ಯಾವುದೊ ಒಂದು ಬೆಟ್ಟದ ಗರ್ಭದಿಂದ- ಅರಣ್ಯದ ಒಡಲಿನಿಂದ ಎಳೆಯಾಗಿ ಹುಟ್ಟುವ ನೀರೆ ಹರಿವು, ನಂತರದಲ್ಲಿ ಸಣವೂ ಸಣ್ಣ ಜಲಮೂಲಗಳ ಅರಗಿಸಿಕೊಳ್ಳುತ್ತ – ತನ್ನ ಹರಿವಿನುದ್ದಕ್ಕೂ ಹಸಿರನ್ನು ಸೃಷ್ಟಿಸುತ್ತ ಜೀವಸೆಲೆಯನ್ನು ಪೋಷಿಸುತ್ತ ಸಾಗುತ್ತ ಅಂತಿಮವಾಗಿ ಸಾಗರದಲ್ಲಿ ಕೊನೆಗೊಳ್ಳುವ ಪರಿ ವಿಸ್ಮಯ ಹುಟ್ಟಿಸುತ್ತದೆ. ನೀರಿನ ಪ್ರಯಾಣದ ಈ ಘಟ್ಟಗಳು ಪ್ರಕೃತಿಯ ಸುಸಂಬದ್ಧ ಜೋಡಣೆಯ ಚಿತ್ರದಂತೆ ಕಾಣುತ್ತದೆ. ಪ್ರಕೃತಿಯ ಇನ್ನೊಂದು ಚಿತ್ರವಾದ ಮನುಷ್ಯ ಕೂಡ ನದಿಯ ಒಡಲಿನ ಹರವಿನಲ್ಲಿಯೇ ಬೆಳೆದವನು. ನದಿಪಾತ್ರದಲ್ಲಿಯೇ ನಾಗರಿಕತೆಗಳು ಮೊಳೆತಿವೆ, ವಿಕಾಸ ಹೊಂದಿವೆ, ಅವಸಾನವನ್ನೂ ಕಂಡಿವೆ. ಆಗೆಲ್ಲ ಜನ ಗುಂಪು ಗುಂಪಾಗಿ ನದಿ ತೀರಗಳಲ್ಲಿ ವಾಸಿಸುತ್ತಿದ್ದರು. ನದಿಗೆ ಅಂಟಿಕೊಂಡೇ ಬದುಕುತ್ತಿದ್ದರು. ಜನಸಂಖ್ಯೆ
ಸ್ಪೋಟಿಸುತ್ತಾ ಹೋದಂತೆ ನದಿಪ್ರಾಂತಗಳಿಂದ ದೂರದ ಪ್ರದೇಶಗಳಲ್ಲಿ ನೆಲೆ ಕಂಡುಕೊಳ್ಳುವುದು ಜನರಿಗೆ ಅನಿವಾರ್ಯವಾಗಿತ್ತು. ಇದೆಲ್ಲ ಹಳೆಯ ಕತೆ. ನಾಗಿರಿಕತೆಯ ಆರಂಭದ ದಿನಗಳಲ್ಲಿ ನದಿ ಬಯಲುಗಳಿದ್ದಲ್ಲಿಗೆ ಹೋಗಿ ನೆಲೆ ಕಂಡುಕೊಳ್ಳುತ್ತಿದ್ದ ಮನುಷ್ಯ, ಆಧುನಿಕ ನಾಗರಿಕತೆಯ ಇವತ್ತಿನ ಸಂದರ್ಭದಲ್ಲಿ ತಾನು ಇದ್ದಲ್ಲಿಗೇ ನದಿಗಳನ್ನು ತಿರುವಿಕೊಳ್ಳುವ ಪ್ರಯತ್ನದಲ್ಲಿದ್ದಾನೆ. ಅಂದರೆ ನದಿಗಳನ್ನು ಪಳಗಿಸಲು ನಡೆಸಿದ್ದಾನೆ.
ನಾಗರಿಕತೆಯ ಹಾದಿಯುದ್ದಕ್ಕೂ ನದಿಯೊಂದಿಗಿನ ಮನುಷ್ಯನ ಬಾಳುವೆ ಸೌಹಾರ್ದಯುತವಾಗಿಯೇನೂ ಇಲ್ಲ. ನದೀಪ್ರಾಂತಗಳಲ್ಲಿಯೇ ಅರಳುತ್ತಿದ್ದ ಮನುಷ್ಯನ
ಬದುಕು, ನದಿಪ್ರಾಂತಗಳಲ್ಲಿಯೇ ಮಣ್ಣಾದ ಉದಾಹರಣೆಗಳು ಸಾಕಷ್ಟು. ತೀರಾ ಈಚಿನ ದಿನದವರೆಗೂ ಮನುಷ್ಯನ ಕಾಡುವ ಅತಿ ದೊಡ್ಡ ಪ್ರಕೃತಿ ವಿಕೋಪಗಳಲ್ಲೊಂದಾಗಿ ನದಿ ಪ್ರವಾಹ ಪರಿಗಣಿತವಾಗಿತ್ತು – ಕಾಲ ಬದಲಾಗಿದೆ: ಪ್ರವಾಹದಿಂದ ಬಚಾವಾಗಲು ಮನುಷ್ಯ ಹಲವು ದಾರಿ ಹುಡುಕಿಕೊಂಡಿದಿದ್ದಾನೆ. ಈಗೇನಿದ್ದರೂ ನದಿಯಲ್ಲಿ ನೀರು ಇಳಿಮುಖವಾದಾಗಲೇ ಆತಂಕ ಹೆಚ್ಚುತ್ತದೆ. ನೀರು ಕಡಿಮೆಯಾದಾಗಲೆಲ್ಲ ಜನ ತಮ್ಮವರದೇ ಜುಟ್ಟು ಹಿಡಿದುಕೊಳ್ಳುತ್ತಿದ್ದಾರೆ. ರಾಜ್ಯಗಳು ಕೋರ್ಟು ಕಟ್ಟೆ ಹತ್ತುತ್ತಿವೆ.
