ಆದರೆ ತಕ್ಷಣ ಕಾರ್ಯಪ್ರವೃತ್ತನಾಗುವುದೇ ವಿಹಿತವೆಂದು ಟೆಲಿಫೋನ್ ಡೈರೆಕ್ಟರೀನಲ್ಲಿ ಜಾಯ್ ಇಲೆಕ್ಟ್ರಾನಿಕ್ಸ್ ನ ನಂಬರು ಹುಡುಕಿ ಹಿಡಿದು ಸಂಪರ್ಕ ಸಾಧಿಸಿಲು ಯತ್ನಿಸಿದ. ಆ ಕಡೆಯಿಂದ ಎಂಗೇಜ್ಡ್ ಸದ್ದು ಎಷ್ಟು ಯತ್ನಿಸಿದರೂ ಸಿಗದ ಮೇಲೆ ಮೊಹಿಯುದ್ದೀನನ ನಂಬರುಗಳನ್ನು ಒತ್ತಿದ.
“ಮೊಹಿಯುದ್ದೀನ್ ಇದ್ದಾನೆಯೆ?”
“ಕೋನ್ ಬಾತ್ ಕರ್ರೇ….”
ದೊಡ್ಡದಾಗಿ ಅರಚುವ ಹೆಣ್ಣು ದನಿ . ಮೊಹಿಯುದ್ದೀನನ ಅಮ್ಮ, ಅಕ್ಕ, ತಂಗಿ ಯಾರಾದರೂ ಆಗಿರುವುದು ಸಾಧ್ಯ.
“ನಾನು ವಿನಯಚಂದ್ರ ಅಂತ. ವಿನ್ ಅಂದರೆ ಗೊತ್ತಾಗತ್ತೆ.”
“ವಿನ್.”
“ರಿನ್ನಲ್ಲ. ವಿನ್! ವಿನ್ನಂತ. ವಿ ಫ಼ರ್ ವಿಕ್ಟರಿ!”
“ಅಚ್ಛಾ! ಅವ ಬಂದು ಎಲ್ಲಿಗೋ ಹೊರಟು ಹೋದ, ಈಗ ಐದ್ನಿಮಿಷ ಹಿಂದೆ.”
“ಹೋದನೆ? ಯಾವಾಗ ವಾಪಸು ಬರ್ತಾನೆ?”
“ಗೊತ್ತಿಲ್ಲ, ಯಾವಾಗ ಬೇಕಾದ್ರೂ ಬರಬಹುದು.”
“ಊಟ ಮಾಡ್ಕೊಂಡು ಹೋದ್ನೆ ಅಥವಾ?”
“ಊಟ ಹೊರಗೆಲ್ಲೋ ಮಾಡ್ತೀನಿ ಎಂದಿದ್ದ.”
“ಗಾಡ್!”
“ಕ್ಯಾ?”
“ಏನಿಲ್ಲ, ಗಾಡ್ ಅಂದೆ ಅಷ್ಟೆ. ಈಗೊಂದು ನಂಬರ್ ಕೊಟ್ಟಿರ್ತೇನೆ. ಮೊಹಿಯುದ್ದೀನ್ ಬಂದ ತಕ್ಷಣ ಈ ನಂಬರಿಗೆ ಫೋನ್ ಮಾಡೋಕೆ ಹೇಳ್ತೀರಾ?”
“ಒಂದ್ನಿಮಿಷ. ಕಾಗ್ದ ಪೆನ್ಸಿಲು ತರ್ತೀನಿ.”
