದಾಗ ಆತ. “ಲಾಜಿಕಲ್ ಗಾರ್ಡನ್ಸ್ ಗೆ “ಎಂದ.
“ಓಹೋ ಲಾಜಿಕಲ್ ಗಾರ್ಡನ್ಸ್ ಗೆ “ಎಂದು ಎಲ್ಲರೂ ಒಕ್ಕೋರಲಿನಲ್ಲಿ ಹೇಳಿದರು.
” ಅಂಥದೊಂದು ಗಾರ್ಡನ್ ಇಲ್ಲೆಲ್ಲೂ ಇಲ್ಲ. ಗೊತ್ತಾಯಿತೆ? ಸುಮ್ಮಗೆ ಈ ಆಟೋದವನಿಗೆ ಯಾಕೆ ತೊಂದ್ರೆ. ಕೊಡ್ತ ಇದ್ದೀರಿ? ಬೇಕಿದ್ರೆ ನಡಕೊಂಡು ಹೋಗಿ! ” ಎಂದು ದೀಕ್ಷಿತ ಜೋರಿನಿಂದ ಹೇಳಿದ.
“ನೋ ನೋ ನೋ! ನಾನು ಲಾಜಿಕಲ್ ಗಾರ್ಡನಿಗೆ ಭಾಳ ಅರ್ಜೆಂಟಾಗಿ ಹೋಗಬೇಕು. ಚಲೋಜಿ ಚಲೋ! ” ಎಂದನು ಆಟೋ ಪ್ರಯಾಣಿಕ.
“ಬಹುಶಃ ನೀವನ್ನುತ್ತಿರೋದು ಜೂಲಾಜಿಕಲ್ ಗಾರ್ಡನ್?” ಎಂದ ವಿನಯಚಂದ್ರ.
“ಓಹೋ! ಜೂಲಾಜಿಕಲ್ ಗಾರ್ಡನ್! ಜೂಲಾಜಿಕಲ್ ಗಾರ್ಡನ್!” ಎಂದರು ಕೋರಸ್ ನ ಜನರು.
ಇಷ್ಟರಲ್ಲಿ ಆಟೋ ಹೊರಟುಹೋಗಿಯಾಗಿತ್ತು. ಒಂದು ವ್ಯಕ್ತಿ ಯನ್ನುಳಿದು ಬೇರೆಯವರು ಯಾರೂ ಕಾಣಿಸಲಿಲ್ಲ. ವಿನಯಚಂದ್ರ ಆತನನ್ನು ಸಮೀಪಿಸಿದ.
“ಇದೇನು ಕೈಯಲ್ಲಿ ಹಿಡಕೊಂಡಿದ್ದೀರಿ?” ಎಂದು ಕೇಳಿದ.
“ದೂರನಿಯಂತ್ರಕ” ಎಂದಿತು ವ್ಯಕ್ತಿ.
“ದೂರನಿಯಂತ್ರಕ? ಹಾಗಂದರೇನು?”
“ರಿಮೋಟ್ ಕಂಟ್ರೋಲ್ ಗೆ ಸ್ವದೇಶೀ ಹೆಸರು”
“ಹೊಸ ಮಾಡಲ್ ನ ಹಾಗೆ ಕಾಣಿಸುತ್ತದೆ. ಆದರೆ ಇದನ್ನ ಹಿಡಿದುಕೊಂಡು ಇಲ್ಲಿ ಯಾತಕ್ಕೆ ನಿಂತಿದ್ದೀರಿ?”
“ಯಾತಕ್ಕೆಂದರೆ ಜನರನ್ನು ನಿಯಂತ್ರಿಸೋದಿಕ್ಕೆ.”
“ಹೌದು. ಆ ಆಟೋದವನನ್ನು, ಇಲ್ಲಿಂದ ಓಡಿಸಿದೋನು ನಾನೇ. ಇದು ನೋಡಿ, ಈ ಬಟನಿದೆಯಲ್ಲ, ಇದನ್ನ ಒತ್ತಿದರಾಯಿತು. ಇದರ ಪಕ್ಕದಲ್ಲಿರೋದನ್ನ ಒತ್ತಿದರೆ ಮನುಷ್ಯನನ್ನು ನಾಯಿಯಾಗಿ ರೂಪಾಂತರಿಸಬಹುದು.”
“ನಾನು ಪ್ರೊಫ಼ೆಸರ್ ಶೇಷಗಿರಿಯವರಿಗೆ ವಾರ್ನ್ ಮಾಡಿದ್ದೆ!”