ನದಿ ನೀರು ಹಂಚಿಕೆ ವಿವಾದ ಮಾಹಿತಿ ತಂತ್ರಜ್ಞಾನ ಯುಗದ ನಾಗರಿಕತೆಗೆ ಎದುರಾಗಿರುವ ಬಹುದೊಡ್ಡ ಸವಾಲು. ಒಂದು ಪ್ರದೇಶದ ಸಿರಿ ಸಂಮೃದ್ಧಿಗೆ ಕಾರಣವಾಗುವ ನದಿಗಳು ಅಶಾಂತಿಗೂ ಕಾರಣವಾಗುತ್ತಿವೆ. ನೀರಿಗಾಗಿ ರಕ್ತ ಹರಿಯುವುದು ಮಾಮೂಲಿ ಅನ್ನುವಂತಾಗಿದೆ. ನದಿಗಳ ಮೇಲೆ ಹೆಚ್ಚುತ್ತಿರುವ ಒತ್ತಡ ಕೂಡ ಸಮಸ್ಯೆಯ ತೀವ್ರತೆಗೆ ಕಾರಣವಾಗಿದೆ.
ಹೊನ್ನು ಮಣ್ಣು ಧರ್ಮದ ಕಾರಣಗಳಿಗಾಗಿ ದೇಶ ಹೊರಗಿನ ಶತ್ರುಗಳಿಂದ ಅಪಾಯವನ್ನೆದುರಿಸುವುದು ಸಹಜ. ಆದರೆ, ಅದೇ ಕಾಲದಲ್ಲಿ ರಾಜ್ಯಗಳ ನಡುವೆ
ತಲೆದೋರುವ ನದಿ ನೀತು ಹಂಚಿಕೆಯಂಥ ವಿವಾದಗಳು ಆಂತರಿಕ ಅಭದ್ರತೆ ಉಂಟುಮಾಡುತ್ತಿವೆ. ಅಭಿವೃದ್ಧಿ ಚಟುವಟಿಕೆಗಳನ್ನು ಕುಂಠಿತಗೊಳಿಸುತ್ತವೆ.
ಕರ್ನಾಟಕ ಹಾಗೂ ತಮಿಳುನಾಡುಗಳ ನಡುವೆ ಶತಮಾನಕ್ಕೂ ಹೆಚ್ಚು ಕಾಲದಿಂದ ಬಿಗು ವಾತಾವರಣ ಸೃಷ್ಟಿಸಿರುವ ಕಾವೇರಿ ನದಿ ನೀರಿನ ಹಂಚಿಕೆಯ ವಿವಾದ ನಮ್ಮ ಕಣ್ಣೆದುರೇ ಇದೆ. ತೆಲುಗು, ಮಲಯಾಳಿ, ಗುಜರಾತಿ, ಮರಾಠಿ- ಯಾರಾದರೂ ಪರವಾಗಿಲ್ಲ. ಆದರೆ ಕನ್ನಡಿಗ/ತಮಿಳ ಪರಸ್ಪರರ ಹೆಸರೆತ್ತಿದರೆ ಮುಖ ಗಂಟಿಕ್ಕಿಕೊಳ್ಳುತ್ತಾರೆ. ಇಬ್ಬರ ನಡುವೆ ಅಸಮಾಧಾನದ ಹೊಗೆ ವಿನಾಕಾರಣ ಸುಳಿಯುತ್ತಿರುತ್ತದೆ.
ಕಾವೇರಿಯಷ್ಟೇ ಅಲ್ಲ; ದೇಶದ ಅನೇಕ ನದಿಗಳು ವಿವಿಧ ರಾಜ್ಯಗಳ ನಡುವಿನ ಸಂಬಂಧವನ್ನು ಬಿಗುಗೊಳಿಸಿವೆ- ದೆಹಲಿ, ಹರಿಯಾಣ ಮತ್ತು ಉತ್ತರಪ್ರದೇಶಗಳು ಯಮುನಾ ನದಿ ನೀರಿಗಾಗಿ ಜಗಳವಾಡುತ್ತಿದ್ದರೆ, ರಾವಿ ನದಿ ಹೆಸರಲ್ಲಿಹರಿಯಾಣ, ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನ ಹಾಗೂ ಪಂಜಾಬ್ ಪರಸ್ಪರ ಮುನಿಸಿಕೊಂಡಿವೆ. ಕೃಷ್ಣಾ – ಗೋದಾವರಿ ನದಿ ನೀರಿನ ಹಂಚಿಕೆ ಮಹಾರಾಷ್ಟ್ರ ಆಂಧ್ರಪ್ರದೇಶ. ಕರ್ನಾಟಕ, ಮಧ್ಯಪ್ರದೇಶ ಹಾಗೂ ಒರಿಸ್ಸಾಗಳ ನಡುವಿನ ಕಲಹಕ್ಕೆ ಕಾರಣವಾಗಿವೆ.