ಫೋನನ್ನು ಮೇಜಿನ ಮೇಲಿರಿಸಿದ ಸದ್ದು. ಅದರ ಹಿಂದೆಯೇ ಇತರ ವಿಚಿತ್ರವಾದ ಸದ್ದುಗಳ ಪ್ರಪಂಚ. ಹಪ್ಪಳ ಹುರಿದ ಹಾಗೆ. ಅಥವಾ ಹುರಿ ದಿಟ್ಟುದನ್ನು ಬಡಿದು ಚೂರು ಚೂರು ಮಾಡಿದ ಹಾಗೆ. ಬಾಯಲ್ಲಿ ಹಾಕಿ ಕರುಕಿದ ಹಾಗೆ. ಊಟದ ಸಮಯವಾದ್ದರಿಂದ ಇದ್ದೀತೇ? ಯಾರೋ ಕುರ್ಚಿಗಳನ್ನು ನೆಲದ ಮೇಲೆ ಎಳೆಯುತ್ತಿದ್ದರು. ಅದು ಅತಿ ಕರ್ಕಶವಾದ ಸದ್ದುಗಳನ್ನು ಉಂಟು ಮಾಡುವ ಕ್ರಿಯೆ. ಇದರ ನಡು ನಡುವೆ ಹೆಣ್ಣು ಮಕ್ಕಳು ಮಾತಾಡುವ ಸಂಗೀತಮಯವಾದ ಉರ್ದು. ಹಿನ್ನೆಲೆಯಲ್ಲಿ ಘಜಲಿನ ಲಯ. ಕಾಗದ ಪೆನ್ಸಿಲು ತರ್ತೀನಿ ಎಂದವಳು ತನ್ನನ್ನು ಮರೆತೇ ಬಿಟ್ಟಿರಬಹುದೆ? ಯಾವುದೆ ಘಜಲನ್ನು ಆಸ್ವಾದಿಸುವ ಸ್ಥಿತಿಯಲ್ಲಿ ತಾನೀಗ ಇಲ್ಲವೆಂದು ಆಕೆಗೆ ಹೇಗೆ ತಾನೆ ಗೊತ್ತಾಗಬೇಕು. ಹೀಗಂದುಕೊಳ್ಳುವಷ್ಟರಲ್ಲೇ ಆ ಕಡೆಯಿಂದ ಫೋನ್ ಕೈಗೆತ್ತಿಕೊಂಡ ಸದ್ದು. ಹಿಂದೆಯೇ, “ಆಚ್ಛಾ! ಅಬ್ ಬೋಲಿಯೆ” ಎಂಬ ಕಿವಿಕೊರೆಯುವ ಕೂಗು, ವಿನಯಚಂದ್ರ ಆಕೆಗೆ ನಂಬರ್ ಕೊಟ್ಟು ಎರಡೆರಡು ಬಾರಿ ಅವಳಿಂದ ಹೇಳಿಸಿ, ಸರಿಯಾಗಿಯೆ ಬರಕೊಂಡಿದ್ದಾಳೆ ಎಂದು ಖಚಿತಪಡಿಸಿಕೊಂಡ ಮೇಲೆ, “ಭೂಲ್ ಮತ್ ಜಾಯಿಯೇ” ಎಂದೆಲ್ಲ ಹೇಳಿ ಫೋನು ಕೆಳಗಿರಿಸಿದ. ಜಾಯ್ ಇಲೆಕ್ಟ್ರಾನಿಕ್ಸ್ ಗೆ ಇನ್ನೊಮ್ಮೆ ನಂಬರ್ ಹಚ್ಚಿದರೆ ಅದೇ ಎಂಗೇಜ್ಡ್ ಟೋನು ಬರುತ್ತಿತ್ತು. ವಿನಯಚಂದ್ರನಿಗೆ ವಿಪರೀತವಾದ ಸಿಟ್ಟು ಬಂತು. ಸೂಳೆಮಗ ಇಷ್ಟು ಹೊತ್ತು ಯಾರ ಜತೆಗೆ ಮಾತಾಡ್ತಿದಾನೆ? ಬೇಕಂತಲೆ ಫೋನ್ ರಿಸೀವರನ್ನ ಬದಿಗಿರಿಸಿಕೊಂಡಿರಬೇಕು, ಎನಿಸಿತು.
ಊಟ ಮಾಡಲು ಕರೆದ ತಾಯಿಗೆ ತಕ್ಷಣ ತಾನು ಹೊರಗೆ ಹೋಗೋದಿದೆ, ಯಾವುದೋ ಪ್ರಾಬ್ಲೆಮನ್ನ ಯಾರದೋ ಜತೆ ಚರ್ಚಿಸಬೇಕಾಗಿದೆ ಎಂದು ಹೇಳಿ, ಕೆಟ್ಟು ಹೋದ ರಿಮೋಟನ್ನ ಜೇಬಿನಲ್ಲಿ ಹಾಕಿಕೊಂದು ಹೊರಟ. ಅಪ್ಪ ಇನ್ನೂ ಆಫ಼ೀಸಿನಿಂದ ಬಂದಿಲ್ಲವಾದ್ದರಿಂದ ತಾಯಿ ಹೇಗೂ ಕಾಯೋದು ತಪ್ಪಿದ್ದಲ್ಲ. ಅರ್ಧಗಂಟೆಯಲ್ಲಿ ತಾನು ಮರಳೊಂದು ಸಾಧ್ಯ. ಕಸಿನ್ ಜತೆ ಒಂದು ಇತ್ಯರ್ಥಕ್ಕೆ ಬರದಿದ್ದರೆ ರಾತ್ರಿ ನಿದ್ದೆ ಹತ್ತದೆ ಬಾಲ್ಕನಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಲಿಫ಼್ಟಿಗೆ ಕಾಯದೆ ಎರಡೆರಡು ಮೆಟ್ಟಲುಗಳನ್ನಿಳಿಯುತ್ತ ಕೆಳಕ್ಕೆ ಬಂದು ಸ್ಕೂಟರಿನ ಬಳಿ ತಲುಪಿದಾಗ ಕೀಲಿಕೈ ಮನೆಯಲ್ಲೆ ಬಿಟ್ಟು ಬಂದುದು ನೆನಪಾಯಿತು. ಈ ದಿನ ಎಲ್ಲವೂ ಹೀಗಾಗುತ್ತಿದೆಯಲ್ಲ ಎಂದು ಬೇಸರವೆನಿಸಿತು. ಮತ್ತೆ ಮನೆಗೆ ತೆರಳಿ ಕೀಲಿಕೈ ತಂದು ಸ್ಕೂಟರ್ ಚಾಲೂ ಮಾಡಿದ.