“ಆದರೆ ಅವರು ಕಿವಿಮೇಲೆ ಹಾಕಿಕೊಳ್ಳಲಿಲ್ಲ?”
“ಇಲ್ಲ!”
“ಯಾಕಿರಬಹುದು?”
“ಅವರಿಗೆ ತಮ್ಮ ತಲೆಗೂದಲಿನ ಚಿಂತೆ. ಅದಕ್ಕೆಲ್ಲೋ ಔಷಧ ಸಿಗತ್ತಂತೆ.”
“ಅದೆಲ್ಲ ನೆಪ. ಶೇಷಗಿರಿ ನಮಗೋಸ್ಕರ ಕೆಲಸ ಮಾಡ್ತಿದಾರೆ. ಹೀ ಈಸ್ ಇನ್ ಅವರ್ ಪೇ!”
“ನೀವೆಂದರೆ ಯಾರು?”
“ಸರಕಾರೀ ಏಜೆಂಟರು. ಈಗ ನೀನು ಪ್ರಶ್ನೆ ಕೇಳಿದ್ದು ಹೆಚ್ಚಾಯಿತು. ಅದ್ದರಿಂದ ಕೊನೇ ಬಟನು ಒತ್ತದೆ ಬೇರೆ ದಾರಿಯಿಲ್ಲ.”
“ಕೊನೇ ಬಟನು? ಅದರಿಂದ ಏನಾಗುತ್ತದೆ?”
“ಮನುಷ್ಯ ಮಾಯವಾಗುತ್ತಾನೆ!”
ವಿನಯಚಂದ್ರನ ವಿರೋಧವನ್ನು ಲೆಕ್ಕಿಸದೆ ಆ ವ್ಯಕ್ತಿ ಕೊನೇ ಬಟನು ಒತ್ತಿಯೇಬಿಟ್ಟಿತು! ವಿನಯಚಂದ್ರನಿಗೆ ಆಕಾಶದಲ್ಲಿ ತೇಲಿಕೊಂಡು ಹೋಗುವ ಅನುಭವ. ಅರೆ! ತನ್ನ ದೇಹವೇನಾಯಿತೆಂದು ಅಚೀಚೆ ನೋಡಿದ. ಎಲ್ಲೂ ದೇಹ ಕಾಣಿಸಲಿಲ್ಲ. ಹೀಗಿದ್ದರೆ ಇನ್ನು ಮಲಗೋದು ಹೇಗೆ, ಮಾತಾಡೋದು ಹೇಗೆ, ಏನಾದರೂ ಮಾಡೋದು ಹೇಗೆ? ಸರಕಾರಿ ಏಜೆಂಟ ಕೂಡ ಎಲ್ಲಿಯೂ ಕಾಣಿಸಲಿಲ್ಲ. ಇನ್ನು ಇವನನ್ನು ಹುಡುಕಿಕೊಂಡು ಹೋಗಬೇಕಾಯಿತಲ್ಲ ಇಂಥ ರಾತ್ರಿಯಲ್ಲಿ ಎಂದು ಅನಗತ್ಯ ಬೇಸರವಾಯಿತು.