ನದಿ ನೀರಿನ ಸಮಸ್ಯೆಗೆ ಶಾತ್ವತ ಪರಿಹಾರಗಳೇ ಇಲ್ಲವಾ?
ನದಿ ಇರುವವರೆಗೂ ವಿವಾದ ಇದ್ದೇ ಇರುತ್ತದಾದರೊ, ವಿವಾದವನ್ನು ಸಹಕಾರ ಮನೋಭಾವದಿಂದ ಶಾಂತಿಯುತವಾಗಿ ಹಾಗೂ ನ್ಯಾಯಯುತವಾಗಿ ಬಗೆಹರಿಸಿಕೊಳ್ಳು
ವುದು ಸಾಧ್ಯವಿದೆ. ಹಂಚಿಕೊಳ್ಳುವ ಮನಸ್ಸಿದ್ದಲ್ಲಿ ಮುನಿಸಿಗೆ ಆಸ್ಪದವೇ ಇಲ್ಲ.
ನದಿ ನೀರಿನ ಸಮಸ್ಯೆಗಳಿಗೆ ಪರಿಹಾರವಾಗಿ ಕೆಳಗಿನ ಸಾಧ್ಯತೆಗಳನ್ನು ಪರಿಶೀಲಿಸಬಹುದು- ಅವುಗಳೆಂದರೆ:
ಂ ನದಿ ನೀರಿನ ಮೇಲಿನ ಅವಲಂಬನೆಯನ್ನು ಕನಿಷ್ಠಗೊಳಿಸುವುದು.
ಂ ನದಿ ನೀರು ಹಂಚಿಕೆಯ ನಿರ್ವಹಣೆಯನ್ನು ಆಯಾ ರಾಜ್ಯಗಳ ರೈತರೇ ವಹಿಸಿಕೊಳ್ಳುವುದು. ರಾಜಕಾರಣಿಗಳನ್ನು ದೂರವಿಡುವುದು.
ಂ ಸ್ಥಳೀಯ ಜಲಮೂಲಗಳನ್ನು ಪುನಶ್ಚೇತನಗೊಳಿಸುವುದು.
ಂ ಪರಿಸರವನ್ನು ಸಂರಕ್ಷಿಸುವ ಮೂಲಕ ಮಳೆಯ ಅವಕಾಶಗಳನ್ನು ಹೆಚ್ಚಿಸಿಕೊಳ್ಳುವುದು.
ಂ ಅಂತರ್ಜಲ ವೃದ್ದಿಗೆ ಒತ್ತು.
ಂ ನೀರಿನ ಪೋಲು ತಡೆಗಟ್ಟುವುದು.
ಚರ್ಚೆಯ ಅನುಕೂಲತೆಯ ದೃಷ್ಟಿಯಿಂದ ನದಿ ನೀರಿನ ಹಂಚಿಕೆಯ ಬಿಕ್ಕಟ್ಟಿಗೆ ಉತ್ತರವಾಗಬಲ್ಲ ಮೇಲಿನ ಸಾಧ್ಯತೆಗಳನ್ನು ಪ್ರತ್ಯೇಕವಾಗಿ ಚರ್ಚಿಸುವ ಬದಲು ಒಟ್ಟಿಗೇ ಚರ್ಚಿಸೋಣ. ಮತ್ತೇ ಗಾಂಧಿ ನೆನಪಾಗುತ್ತಾರೆ. ಗಾಂಧಿ ಹೇಳಿಕೊಟ್ಟ `ಸ್ವಾವಲಂಬನೆ’ಯ ಮಂತ್ರ ನೀರಿಗೂ ಆನ್ವಯಿಸುತ್ತದೆ. ನಾವು ನಮ್ಮ ಸ್ಥಳೀಯ ಜಲಮೂಲಗಳನ್ನು ಜೀವಂತ ಇರಿಸಿಕೊಂಡಲ್ಲಿ ನದಿಯ ನೀರಿನ ಹಂಗಿಗೆ ಒಳಪಡಬೇಕಾದ ಅಗತ್ಯವೇ ಇಲ್ಲವೆನ್ನಿಸುತ್ತೆ. ಸ್ಥಳೀಯ ಜಲಮೂಲಗಳನ್ನು ನಿರ್ಲಕ್ಷಿಸಿ ದೂರದ ಜಲ ಸಂಪನ್ಮೂಲಗಳನ್ನು ನಿರೀಕ್ಷಿಸುವುದು ಬಹುತೇಕ ಸಂದರ್ಭಗಳಲ್ಲಿ ತ್ರಿಶಂಕು ಸ್ವರ್ಗದ ಬಯಕೆ. `ನಮ್ಮ ಕಾಲದಾಗಲೆಲ್ಲ ಮಳೆಬೆಳೆ ಕಾಲಕ್ಕೆ ತಕ್ಕಂತೆ ಆಗ್ತಿತ್ತು. ಕಾಲ ಕೆಟ್ಟೋಯ್ತು. ಇವಾಗ ಮಳೆ ಪಂಚಾಂಗವೇ ಬದಲಾಗಿದೆ’ ಎಂದು ಅಜ್ಜನೋ ಅಜ್ಜಿಯೋ ಗೊಣಗಿಕೊಳ್ಳುತ್ತಲೇ ಇರುತ್ತಾರೆ. ಅಜ್ಜನ ಕಾಲದಲ್ಲಿ ಲೆಕ್ಕ ತಪ್ಪದಿದ್ದ ಮಳೆಯ ಪಂಚಾಂಗವೀಗ ಯದ್ದಾತದ್ವಾ ಆಗಿರುವುದಾದರೂ ಏಕೆ? ಉತ್ತರ ಸರಳ: ಅಜ್ಜನ ಕಾಲದಲ್ಲಿ ಹಸಿರು ಬಾವಿ, ಹಳ್ಳಕೊಳ್ಳ, ಕೆರೆಕಟ್ಟೆಗಳು ಪ್ರತಿ ಊರಿನಲ್ಲೂ ಇದ್ದವು- ಈಗ ಕಾಡು ನಾಡಾಗಿದೆ- ಕೆರೆಯಿದ್ದ ಜಾಗದಲ್ಲಿ ಬಡಾವಣೆಯಿದೆ. ಕಾಡಿದ್ದ ಜಾಗದಲ್ಲಿ ಜಲಾಶಯವಿದೆ. ಪರಿಣಾಮವಾಗಿ ಮಳೆಯ ಬದಲು ಆಮ್ಲದ ಮಳೆ ಸುರಿಯುವ ಸಂದರ್ಭ ಎದುರಿಗಿದೆ.
ಸ್ಥಳೀಯ ಜಲಮೂಲಗಳ ಪ್ರಾಮುಖ್ಯತೆಯನ್ನು ತುಮಕೂರು ಜಿಲ್ಲೆಯ ಶಿರಾ ಪಟ್ಟಣದ `ಜಾಜಮ್ಮಕಟ್ಟೆ’ಯ ಉದಾಹರಣೆಯಿಂದ ಹೆಚ್ಚು ಸ್ಪಷ್ಟಪಡಿಸಿಕೊಳ್ಳಬಹುದು. ಜಾಜಮ್ಮ ಎನ್ನುವ ಹೆಣ್ಣುಮಗಳು ಕಟ್ಟಿಸಿದ, `ಜಾಜಿಕಟ್ಟೆ’ ಎಂದು ಕರೆಸಿಕೊಳ್ಳುವ ಈ ಸಣ್ಣಕೆರೆಗೆ ನೀರಿನ ಮೂಲ ಎರಡು ಸಣ್ಣ ಹಳ್ಳಗಳು- ಮಳೆ ಬಿದ್ದಾಗ ಮಾತ್ರ ಜೀವಗೊಳ್ಳುವ ಈ ಹಳ್ಳಗಳ ನೀರಿನಿಂದಲೇ ಜಾಜಿಕಟ್ಟೆ ನೀರು ಕಾಣಬೇಕು- ಕಟ್ಟೆಯಲ್ಲಿನೀರಿದ್ದಾಗ, ಕಟ್ಟೆಗೆ
ಹೊಂದಿಕೊಂಡ ಬಡಾವಣೆಗಳಲ್ಲಿ ಅಂತರ್ಜಲ ಸಮೃದ್ಧವಾಗಿರುತ್ತದೆ. ಕೊಳವೆಬಾವಿಗಳಲ್ಲಿ ನೀರು ಕಾಣಿಸುತ್ತದೆ. ಬಟ್ಟೆ ತೊಳೆಯುವ ಹೆಣ್ಣುಮಕ್ಕಳಿಗೆ, ದನಕರುಗಳ ಮೈ ತೊಳೆಯುವ ಮಂದಿಗೆ, ವಾಹನಗಳ ಗಲೀಜು ತೊಳೆಯುವವರಿಗೆ, ಮೀನು ಹಿಡಿಯುವವರಿಗೆ, ಈಜುವವರಿಗೆ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಕಟ್ಟೆಯ ನೀರು ಬಳಕೆಯಾಗುತ್ತದೆ. ಕಟ್ಟೆಯಲ್ಲಿ ನೀರು ಬತ್ತಿದಾಗ ಅಂತರ್ಜಲ ಕಡಿಮೆಯಾಗಿ ಕೊಳವೆಬಾವಿಗಳು ಬತ್ತುತ್ತವೆ.