ಹಾಲಿನಂಥ ಮನುಷ್ಯ ಮೊಹಿಯುದ್ದೀನ್. ಅವನಿಗೆ ವಿಷದಿಂಥ ಕಸಿನಿರುವುದು ಸಾಧ್ಯವೆ? ಮಾನವ ಸ್ವಭಾವ ವಂಶಪರಂಪರೆಯಾಗಿ ಬರುವುದೆ ಅಥವ ಪರಿಸರದ ಪ್ರಭಾವದಿಂದ ಬರುವುದೆ : ಸಂತನ ಮಗ ಹಂತಕನಾಗಿರೋದಿಲ್ವೆ? ಹಂತಕನ ಮಗ ಸಂತನಾಗಿರೋದೂ ಸಾಧ್ಯ. ಒಂದೇ ಹೊಟ್ಟೆಯಲ್ಲಿ ಹುಟ್ಟಿದ ಅಣ್ಣ ತಮ್ಮಂದಿರಲ್ಲಿ ಒಬ್ಬ ಸಿವಿಲ್, ಇನ್ನೊಬ್ಬ ಕಿಮಿನಲ್ಲಾಗಿರೋದು ಇದೆ. ಈ ದರಿದ್ರ ಕಸಿನ್ನಿನ ಹಿನ್ನೆಲೆ ಹಾಗಿರಲೂಬಹುದು. ಅವ ಧೂರ್ತನಲ್ದೆ ಇದ್ರೆ ಇಷ್ಟೊಂದು ಬೇಗ ಸ್ವಂತ ಕಾರು, ಮನೆ, ಹೆಂಡತಿ ಹೇಗೆ ಸಂಪಾದಿಸ್ತ ಇದ್ದ? ಒಂದು ವೇಳೆ ಅವ ಧೂರ್ತನೇ ಆಗಿದ್ದರೆ, ಈಗ ತಾನು ಹೋಗಿ ಅವನನ್ನು ಭೇಟಿ ಮಾಡಿ ಉಪಯೋಗವಾದರೂ ಏನು? ನಿಮಗೆ ಹೊಸ ರಿಮೋಟ್ ಕಂಟ್ರೋಲನ್ನೇ ಕೊಟ್ಟಿದ್ದೇನೆ, ನೀವೀಗ ಇಲ್ಲಾಂತ ಹೇಳ್ತಿರೋದು ಬಹಳ ವಿಚಿತ್ರವಾಗಿದೆ, ಮೊದಲೇ ಯಾತಕ್ಕೆ ಖಚಿತಪಡಿಸಿಕೊಂಡಿಲ್ಲ ಎಂದು ಮುಂತಾಗಿ ನನ್ನೇ ಪ್ರಶ್ನಿಸಬಹುದು. ಇದಕ್ಕೆ ನನ್ನಲ್ಲಿ ಉತ್ತರವಿಲ್ಲ. ಉತ್ತರವೆಂದರೆ ಅವನ ಆನೆಸ್ಟಿಯ ವಿರುದ್ಧ ನನ್ನ ಆನೆಸ್ಟಿ, ಅಷ್ಟೆ. ಮಧ್ಯೆ ಯಾರೂ ಇಲ್ಲ, ಮೊಹಿಯುದ್ದೀನ್ ಕೂಡ!
