ಸಣ್ಣ ಬಾಲಕರೋ ಮಹಮ್ಮದ ಹನೀಪಸಾಹೇಬರೋ || ಪ ||
ತಾಯಿ ದೂತನು ಕೇಳಲಿಲ್ಲ
ಊಟ-ಉಡುಗರಿ ಮಾಡಲಿಲ್ಲ
ನಿತ್ಯ ಕುಡಿವರೋ ಹಾಲ
ಮಹಮ್ಮದ ಹನೀಪಸಾಹೇಬರೋ || ೧ ||
ತೋಟದೊಳಗಿನ ಕಲ್ಲು ತೆಗದು
ನೀರು ಕುಡಿದು ಕೆಡಿಸ್ಯಾರಲ್ಲ
ಸುದ್ದಿಕೇಳಿ ಬಂದು ಮೌಲಾ
ವಾದಹಾಕ್ಯಾರು ಧೀರಶರಣ || ೨ ||
ತೋಟದೊಳಗೆ ತಂದೆ ಮಗನು
ಕುಸ್ತಿಯನ್ನು ಹಿಡಿದಾರಲ್ಲಾ
ಎತ್ತಿ ಒಗದಾನೋ ಹಜರತ್ ಆಲಿ ಮೌಲಾ
ಮಹಮ್ಮದ ಹನೀಪಸಾಹೇಬರೋ || ೩ ||
ಕೈಯ ಒಳಗಿನ ಸಿಖವನೋಡಿ
ಮಗನು ಆಂತ ತಿಳಿದರಲ್ಲಾ
ಒಪ್ಪಿಕೊಂಡಾನೋ ಹಜರತ್ ಅಲಿ ಮೌಲಾ
ಮಹಮ್ಮದ ಹನೀಪಸಾಹೇಬರೋ || ೪ ||
ವಸುಧಿಯೊಳಗ ಶಿಶುವಿನಾಳ-
ಧೀಶನ ಕರುಣ ಇವರ ಮ್ಯಾಲ
ನಿತ್ಯಮಾಡುವೆ ಅವರ ಧ್ಯಾಸ
ಮಹಮ್ಮದ ಹ್ಲನೀಪಸಾಹೇಬರೋ || ೫ ||
*****