ಇದು ಜಾಜಮ್ಮನ ಕಟ್ಟೆಯ ನೀರಿನ ಪಂಚಾಂಗ. ಇವತ್ತು ಏನಾಗಿದೆಯೆಂದರೆ- ಕಟ್ಟೆಗೆ ನೀರು ಪೂರೈಸುತ್ತಿದ್ದ ಹಳ್ಳಗಳು ಎದ್ದುನಿಲ್ಲುತ್ತಿರುವ ಆಧುನಿಕ ಬಡಾವಣೆಗಳಲ್ಲಿ ಮಾಯವಾಗುತ್ತಿವೆ. ಒಂದು ಹಳ್ಳ ಹೆಚ್ಚೂ ಕಮ್ಮಿ ನಾಶವಾಗಿದೆ. ಇನ್ನೊಂದು ಹಳ್ಳ ದಿನ ಎಣಿಸುತ್ತಿದೆ. ಪರಿಣಾಮವಾಗಿ ಕಟ್ಟೆಗೆ ನೀರಿನ ವರಮಾನ ತಗ್ಗಿದೆ. ಉಳಿದಿರುವ ಹಳ್ಳ ಪೂರ್ತಿ ನಾಶವಾದಲ್ಲಿ ಕಟ್ಟೆಯೂ ನಾಶವಾಗುತ್ತದೆ. ಸ್ಥಳೀಯ ಜಾಜಿಕಟ್ಟೆಯನ್ನು ನಿರ್ಲಕ್ಷಿಸಿದ ಶಿರಾದ ಜನತೆ ನೀರಿಗಾಗಿ ಈಗ ದೂರದ ಹೇಮಾವತಿ ಹಾಗೂ ಗಾಯತ್ರಿಗಳತ್ತ ಕಣ್ಣು ಹರಿಸಿದ್ದಾರೆ. ಹೇಮಾವತಿ ಬಲು ದೂರ. ಇಲ್ಲಿಗೆ ಬರುವ ವೇಳೆಗೆ ಸಣ್ಣಗಾಗುತ್ತಾಳೆ.
ಸಮೀಪದ ಗಾಯತ್ರಿ ಜಲಾಶಯದಿಂದ ಶಿರಾಕ್ಕೆ ನೀರು ಹರಿಸಲು ಗಾಯತ್ರಿ ಕೊಳ್ಳದ ಜನತೆ ಸುತಾರಾಂ ಒಪ್ಪುತ್ತಿಲ್ಲ ಇದು ಶಿರಾ ಪಟ್ಟಣದ ಕತೆ ಮಾತ್ರವಲ್ಲ ರಾಜ್ಯದ ದೇಶದ ಬಹುತೇಕ ಪಟ್ಟಣ ಗ್ರಾಮಗಳು ಸ್ಥಳೀಯ ಜಲಮೂಲಗಳನ್ನು ನಾಶ ಮಾಡಿಕೊಂಡು, ದೂರದ ಜಲ ಸಂಪನ್ಮೂಲಗಳ ನಿರೀಕ್ಷೆಯಲ್ಲಿವೆ. ದೂರದ ನೀರು ಬಹು ಸಿಹಿ!
ಮಿತಿಮೀರಿ ಬಳಸಿದರೆ ಎಲ್ಲವಸ್ತುಗಳಂತೆ ನೀರೂ ಮುಗಿಯುತ್ತದೆ ಅನ್ನುವ ಪ್ರಾಥಮಿಕ ಪಾಠವೇ ನಮ್ಮಲ್ಲಿ ಬಹುತೇಕ ಮಂದಿಗಿಲ್ಲ. ಆಧುನಿಕರಾಗುತ್ತಾ ಹೋದಂತೆ ನೀರಿನ ಅಪಬಳಕೆಯೂ ಹೆಚ್ಚುತ್ತಿದೆ. ಒಂದೆಡೆ ಕುಡಿಯುವ ನೀರಿಗಾಗಿ ಜನ ಮೈಲುಗಟ್ಟಲೆ ಕೊಡ ಹಿಡಿದು ದಣಿಯುತ್ತಿದ್ದರೆ, ಇನ್ನೊಂದೆಡೆ ಆಧುನಿಕ ಕಮೋಡ್ಗಳಲ್ಲಿಸಾಕಷ್ಟು ನೀರು ಚರಂಡಿ ಸೇರುತ್ತಿದೆ. ಇದರ ಜೊತೆಗೆ ಬೃಹತ್ ಕೈಗಾರಿಕೆಗಳು ನೀರನ್ನು ನುಂಗುವುದರೊಂದಿಗೆ, ನೀರಿನ ಮೂಲಗಳನ್ನೂ ವಿಷಯುಕ್ತಗೊಳಿಸುತ್ತಿವೆ. ನೀರಿನ ದುಂದು ತಡೆಗಟ್ಟಿದಲ್ಲಿ ನೀರಿನ ಸಮಸ್ಯೆ ಕಿಂಚಿತ್ತಾದರೂ ಕಡಿಮೆಯಾಗುತ್ತದೆ. ಭಾರತಕ್ಕಿಂಥ ಜಲ ಸಂಪನ್ಮೂಲ ತೀರಾ ಕಡಿಮೆಯಿರುವ ಅನೇಕ ದೇಶಗಳಲ್ಲಿ ನೀರು ಒಂದು ಸಮಸ್ಯೆಯೇ ಅಲ್ಲ. ಇಸ್ರೇಲ್ ಅಂಥ ದೇಶಗಳ ಜನ ಆಧುನಿಕ ನೀರಾವರಿ ಪದ್ದತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೀಮಿತ ಜಲ ಸಂಪನ್ಮೂಲಗಳನ್ನು ಅದ್ಭುತವಾಗಿ ದುಡಿಸಿಕೊಳ್ಳುತ್ತಿದ್ದಾರೆ.