ಕಸಿನ್ನ ಹೇಗೆ ಎದುರಿಸಬೇಕು? ವಿನೀತನಾಗಿ? ಸಭ್ಯ ಗೃಹಸ್ಥನಂತೆ? ನೊಂದ ಗಿರಾಕಿಯಂತೆ? ಅಥವಾ ರೌಡಿಯಂತೆ? ಯಾವುದೂ ತಿಳಿಯದೆ ಪಾರ್ಕಲೇನ್ ಕಾಂಪ್ಲೆಕ್ಸ್ ತಲುಪಿ ನೋಡಿದಾಗ ಇವೆಲ್ಲ ಪ್ರಶ್ನೆಗಳೂ ತಾವೇ ಬಗೆಹರಿದಂತೆ ಜಾಯ್ ಇಲೆಕ್ಟ್ರಾನಿಕ್ಸ್ ಮುಚ್ಚಿದ್ದು ಕಂಡುಬಂತು. ಇನ್ನೂ ಎಂಟೂವರೆಯಾಗಿಲ್ಲ. ಹತ್ತಿರದ ಅಂಗಡಿಗಳು ತೆರೆದೇ ಇವೆ. ಕಸಿನನ ಅಂಗಡಿ ಮಾತ್ರ ಮುಚ್ಚಿ ರಬೇಕಾದರೆ ಏನಿವರ ಅರ್ಥ? ಸ್ಕೂಟರಿನೊಳಗೆ ಪೆಟ್ರೋಲ್ ರಿಸರ್ವಿಗೆ ಬಂದಿತ್ತು. ಅದರ ಹೊಟ್ಟೆಗೆ ಇಂಧನ ಹಾಕಿಸಿಕೊಂಡು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸು ಬರುತ್ತ ಸರೋವರವನ್ನು ಕಂಡು, ಇದಕ್ಕೆ ಅಲ್ಲವೇ ಈ ರಿಮೋಟನ್ನ ಎಸೆದುಬಿಡಬಹುದಾಗಿತ್ತೆಂದು ಮೊಹಿಯುದ್ದೀನ್ ಹೇಳಿದ್ದು, ಎಸೆದೇ ಬಿಡಲೆ ಎಂದು ಯೋಚಿಸಿದ. ಬೇಡ, ಒಂದು ವೇಳೆ ನಾಳೆ ಕಸಿನ್ನನ ಮುಖಾಮುಖಿಯಾಗಬೇಕಿದ್ದರೆ ಇದು ಜತೆಯಲ್ಲಿ ಇರುವುದೇ ಒಳ್ಳಿತೆಂದುಕೊಂಡ.
ಸರೋವರದ ಬಂಡ್ ನ ಮೇಲೆ ಕುಳಿತುಕೊಳ್ಳಬೇಕೆನಿಸಿತು. ಸ್ಕೂಟರನ್ನು ಒಂದೆಡೆ ನಿಲ್ಲಿಸಿ, ಶಿರಸ್ತ್ರಾಣವನ್ನು ಮಧ್ಯಕಾಲೀನ ಯೋಧನ ಹಾಗೆ ಕೈಯಲ್ಲಿರಿಸಿಕೊಂಡು ಬಂಡ್ ನ ಮೇಲೆ ಹಾಕಿದ್ದ ಅನೇಕ ಕಬ್ಬಿಣದ ಸೋಫ಼ಾಗಳಲ್ಲಿ ಒಂದರ ಮೇಲೆ ಕೂತು, ಸುಸ್ತಾಗಿದ್ದ ತನ್ನ ಕಾಲುಗಳನ್ನು ಕಟಕಟೆಯ ಸರಳುಗಳ ಮೇಲೆರಿಸಿದ. ಪ್ಯಾಕೆಟ್ ನಲ್ಲಿದ್ದ ಕೊನೆ ಸಿಗರೇಟನ್ನು ಬಾಯಿಗಿರಿಸಿ, ಬೆಂಕಿ ಹಚ್ಚಲು ತಡಕಿದರೆ ಬೆಂಕಿಪೊಟ್ಟಣ ಕಾಣಿಸಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸಿನಿಮಾಗಳಲ್ಲಿ ಸಂಭವಿಸುವ ಹಾಗೆ ಯಾರೋ ಲೈಟರ್ ತಂದು ಸರ್ರನೆ ಸಿಗರೇಟ್ ಗೆ ಬೆಂಕಿ ತಟ್ಟಿಸಿದರು. ಪಿಂಪ್, ತಲಿಹಿಡುಕ! ಸಂದೇಹವೇ ಇಲ್ಲ. ಜೇಬಿನಿಂದ ಆಲ್ಬಂ ತೆಗೆದು ಮುಂದೆ ಹಿಡಿದ. ನಾಲ್ಕಾರು ಹುಡುಗಿಯರ ಫೋಟೋಗಳು ಅತ್ಯಂತ ರೋಚಕ ಭಂಗಿಗಳಲ್ಲಿ ಕಾಣಿಸಿದುವು.