ಟಪ್! ಟಪ್! ಟಪ್! ಸದ್ದು. ರೇಶ್ಮಾ ಜಿಂದಲ್ ನ ಎಕ್ಕಡದ ಸದ್ದು. ಮೆಟ್ಟಲುಗಳನ್ನು ಒಂದೊಂದಾಗಿಯೆ ಇಳಿಯುತ್ತ ಇದ್ದಾಳೇ! ಇಷ್ಟೊಂದು ಅಲಂಕಾರ ಮಾಡಿಕೊಂಡು ಎಲ್ಲಿಗೆ ಹೋಗುತ್ತಿರಬಹುದು? ಕರೆಯಲು ಯತ್ನಿಸಿದ. ಆಕೆ ಇವನತ್ತ ನೋಡುತ್ತಲೇ ಇಲ್ಲ! ಟಪ್! ಟಪ್! ಟಪ್! ಶಬ್ದ ನಿರ್ದಯವಾಗಿ ಬಡಿಯುತ್ತಲೇ ಇದೆ! ಹೌದು. ಬಾಗಿಲು ಬಡಿಯುವ ಶಬ್ದವಿದು! ಇಷ್ಟು ಹೊತ್ತಿನಲ್ಲಿ ಯಾರಿರಬಹುದೋ. ಅಪ್ಪ ಎದ್ದು ಹೋಗುತ್ತಾರೆ ಎಂದುಕೊಂಡ. ಇಲ್ಲ, ಬಾಗಿಲ ಬಡಿತ ಮತ್ತೆ ಕೇಳಿಸುತ್ತದೆ-ಎದ್ದು ಕುಳಿತ. ಮೈ ಕೈ ನೋವು, ತಲೆಭಾರ. ತನಗೆ ಜ್ವರ ಬರುತ್ತಿರಬಹುದೆ? ಎಲ್ಲಿದ್ದೇನೆಂದು ನೆನಪು ಮಾಡಿಕೊಳ್ಳಲು ಯತ್ನಿಸಿದ. ದೀಕ್ಷಿತನ ಕೋಣೆಯೆಂದು ಗೊತ್ತಾಯಿತು. ಸೊಳ್ಳೆ ಪರದೆಯನ್ನು ಪಕ್ಕಕ್ಕೆ ಸರಿಸಿ ಎದ್ದು ನಿಂತ. ಲೈಟಿನ ಸ್ವಿಚ್ಚು ಹಾಕಿದ. ಪಕ್ಕನೆ ಬಿದ್ದ ಬೆಳಕನ್ನು ಸಹಿಸಲಾರದೆ ಕಣ್ಣು ಮುಚ್ಚಿಕೊಂಡ. ಒಂದು ವಾರಕ್ಕೆಂದು ಹೋದ ದೀಕ್ಷಿತ ಇವತ್ತೇ ವಾಪಸು ಬಂದುಬಿಟ್ಟನೆ? ನಿಧಾನವಾಗಿ ಹೋಗಿ ಬಾಗಿಲ ಚಿಲಕ ತೆಗೆದ.
ಚಿಲಕ ತೆಗೆದದ್ದೇ ಇಬ್ಬರು ವ್ಯಕ್ತಿಗಳು ಬಾಗಿಲನ್ನು ದೂಡಿಕೊಂಡು ಒಳಕ್ಕೆ ಬಂದರು. ಒಬ್ಬನ ಕೈಯಲ್ಲಿ ಲಾಠಿಯತ್ತು. ಅದನ್ನು ವಿನಯಚಂದ್ರನ ಬಾಯಿಯೊಳಕ್ಕೆ ತುರುಕಿ ಆತ ಗಟ್ಟಿಯಾಗಿ ಪಿಸುಗಟ್ಟುವಂತೆ ಹೇಳಿದ :
“ಯಾವ ಪ್ರಶ್ನೆನೂ ಕೇಳದೆ ನಾವು ಹೇಳಿದಂತೆ ಕೇಳು. ಸದ್ದು ಮಾಡಿದರೆ ಕತ್ತು ಹಿಸುಕಿಬಿಡುತ್ತೇವೆ ಗೊತ್ತಾಯಿತೆ.”
ಹೀಗೆಂದು ಲಾಠಿಯನ್ನು ಬಾಯಿಯೊಳಗೆ ತಿರುವಿದ.
“ಯಾವ ಪ್ರಶ್ನೆನೂ ಕೇಳದೆ ನಾವು ಹೇಳಿದಂತೆ ಕೇಳು. ಸದ್ದು ಮಾಡಿದರೆ ಕತ್ತುಪಿಸುಕಿಬಿಡುತ್ತೇವೆ ಗೊತ್ತಾಯಿತೆ.”
“ಹೀಗೆಂದು ಲಾಠಿಯಾನ್ನು ಬಾಯಿಯೊಳಗೆ ತಿರುವಿದ.
“ಡ್ರೆಸ್ ಮಾಡ್ಕೊ!”
ವಿನಯಚಂದ್ರ ಪ್ಯಾಂಟು ಶರ್ಟು ಹಾಕಿಕೊಂಡ. ಕಾಲಿಗೆ ಸಾಕ್ಸ್ ಹಾಕಿ ಶೂ ಬಿಗಿದದ್ದಾಯಿತು. ವಿಪರೀತವಾದ ಬಾಯಾರಿಕೆ ಅನಿಸಿತು.
“ಲೈಟು ನಂದಿಸಿ ನಮ್ಮ ಜತ ಬಾ. ಬಾಗಿಲಿಗೆ ಬೀಗ ಹಾಕಿ, ಕೀಲಿ ಕೈ ಇಲ್ಲಿ ಕೊಡು!”