ನೀರಿನ ಏಕೈಕ ಮೂಲ ಮಳೆ. ಆದರೆ ಮಳೆಯೇ ಕಡಿಮೆಯಾಗುತ್ತಿದೆಯಲ್ಲ. ಒಂದೆಡೆ ಜಲಾಶಯಗಳನ್ನು ನಿರ್ಮಿಸಲು ಕಾಡು ಕಡಿಯುತ್ತೇವೆ. ಜಲಾಶಯಗಳಿಂದ
ನಿರ್ವಸಿತರಾದವರಿಗೆ ಪುನರ್ವಸತಿ ಕಲ್ಪಿಸಲು ಇನ್ನೊಂದೆಡೆ ಕಾಡು ಸವರುತ್ತೇವೆ. ಕ್ಕೆಗಾರಿಕೆ, ನಗರೀಕರಣ ಕಾರಣಗಳಿಗಾಗಿಯೂ ಕಾಡು ಬಯಲಾಗುತ್ತದೆ. ಕಾಡೆಲ್ಲ ಬಯಲಾದಂತೆ ಮಳೆ ಮರೀಚಿಕೆಯಾಗುತ್ತದೆ. ಸಹ್ಯಾದ್ರಿಯಲ್ಲಿ ಹಸುರು ಕಡಿಮೆಯಾಗುತ್ತಾ ಹೋದಂತೆ ಕರಾವಳಿಯಲ್ಲಿ ಮಳೆ ಕಡಿಮೆಯಾಗುತ್ತದೆ.
ನಮ್ಮ ಹಿರೀಕರ ಬದುಕನ್ನು ಗಮನಿಸಿ: ಮಳೆಯನ್ನೇ ನಂಬಿದ್ದ ರೈತರು ನೀರು ಸಂಗ್ರಹಕ್ಕಾಗಿ ಊರಿಗೊಂದು ಕೆರೆ ನಿರ್ಮಿಸಿದ್ದರು (ನದಿಗಳು ಇಲ್ಲದ ಪ್ರದೇಶಗಳಲ್ಲೇ ಕೆರೆಗಳು ಹೆಚ್ಚಾಗಿವೆ). ಪ್ರತಿ ಊರಿನ ಕೆರೆಯ ನಿರ್ವಹಣೆಗೂ ಸ್ಥಳೀಯವಾದ ನೀರಗಂಟಿ ಎನ್ನುವ ಅಧಿಕಾರಿ ಕೆರೆಯ ನೀರಿನ ನಿರ್ವಹಣೆ ಮಾಡುತ್ತಿದ್ದ. ಬುಲ್ಡೋಜರು, ಕ್ರೇನು, ಟ್ರಾಕ್ಟರು ಇಲ್ಲದ ದಿನಗಳಲ್ಲಿ ಕೇವಲ ಶ್ರಮ ಶಕ್ತಿಯನ್ನೇ ನಂಬಿಕೊಂಡಿದ್ದ ರೈತಾಪಿ ವರ್ಗ ಕೆರೆಗಳನ್ನು ನಿರ್ಮಿಸಿಕೊಂಡಿದ್ದರು. ಕೆರೆಗೆ ಅಪಾಯ ಉಂಟಾದಾಗ ಊರಿಗೆ ಊರೇ ಶ್ರಮದಾನಕ್ಕೆ ಮುಂದಾಗುತ್ತಿತ್ತು. ಇವತ್ತೇನಾಗಿದೆ ನೋಡಿ : ಪೂರ್ವಿಕರು ಕಟ್ಟಿದ
ಬಹುತೇಕ ಕೆರೆಗಳು ಊರುಗಳಾಗಿವೆ. ಅಳಿದುಳಿದ ಕೆರೆಗಳು ಹೂಳು ತುಂಬಿಕೊಂಡು ಕಳೆಗಳ ತವರಾಗಿವೆ. ಹೊಸ ಕೆರೆ ಕಟ್ಟುವುದಿರಲಿ. ಇರುವ ಕೆರೆಯನ್ನು ಉಳಿಸಿಕೊಳ್ಳುವುದೂ ಸಾಧ್ತವಾಗುತ್ತಿಲ್ಲ(ಬೆಂಗಳೂರಿನ ಕೆರೆಗಳ ಸಂಖ್ಯೆ ೮೬ ರಿಂದ ೯ ಕ್ಕಿಳಿದಿದೆ. ಅಸಲಿಗೆ ಕೆರೆಯ ನೀರನ್ನು ಬಳಸುವ ನಾವು ಕೆರೆಯ ರ್‍ಅಕ್ಷಣೆ ನಮಗೆ ಸಂಬಂಧಿಸಿದ್ದೇ ಅಲ್ಲ ಎಂದು ಭಾವಿಸುತ್ತೇವೆ, ಏಕೆಂದರೆ, ನಮ್ಮೆಲ್ಲರ ಪ್ರತಿನಿಧಿಯಾಗಿ ಸರ್ಕಾರವಿದೆ. ಸರ್ಕಾರಕ್ಕೆ ಸಾಲ ಕೊಡಲು
ವಿಶ್ವಬ್ಯಾಂಕಿದೆ. ಹಾಗಾಗಿ ಹೂಳು ತೆಗೆಯುವ ಹಾಗೂ ನೆರೆ ರಾಜ್ಯದ ತಕರಾರಿನಿಂದಾಗಿ ಕಾಮಗಾರಿ ಅರ್ಧದಲ್ಲೇ ನಿಲ್ಲುವ ನಾಟಕಗಳು ಇಲ್ಲಿ ನಿರಂತರವಾಗಿರುತ್ತವೆ.