“ಸಾರ್, ನೀವು ನನ್ನ ಏನು ಬೇಕಾದರೂ ಕರೀರಿ ಪರವಾಯಿಲ್ಲ. ಎಜುಕೇಟೆಡ್ ಮಂದಿಯ ಹಾಗೆ ಕಾಣಿಸ್ತೀರಿ, ಆದ್ದರಿಂದ ನಿಮ್ಮಂಥವರ ಬಯ್ಗುಳ ನನಗೆ ವರಪ್ರಸಾದ. ಆದರೆ ಕೇವಲ ಫೋಟೋ ನೋಡೋದಕ್ಕೆ ನಿಮ್ಮ ಅಭ್ಯಂತರವೇನೂ ಇಲ್ಲವಷ್ಟೆ. ಈ ಫ಼ಸ್ಟ್ ಹುಡುಗಿ ನೋಡಿ. ಈಕೆ ನಗರದ ಪ್ರಸಿದ್ಧ ಕಾಲೇಜೊಂದರಲ್ಲಿ ಓದ್ತಿದಾಳೆ. ವರ್ಷ ಇಪ್ಪತ್ತು. ಇವಳ ಗಲ್ಲದ ಮೇಲಿನ ಮೋಲ್ ನೋಡಿದರ : ಎರಡನೆ ಫೋಟೋದಲ್ಲಿ ಅದು ಇನ್ನಷ್ಟು ಚೆನ್ನಾಗಿ ಕಾಣಿಸ್ತದೆ. ಎರಡನೇ ಹುಡುಗಿ ಹಾಸ್ಪಿಟಲಿನಲ್ಲಿ ನರ್ಸ್. ಕೈ ತೊಳೆದು ಮುಟ್ಟುವಂತಿದ್ದಾಳೆ. ಅವಳ ತಲೆಗೂದಲು ಮೊಣಕಾಲಿತನಕ ಬರುತ್ತದೆ, ನೋಡಿ ಇದು ಹಿಂಬದಿಯ ಫೋಟೋ. ಇಬ್ಬರೂ ಹುಡುಗೀರು ಇಲ್ಲಿಂದ ಬರಿ ಒಂದು ಕಿಲೋಮೀಟರ್ ದೂರದಲ್ಲಿದ್ದಾರೆ….”
ಅವನ ಮಾತುಗಳನ್ನು ತಡೆಯಬೇಕಾದ ಪ್ರಸಂಗ ಬರಲಿಲ್ಲ. ಟ್ರಾಫ಼ಿಕ್ ಪೋಲೀಸನೊಬ್ಬ ಸಮೀಪಿಸುತ್ತಿರೋದನ್ನು ಕಂದು ತಲೆಪಿಡುಕ ತಾನಾಗಿ ಹಿಂತಿರುಗಿದ. “ಸರ್, ನಾನು ಕೊನೇ ಸ್ಟಾಟ್ಯೂ ಹತ್ತಿರ ಇರ್ತೇನೆ, ಯಾಕೋ ಈ ಪೋಲೀಸರನ್ನ ಕಂಡರೆ ನನಗೆ ಸರಿಬೀಳಲ್ಲ. ಎಂದು ಹೇಳುವುದಕ್ಕೆ ಅವನು ಮರೆಯಲಿಲ್ಲ. ಟ್ರಾಫ಼ಿಕ್ ಪೋಲೀಸಿನವ ವಿನಯಚಂದ್ರನನ್ನು ಸಮೀಪಿಸಿ, ಅಲ್ಲಿ ಸ್ಕೂಟರ್ ನಿಲ್ಲಿಸಿದ್ದಕ್ಕೆ ಗಲಾಟೆ ಮಾಡಿದ. ಅವನ ಬಾಯಿ ಮುಚ್ಚಿಸಬೇಕಾದರೆ ಹತ್ತು ರೂಪಾಯಿ ಕಕ್ಕಬೇಕಾಯಿತು. ನಂತರ ವಿನಯಚಂದ್ರನಿಗೆ ಅಲ್ಲಿ ನಿಲ್ಲುವ ಮನಸ್ಸಾಗಲಿಲ್ಲ. “ಇರಿ ಸಾರ್ ಎಷ್ಟು ಹೊತ್ತು ಬೇಕಾದರೂ” ಎಂದು ಪೋಲೀಸಿನವನ ಆಮಂತ್ರಣವನ್ನು ವಿನಯಪೂರ್ವಕವಾಗಿ ತಿರಸ್ಕರಿಸಿ, ಹತ್ತಿ ಮನೆಯನ್ನು ಸೇರಿದ.