ಅವರು ಹೇಳಿದಂತೆ ಮಾಡಿದ. ಹೊರಗೆ ಬೀದಿಯಲ್ಲೊಂದು ಕಾರು ನಿಂತಿತ್ತು. ಇವರನ್ನು ಕಂಡ ತಕ್ಷಣ ಡ್ರೈವರ್ ಇಗ್ನಿಶನ್ ಕೀ ತಿರುವಿದ. ಕಾರು ಕಿಲೋಮೀಟರ್ ದೂರ ಹೋದೊಡನೆ ಒಂದು ಪೋಲೀಸು ವ್ಯಾನು ಕಾಣಿಸಿತು. ಕಬ್ಬಿಣದ ಜಾಲರಿಯಿರುವ ಅದರ ಕ್ಯಾಬಿನಿನಲ್ಲಿ ವಿನಯಚಂದ್ರ ನನ್ನು ಕೂತುಕೊಳ್ಳಿರಿಸಿದರು. ರೈಫ಼ಲ್ ಹಿಡಿದ ಪೋಲೀಸರು ಅವನ ಅಚೀಚೆಗೆ ಕೂತಿದ್ದರು. ವ್ಯಾನು ಊರಹೊರಗಿನ ದಾರಿಯಲ್ಲಿ ಹೊರಟಿತು.
ವಿನಯಚಂದ್ರನ ಬಾಯಿ ಒಡೆದು ರಕ್ತ ಒಸರುತ್ತಿತ್ತು. ರಕ್ತದ ಉಪ್ಪಿನ ರುಚಿ ಅಪ್ಯಾಯಮಾನವಾಗಿದೆ ಅನಿಸಿತು. ಶುಕ್ಲಪಕ್ಷದ ರಾತ್ರಿ. ತಿಂಗಳ ಬೆಳಕು ದಟ್ಟವಾಗಿ ಬಿದ್ದಿರುವುದು ಎಲ್ಲೆಡ ಕಾಣಿಸಿತು. ಅದು ಆಗಾಗ್ಗೆ ಜಾಲರಿಯಿಂದಲೂ ಒಳಕ್ಕೆ ಬೀಳುತ್ತಿತ್ತು. ತಾನೀಗ ಅಹಮ್ಮದಾಬಾದಿನ ಯಾವುದೋ ಕಾರ್ಖಾನೆಗೆ ಭೇಟಿಕೊಡುತ್ತಿರುವುದಾಗಿ ಊಹಿಸಿಕೊಂಡ. ಕಾರ್ಖಾನೆಯ ಹವಾನಿಯಂತ್ರಿತ ಕಾರು ತನ್ನನ್ನು ಕರೆದೊಯ್ಯಲು ಏರ್ ಪೋರ್ಟಿಗೆ ಬಂದಿದೆ-ಇತ್ಯಾದಿ ಇತ್ಯಾದಿ. ಅವನಿಗೀಗ ಬಹಳ ಥಂಡಿಯೆನಿಸತೊಡಗಿತ್ತು. ಹಾಕಿಕೊಂಡ ಶರ್ಟಿನಿಂದೇನೂ ಉಪಯೋಗವಿರಲಿಲ್ಲ. ಪೊಲೀಸರು ಖಾಕಿಯ ಯೂನಿಫ಼ಾರಮ್ ಯಾತಕ್ಕೆ ಹಾಕಿಕೊಳ್ಳುತ್ತಾರೆ ಎನ್ನುವ ಅವನ ಚಿಕ್ಕಂದಿನ ಪ್ರಶ್ನೆಗೆ ಇವತ್ತು ಉತ್ತರ ಸಿಕ್ಕಿದಹಾಗಿತ್ತು. ಇವತ್ತು ಎಲ್ಲವೂ ಸ್ಪಷ್ಟವಾಗುವ ವಿಶೇಷ ಮುಹೂರ್ತವೇ ಸರಿ. ಹೆರಾಕ್ಲಿಟಸ್ ಅಥವಾ ಮಾವೋ ದೆ ದುಂಗ್. ಇಂಥ ಮುಹೂರ್ತದಲ್ಲಿ ಕೆಲವು ವ್ಯತ್ಯಾಸಗಳು ಮಾಯವಾಗುತ್ತವೆ, ಇನ್ನು ಕೆಲವು ಹೊಸದಾಗಿ ಮೂಡಿಬರುತ್ತವೆ. ಯಾರೂ ಕಾರಣರಲ್ಲ ಅಥವಾ ಎಲ್ಲರೂ ಕಾರಣರು.