ನೀರಿನ ಸಮಸ್ಯೆ ಭುಗಿಲೆದ್ದಾಗಲೆಲ್ಲ ಕುರ್ಚಿಯಲ್ಲಿ ಕೂತ ಪ್ರಭುಗಳು ದೂರದ ನದಿ ಸಂಪನ್ಮೂಲಗಳ ಕನಸನ್ನು ಜನರ ಕಣ್ಣಿಗೆ ತುಂಬುವ ಯಶಸ್ವಿ ನಾಟಕ ಆಡುತ್ತಲೇ ಬಂದಿದ್ದಾರೆ. ಆ ಯೋಜನೆ ಯಶಸ್ವಿಯಾಗುತ್ತದಾ? ಯೋಜನೆಗೆ ಅಗತ್ಯವಾದ ಸಂಪನ್ಮೂಲಗಳ ಸಂಗ್ರಹಣೆ ಸಾಧ್ಯವಾ? ಉಹ್ಞುಂ. ಪ್ರಶ್ನೆ ಕೇಳುವುದು ಯುಗಧರ್ಮವೇ ಅಲ್ಲ.
`ಗಂಗಾ-ಕಾವೇರಿ’ ಜೋಡಣೆ ರಾಜಕಾರಣಿಗಳಿಗೆ ಸಿಕ್ಕಿರುವ ಹೊಸ ಮಳೆಬಿಲ್ಲು ದಕ್ಷಿಣ ಭಾರತದಲ್ಲಿ ತಲೆದೋರಿರುವ ನೀರಿನ ಕೊರತೆ ಹಾಗೂ ಕಾವೇರಿ ವಿವಾದದಿಂದಾಗಿ ಗಂಗಾ-ಕಾವೇರಿ ಜೋಡಣೆ ಯೋಜನೆಗೆ ಚಾಲನೆ ಸಿಕ್ಕಿದೆ. ಸುಪ್ರೀಂಕೋರ್ಟ್ ಕೂಡ ಯೋಜನೆಯನ್ನು ತ್ವರಿತವಾಗಿ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಯೋಜನೆ ಪೂರ್ಣಗೊಂಡಲ್ಲಿ ಇಡೀ ಭಾರತದ ಭೂಪಟದಿಂದಲೇ ನೀರಿನ ಸಮಸ್ಯೆ ಇಲ್ಲವಾಗುತ್ತದಂತೆ. ರೈತರ ಮೊಗದಲ್ಲಿನ ನಗು ಮಾಸುವುದೇ ಇಲ್ಲವಂತೆ. ಹೊಲಗಳಲ್ಲಿನ ಹಸುರು ಮಂಕಾಗುವುದೇ ಇಲ್ಲವಂತೆ. ಅಂಕಿ ಅಂಶಗಳಲ್ಲಿ ಹೇಳುವುದಾದರೆ – ೧೮೫ ಕೋಟಿ ಎಕರೆ ಭೂಮಿ ಜಲಾನಯನ ವ್ಯಾಪ್ತಿಗೆ, ವಿವಿಧ ವಿದ್ಯುತ್ ಯೋಜನೆಗಳಿಂದ ಅಂದಾಜು ೨೦.೭೫ ಲಕ್ಷ ಮೆಗಾವ್ಯಾಟ್ ವಿದ್ದುತ್ ಉತ್ಪಾದನೆ ನದಿಗಳ ಜೋಡಣೆಯಿಂದ ಸಾಧ್ಯವಾಗುತ್ತದೆ. ಅಂದಹಾಗೆ, ಈ ಯೋಜನೆಗೆ ಖರ್ಚಾಗುವುದು ೧ ಲಕ್ಷ ಕೋಟಿ ರುಪಾಯಿಗಳು ಮಾತ್ರ.