ಅಪ್ಪನ ಊಟ ಮುಗಿದಿತ್ತು. “ಏನದು ವಿನ್ ಏನೋ ಪ್ರಾಬ್ಲಮಿದೆ ಅಂತ ಹೇಳಿದಿಯಂತೆ?” ಎಂದು ವಿಚಾರಿಸಿದ ಅಪ್ಪನಿಗೆ ಒಂದು ಉತ್ತರ ಹೇಳಿ, ಕೈಕಾಲು ತೊಳೆದು ಬಂದು ಊಟದ ಶಾಸ್ತ್ರ ಮುಗಿಸಿದ. “ಫೋನ್ ಬಂದಿತ್ತೇನಮ್ಮ ಯಾರದಾದ್ರೂ,” ಎಂದು ವಿಚಾರಿಸಿದ. ಯಾರದೂ ಬಂದಿರಲಿಲ್ಲ. “ನೆನಪು ಮಾಡಿ ನೋಡಮ್ಮ” ಎಂದು ಒತ್ತಾಯಿಸಿದರೂ ತಾಯಿಯಿಂದ ನಕಾರಾತ್ಮಕ ಉತ್ತರ. ವೇಳೆ ನೋಡಿದ. ಒಂಬತ್ತೂವರೆ. ಎಂದರೆ ಈ ಮೋಹಿಯುದ್ದೀನನೆಂಬ ಸೂಳೆಮಗ ಇನೂ ಮನೆಗೆ ಮರಳಿಲ್ಲ. ಅಥವಾ ಬಂದಿದ್ದು ತನಗೆ ಫೋನ್ ಹಚ್ಚಲು ನಿರಾಕರಿಸಿದ್ದಾನೆ. ಎಂದರೆ ಒಂದೂವರೆ ಸಾವಿರದಲ್ಲಿ ಅವಂದೂ ಪಾಲಿದೆ. ಯಾರನ್ನು ಬೇಕಾದರೂ ನಂಬು. ಆದರೆ ಬಿಸಿನಸ್ ಮಂದೀನ ಮಾತ್ರ ನಂಬದಿರು ಎನ್ನುವ ಹಿತೋಪದೇಶವನ್ನು ತಾನು ಪಾಲಿಸಿದ್ದರೆ ಇಂಥ ಪರಿಸ್ಥಿತಿ ಹುಟ್ತನೇ ಇರ್ಲಿಲ್ಲ ಈಗ – ಹೀಗೆಲ್ಲ ಯೋಚಿಸುತ್ತಿದ್ದಂತೆ ಫೋನ್ ಸದ್ದು ಕೇಳಿ ಚಂಗನೆ ನೆಗೆದು ಕೈಗೆತ್ತಿಕೊಂಡು, “ವಿನಯ್” ಎಂದ. “ಹಲೋ! ಯಂಗ್ ಮ್ಯಾನ್! ಏನು ನಡೆಸಿದ್ದೀ?”
ಮಾತಾಡಿದವ ಮೋಹಿಯುದ್ದೀನ್ ಅಲ್ಲ – ಚಟರ್ಜಿ. ಅವನ ಅಕ್ಷರಗಳು ತೊದಲುತ್ತಿದ್ದುದನ್ನು ಗಮನಿಸಿದರೆ ಯಾವುದೋ ಬಾರಿನಿಂದ ಮಾತಾಡ್ತಿದಾನೆನ್ನುವುದು ಖಂಡಿತ.
“ಹಲೋ ಸಂತೋಷ್! ಹೇಗಿದ್ದೀಯಾ? ಎಲ್ಲಿಂದ ಮಾತಾಡ್ತ ಇದ್ದೀ? ಏನು ವಿಶೇಷ?”
“ಹೋಲ್ಡೋನ್! ಹೋಲ್ಡೋನ್! ಒಂದೇ ಉಸಿರಲ್ಲಿ ಮುನ್ನೂರು ಪ್ರಶ್ನೆಗಳನ್ನ ಯಾತಕ್ಕೆ ತುರುಕ್ತಾ ಇದ್ದೀ ಏನವಸರ! ಥ್ರೀ ವಿಸನ್ ನಿಂದ ಮಾತಾಡ್ತಿದೇನೆ. ಜತೆಯಲ್ಲಿ ಚೌಧುರಿ ಇದ್ದಾನೆ. ಚೌಧುರಿ ಗೊತ್ತಲ್ಲ ನಿನಗೆ, ರಜನೀಶ್ ಚೌಧುರಿ?”
“ಅದೇ ನಿನ್ನ ಜತೆ ರಿಸರ್ಚ್ ಮಾಡ್ತಿದಾನೆ”
“ಅವನೇ. ಅವನಿಗೂ ನಿನ್ನದೇ ತರದ ಪ್ರಾಬ್ಲಮ್ ಬಂದ್ಬಿಟ್ಟಿದೆ. ಎದುರು ಮನೆ ಹುಡುಗಿಯೊಬ್ಬಳನ್ನ ಪ್ರೀತಿಸ್ತಿದ್ದಾನೆ. ಅವಳಿಗೂ ಇವನ ಮೇಲೆ ಮನಸ್ಸಿದೆ…”
“ಹಾಗಿದ್ರೆ ಪ್ರಾಬ್ಲೆಮೇನು ಬಂತು?”