ಇದ್ದಕ್ಕಿದ್ದಂತೆ ಯಾಕೆ ಜ್ವರ ಸುರುವಾಯಿತು? ರೋಗಾಣುಗಳ ಜತೆ ಬಿಳಿ ರಕ್ತಕಣಗಳು ನಡೆಸುವ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ. ಯಾರು ಸೋಲುತ್ತಾರೆ ನೋಡಬೇಕು. ನಿದ್ದೆಯಲ್ಲಿ ಬಿದ್ದ ಕನಸುಗಳಿಗೆ ಅರ್ಥವಿದೆಯ? ಲಾಜಿಕಲ್ ಗಾರ್ಡನಂತೂ ಒಂದು ಜೋಕೇ ಸರಿ! ಎಂದೂ ಮನಸ್ಸಿಗೆ ಬಾರದುದು ಕನಸಿನಲ್ಲಿ ಯಾಕೆ ಬಂತು? ಹಾಗೂ ಆ ದೂರ ನಿಯಂತ್ರಕ! ಪ್ರೊಫ಼ೆಸರ್ ಶೇಷಗಿರಿಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ ನಿಜ. ಆದರೆ ಶೇಷಗಿರಿ ಅದೇನೋ ರಿಸರ್ಚ್ ನಲ್ಲಿ ತೊಡಗಿರುವುದು ಸತ್ಯ.
ವ್ಯಾನು ಯಾವುದೋ ಅಡ್ಡಹಾದಿಯಲ್ಲಿ ತಿರುಗಿ ಹೋಗುತ್ತಿದೆ. ಯಾವ ಉದ್ದೇಶವೂ ಇಲ್ಲದೆ ರಾತ್ರಿ ವಾಯುಸಂಚಾರಕ್ಕೆ ಹೊರಟಂತಿದೆ. ಕಾಡಿನ ಮರಗಳು ಕಾಣಿಸಿದುವು. ಥಂಡಿಯೂ ಜಾಸ್ತಿಯಾಯಿತು. ಎಷ್ಟೋ ಹೊತ್ತಾದ ಮೇಲೆ ವಾಹನ ಒಂದೆಡೆ ನಿಂತಿತು. ಎಲ್ಲರೂ ಕೆಳಗಿಳಿದರು. ಪೋಲೀಸ್ ದಳದ ಮುಖ್ಯಸ್ಥ ವಿನಯಚಂದ್ರನ ಬಳಿ ಬಂದು ಒಮ್ಮೆ ಅವನನ್ನು ಆಪಾದಮಸ್ತಕ ನೋಡಿದ.
“ನೀವು…. ನೀವು ಬಹಳ ದೊಡ್ಡ ತಪ್ಪು ಮಾಡ್ತ ಇದೀರಿ!”
ಎಂದ ವಿನಯಚಂದ್ರ.
ಅದನ್ನು ಕೇಳಿಸಿಕೊಳ್ಳದವನಂತೆ ಮುಖ್ಯಸ್ಥ ಜೇಬಿನಿಂದ ಸಿಗರೇಟಿನ ಪೊಟ್ಟಣ ಹೊರತೆಗೆದು ಒಂದನ್ನು ಹಚ್ಚಿಕೊಂಡ. ನಂತರ ಏನೋ ನೆನಪಾದವನಂತೆ, ಪೊಟ್ಟಣವನ್ನು ವಿನಯಚಂದ್ರನ ಕಡೆ ಹಿಡಿದು. “ಸ್ಮೋಕ್!” ಎಂದು ಹೇಳಿದ.
“ಶುಕ್ರನ್! ಆದರೆ ನನ್ನ ಗಂಟಲಲ್ಲಿ ಕಫ಼ ತುಂಬಿದೆ…. ಅರ್ಥವಾಗಲಿಲ್ಲ ಅಲ್ವೆ? ಶುಕ್ರನ್ ಅಂದರೆ ಅರೇಬಿಕ್ ನೊಳಗೆ ಧನ್ಯವಾದ ಅಂತ.”
ವಿನಯಚಂದ್ರ ನಗುತ್ತ ಹೇಳಿದ. ಯಾರೂ ನಗಲಿಲ್ಲ.