ದುಡ್ಡುಸಂಗ್ರಹವಾಗಿ ಯೋಜನೆ ಪೂರ್ಣವಾಗುತ್ತದೆಂದೇ ಇಟ್ಟುಕೊಳ್ಳೋಣ. ಆದರೆ, ಈ ಯೋಜನೆ ಪೂರ್ಣಗೊಳ್ಳಬೇಕಾದರೆ ಕಡಿಯಬೇಕಾದ ಕಾಡೆಷ್ಟು? ಪುನರ್ವಸತಿಗೊಳ್ಳಬೇಕಾದ ಜನರೆಷ್ಟು? ಯೋಜನೆಗೆ ಅಗತ್ಯವಾದ ಸಂಪನ್ಮೂಲ ಸಂಗ್ರಹಣೆ ಹೇಗೆ? ಜೋಡಣೆಯಿಂದ ಕುಷ್ಟಗಿಯ ರೈತನಿಗೂ ನೀರು ಸಿಗುತ್ತಾ? ಗಂಗೆಯಲ್ಲಿ ನೀರಿದೆಯಾ? ಗಂಗೆಯನ್ನು ಕಾವೇರಿಗೆ ಕೂಡಿಸಿದರೆ ಉತ್ತರ ಭಾರತದ ನೀರಾವರಿ ಪಂಚಾಂಗದಲ್ಲಿ ವ್ಯಾತ್ಯಯ ಉಂಟಾಗುವುದಿಲ್ಲವಾ? ತೀರಾ ಉತ್ತರ ದಕ್ಷಿಣ ಅನ್ನುವಷ್ಟು ಸಮುದ್ರ ಮಟ್ಟಗಳ ಎತ್ತರದ ವ್ಯತ್ಯಾಸದ ಭಿನ್ನತೆಯನ್ನು ಹೊಂದಿರುವ ಗಂಗೆ-ಕಾವೇರಿಯನ್ನು ಒಂದು ರೇಖೆಗೆ ತರುವುದಾದರೂ ಹೇಗೆ? ನದಿಗಳ ದಿಕ್ಕು ಪಲ್ಲಟಗೊಳಿಸುವುದನ್ನು ಪ್ರಕೃತಿ ಒಪ್ಪುತ್ತದಾ? ಗಂಗೆಯ ಮಲಿನತೆ ಕಾವೇರಿಯನ್ನು ಮುಟ್ಟದೇ? ಪ್ರಶ್ನೆ ಪತ್ರಿಕೆಯನ್ನು ಬಿಡಿಸಲು
ಹೊರಟರೆ ಗಂಗಾ-ಕಾವೇರಿ ಜೋಡಣೆಯ ಯೋಜನೆ ಮರೀಚಿಕೆಯಾಗಿ ಕಾಣುತ್ತದೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಹುಂಬತನವಾಗಿ ಕಾಣುತ್ತದೆ. ಇಷ್ಟಕ್ಕೂ ಗಂಗಾ-ಕಾವೇರಿಯನ್ನು ಕೂಡಿಸುವುದಾದರೂ ಯಾಕಾಗಿ? ನಮ್ಮಲ್ಲಿನ ಜಲಮೂಲಗಳನ್ನು ಪುನಶ್ಚೇತನಗೊಳಿಸಿದರೆ ನೀರಿನ ಸಮಸ್ಯೆ ಪರಿಹಾರವಾಗದೆ? ಎನ್ನುವ ಪ್ರಶ್ನೆಗಳನ್ನೂ ನಾವು ಕೇಳಿಕೊಳ್ಳಬೇಕು. ಒಂದು ಅಂದಾಜಿನ ಪ್ರಕಾರ- ಕರ್ನಾಟಕದ ವಾರ್ಷಿಕ ಜಲ ಸಂಪನ್ಮೂಲ ೩೪೦೦ ಟಿಎಂಸಿ. ಇದರಲ್ಲಿ ಅರ್ಧದಷ್ಟನ್ನೂ ಬಳಸಿಕೊಳ್ಳುತ್ತಿಲ್ಲ. ಪಶ್ಚಿಮ ವಾಹಿನಿ ನದಿಗಳ ಬಹೂಪಾಲು ನೀರು ಸಮುದ್ರ ಸೇರುತ್ತಿದೆ. ರಾಜ್ಯದ ಕೆರೆಗಳ ಹೂಳು ಹೆಚ್ಚಾಗುತ್ತಲೇ ಇದೆ. ಜಲಾಶಯಗಳ ನಿರ್ವಹಣೆಯೂ ಸಮರ್ಪಕವಾಗಿಲ್ಲ ಇದರ ಜೊತೆಗೆ ನೀರಾವರಿ ಯೋಜನೆಗಳೂ ಕುಂಟುತ್ತಿವೆ.
ನದಿಗಳ ಜೋಡಣೆಯಿಂದ ಎದುರಾಗುವ ಪುನರ್ವಸತಿಯ ಸಮಸ್ಯೆ ಪರಿಹರಿಸುವುದು ಸುಲಭದ ಮಾತಲ್ಲ ಒಂದೆಡೆ ಜನ ನೆಲೆ ಕಳೆದುಕೊಂಡರೆ, ಇನ್ನೊಂದೆಡೆ ಆ ನೆಲದ ಸಂಸ್ಕೃತಿ ನೀರುಪಾಲಾಗುತ್ತದೆ. ಜನಕ್ಕೆ ಪುನರ್ವಸತಿ ಕಲ್ಪಿಸಿದರೂ ಕಲ್ಪಿಸಬಹುದು, ಸಂಸ್ಕೃತಿಯ ಗತಿ?
***
ಅಂತಿಮವಾಗಿ ಸ್ಥಳೀಯ ಜಲ ಸಂಪನ್ಮೂಲಗಳೇ ನಮ್ಮನ್ನು ಪೊರೆಯಬೇಕೆ ಹೊರತು ದೂರದ ನದಿಯಲ್ಲ! ನಮ್ಮ ಪರಿಸರದಲ್ಲೇ ಇರುವ ಕೆರೆ, ಕಟ್ಟೆ, ನದಿಗಳಿಂದಲೇ ನಮ್ಮ ಮೋಕ್ಷ ಸಾಧ್ಯವಾಗಬೇಕು. ಅದು ಸಾಧ್ಯವಾಗಬೇಕಾದರೆ ಪ್ರಕೃತಿಯನ್ನು ಪ್ರೀತಿಸುವ ಮನಸ್ಸು ನಮ್ಮದಾಗಬೇಕು.
*****