“ಇಬ್ರಿಗೂ ಮುಂದರಿಯೋದಿಕ್ಕೆ ಧೈರ್ಯವಿಲ್ಲ. ಒಂದು ತರ ಇನರ್ಶಿಯಾ ತಲುಪಿಬಿಟ್ಟಿದ್ದಾರೆ. ಅದೂ ಅಲ್ದೆ ಹುಡುಗೀ ತಂದೆ ಆರ್ಮೀನಲ್ಲಿ ಮೇಜರ್. ಸದ್ಯ ಐಪಿಕೇಎಫ಼್ ನಲ್ಲಿದ್ದಾನೆ. ಭಾಳ ಭಾಳ ಸೆನ್ಸಿಟಿವ್ ವಿಷಯಾಂತ ನನ್ನ ಸಲಹೆ ಕೇಳೋದಿಕ್ಕೆ ಬಂದಿದ್ದಾನೆ.”
“ತ್ರೀ ವಿಸನ್ ಗೆ?”
“ತ್ರೀ ವಿಸನ್ ಗೆ.”
“ನೀ ಏನು ಹೇಳಿದೆ?”
“ಅದೆಲ್ಲ ಪ್ರೊಫ಼ೆಶನಲ್ ಸೀಕ್ರೆಟ್ಸ್. ಇರ್ಲಿ ಬಿಡು. ಈಗ ನೀ ಹೇಗೆ ಮುಂದರಿದಿದ್ದೀ. ರೇಶ್ಮಾ ಜಿಂದಲ್ ಬಂದಳೇ?”
“ಇಲ್ಲ, ಇನ್ನೂ ಬಂದಿಲ್ಲ ಸಂತೋಷ್, ನಾನಿದ್ನೆಲ್ಲ ಮರೆತುಬಿಡಬೇಕು ಅಂತ ಇದ್ದೇನೆ. ಕೆಲವೊಮ್ಮೆ ಏನೇನೋ ಹುಚ್ಚುಚ್ಚಾಗಿ ವರ್ತಿಸುತ್ತೇವೆ. ಆದ್ರೆ ಅದನ್ನೇ ಮತ್ತೆ ಮತ್ತೆ ರಿಪೀಟ್ ಮಾಡೋದ್ರಲ್ಲಿ ಅರ್ಥ ಇಲ್ಲ.”
“ಓ! ನೋ! ಇಂಥ ಡಿಪ್ರೆಶನೆಲ್ಲ ಇಂಥ ಆಟದಲ್ಲಿ ಸೇರಿರೋದೇ, ನೀನೇನೂ ಬೇಜಾರು ಮಾಡ್ಬೇಡ. ಈ ಕ್ಷಣವೇ ಆಕೆಗೆ ಒಮ್ದು ಕಾಲ್ ಹಚ್ಚಿ ಬಿಡ್ತೇನೆ.”
“ಎಂದರೆ ಅವಳ ನಂಬರು ನಿನಗೆ ನೆನಪಿದ್ಯೆ?”
“ಇದೆ. ಇಂಥ ಸಂಗತಿಗಳು ನನಗೆ ಮರೆತು ಹೋಗಲ್ಲ.”
“ಗಾಡ್! ”
“ಏನಂದಿ?”
“ಏನಿಲ್ಲ. ನಾನೇ ಮಾಡ್ತೀನಿ ಅಂದೆ. ಖಂಡಿತ, ದೇವರಾಣಿ!”
“ಸ್ಪಿರಿಟೆಂದರೆ ಅದೇ ಮತ್ತೆ! ಗುಡ್ ಲಕ್!”