ಮುಖ್ಯಸ್ಥ ಕೆಲಸದಲ್ಲಿ ತೊಡಗುವನಂತೆ ಹೇಳಿದ :
“ಈಗ ನಾನು ವನ್…..ಟೂ…..ಥ್ರೀ ಹೇಳ್ತೇನೆ. ಥ್ರೀ ಎಂದಾಗ ನೀನು ಓಡೋಕೆ ಸುರುಮಾಡಬೇಕು. ಸ್ಕೂಲು ಕಾಲೇಜಿನಲ್ಲಿ ಓಟದ ಸ್ಪರ್ಥೆ ಯಲ್ಲಿ ಭಾಗವಹಿಸಿದ್ದೀಯ? ಅದೇ ರೀತಿ. ಆದರೆ ಇಲ್ಲಿ ನೀನೊಬ್ಬನೇ ಓಡೋದು. ಅರ್ಥವಾಯ್ತೆ?”
“ಆಯ್ತು.”
“ಸರಿ ಹಾಗಾದ್ರೆ, ಸುರುಮಾಡೋಣ. ವನ್….ಟೂ…. ಥ್ರೀ….!”
ಗಿಡಗಂಟೆಗಳ ಮಧ್ಯೆ, ಮರಗಿಡಗಳ ಮಧ್ಯೆ, ಬೆಳದಿಂಗಳ ಚುಕ್ಕೆಗಳ ಮಧ್ಯೆ ವಿನಯಚಂದ್ರ ಓಡತೊಡಗಿದ. ಕಾಡು ಮುಗಿದರೆ ಬೆಳಕಾಗುತ್ತದೆ. ಅದ್ದರಿಂದ ಕಾಡಿನ ಅಂಚನ್ನು ಸೇರುವುದು ಬಹಳ ಮುಖ್ಯವಾದ ಸಂಗತಿ. ಆದರ ಎಷ್ಟು ಓಡಿದರೂ ಕಾಡಿನ ಅಂಚು ತಲುಪುವ ಹಾಗೆ ತೋರಲಿಲ್ಲ. ಓಡಿ ಓಡಿ ಕಾಲು ಕುಸಿಯುವಂತೆನಿಸಿತು. ಆದರೆ ಈಗ ಓಡದೆ ಬೇರೆ ದಾರಿಯೇ ಇಲ್ಲ. ಕೊನೆ ಮುಟ್ಟಲೇಬೇಕು. ಅರ್ಧದಲ್ಲಿ ಸ್ಪರ್ಧೆಯಿಂದ ಹಿಂತಗೆಯುವಂತಿಲ್ಲ. ಓಡುತ್ತ ಓಡುತ್ತ ಇನ್ನೇನು ಕಾಡಿನ ಅಂಚು ತಲುಪಿಯೇ ಬಿಟ್ಟಿತು. ಇನ್ನು ಯಾರೂ ಏನೂ ಮಾಡುವಂತಿಲ್ಲ ಎಂದುಕೊಳ್ಳುತ್ತಿರುವಂತೆಯೇ ಕೇಳಿಸಿತು ಗುಂಡಿನ ಸಪ್ಪಳ-ಒಂದರ ಹಿಂದೆ ಒಂದರಂತೆ. ವಿನಯಚಂದ್ರ ಕುಸಿದು ಬಿದ್ದ. ಅವನ ತಲೆಯ ಒಂದು ಭಾಗ ಒಡೆದು ಚೂರುಚೂರಾಗಿತ್ತು. ಸಾಯುವ ಕ್ಷಣದಲ್ಲಿ ಅವನ ಮನಸ್ಸಿಗೆ ಬಂದ ವಿಚಾರವೆಂದರೆ-ಪ್ರತಿಭಟಿಸುವ ಒಂದೇ ಒಂದು ಅವಕಾಶವನ್ನು ಕೂಡ ತಾನು ಉಪಯೋಗಿಸುಕೊಳ್ಳಲಿಲ್ಲವಲ್ಲ, ಎಂದು.
ಗುಂಡು ಹಾರಿಸಿದವರು ಅವನನ್ನು ಸಮೀಪಿಸಿ ಇನ್ನೊಂದು ಮಗ್ಗುಲಿಗೆ ಹೊರಳಿಸಿದರು. ನಂತರ ಅವರು ಆ ಭಾಗಕ್ಕೂ ಒಂದು ರೌಂಡ್ ಗೋಲಿಗಳನ್ನು ತುರುಕಿಸಿ ಕಾಡಿನ ಮೌನವನ್ನು ಪುನಃಕಲಕಿದರು.
*****