“ಥ್ಯಾಂಕ್ಯೂ”
ಎರಡು ದಿನದಿಂದ ಕೆಲಸದಾಕೆ ಬಂದಿಲ್ಲವೆಂದು ತಾಯಿದ್ದು ಹೇಳಿ ನೆನಪಾಯಿತು. ಕಿಚನ್ ನ ಸಿಂಕ್ ನಲ್ಲಿ ತಾಯಿ ಮುಸುರೆ ಪಾತ್ರೆ ತಿಕ್ಕುತ್ತಿರುವುದು ಕಾಣಿಸಿ, ಆಕೆಯನ್ನು ಒತ್ತಾಯಿಸಿ, ನಿದ್ರಿಸಲು ಕಳಿಸಿ ತಾನೇ ಪಾತ್ರೆ ತೊಳೆಯುವುದಕ್ಕೆ ನಿಂತ. ಪ್ರತಿಯೊಂದು ಪಾತ್ರೆಗೂ ವಿಮ್ ಎಂಬ ಆಧುನಿಕಿ ಬೂದಿ ಹಾಕಿ ಪ್ಲಾಸ್ಟಿಕಿನ ಸ್ಕ್ರಬರಿನಿಂದ ತಿಕ್ಕಿ ತೊಳೆದು ಬೆಳಗಿಸಿದ. ನಂತರ ಅವನ್ನೆಲ್ಲ ಟವೆಲಿನಿಂದ ಒರೆಸಿ ಇಡಬೆಕಾದೆಡೆ ಇರಿಸಿದ. ಸ್ಟವ್ ನ್ನ ತೊಳೆಯಬೇಕೆನಿಸಿತು. ಅದನ್ನೂ ತೊಳೆದ. ಆಮೇಲೆ ಸ್ಟವ್ವಿನ ಕಟ್ಟೆಯನ್ನು ನಂತರ ಇಡೀ ಕಿಚನ್ ನೆಲವನ್ನು. ನಂತರ ಫ಼ೀನಾಯಿಲ್ ಹಾಕಿ ಸಿಂಕ್ ನ ಸ್ವಚ್ಛಗೊಳಿಸಿದ. ಕಸದ ಡಬ್ಬಿಯನ್ನು ಎತ್ತಿಕೊಂಡು ಮೆಟ್ಟಲಿಳಿದೇ ಕೆಳಕ್ಕೆ ಹೋಗಿ ದೂರದ ಗುಂಡಿಯಲ್ಲಿ ಹಾಕಿ ಬಂದ. ಇಳಿದಂತೆಯೇ ಮೆಟ್ಟಲೇರಿದ. ನಂತರ ಕಸದ ಡಬ್ಬಿ ಯನ್ನು ತೊಳಿದಿರಿಸಿದ. ಇನ್ನು ಸ್ನಾನ ಮಾಡದೆ ಸಾಧ್ಯವಿಲ್ಲವೆನಿಸಿ, ಸ್ನಾನದ ಮನೆ ಹೊಕ್ಕು ತಣ್ಣೀರಿನಲ್ಲಿ ಸ್ನಾನ ಮಾಡಿ, ಹೇರ್ ಡ್ರಯರಿನಿಂದ ತಲೆಗೂದಲನ್ನ ಆರಿಸಿಕೊಂಡ. ವಾಚು ನೋಡಿದ. ಹನ್ನೊಂದು ಮುಕ್ಕಾಲು. ಭಲೇ ಎನಿಸಿತು. ಸುಮಾರು ಎರಡು ಗಂಟೆಯಷ್ಟು ಸಮಯ ಒಂದು ಉಪಯುಕ್ತವಾದ ಕೆಲಸದಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಯಿತು. ಅಷ್ಟೂ ಸಮಯ ಮೋಹಿಯುದ್ದೀನನಾಗಲಿ, ಕಸಿನ್ ಆಗಲಿ, ಯಾವ ಸೈತಾನೇ ಆಗಲಿ ತಲೆಯೊಳಗೆ ಪ್ರವೇಶ ಪಡೆಯುವುದು ಸಾಧ್ಯವಾಗಲಿಲ್ಲ. ಆರಾಮ್ ಹರಾಮ್ ಹೈ ಎಂದು ನೆಹರೂ ಹೇಳೋದಕ್ಕೆ ಇಂಥ ಹರಾಮುಖೋರರೇ ಕಾರಣವಿರಬಹುದೇ ಎಂದುಕೊಂಡ.
ಈಗಿನ್ನೇನು ? ಇನ್ನು ಯಾರ ಮನೆಯ ಮುಸುರೆ ತಿಕ್ಕಲಿ? ರೇಶ್ಮಳ ಮನೆಗೆ ತೆರಳಿ ಬಾಗಿಲು ತಟ್ಟಲೆ? ಅವಳು ಬಾಗಿಲ ತೆರೆದಾಗ, ನೋಡಮ್ಮ, ನಿನ್ಮನೆ ಕಸಾನ ಗುಡಿಸಿಬಿಡ್ತೇನೆ, ಬಟ್ಟೆಬರೆ ಇದ್ದರೆ ಅವನ್ನೂ ಒಗೆದು ಬಿಡ್ತೇನೆ. ಮುಸುರೆ ಇದ್ರೆ ತೊಳೆದು ಬಿಡ್ತೇನೆ. ನಿನ್ನ ಕಾಲಿನ ಪಾದುಕೆಗಳಿಗೆ ಪಾಲಿಶ್ ಹಾಕಿ ಬೆಳಗಿಸ್ತೇನೆ, ಕನಿಷ್ಠ ನಿನ್ನ ಪಾದಗಳನ್ನಾದರೂ ಒತ್ತುತ್ತ ಈ ರಾತ್ರಿಯನ್ನು ಕಳೆಯಲು ನನಗೆ ಅನುಮತಿಕೊಡು, ಇಲ್ಲದಿದ್ದರೆ ಈ ಹರಾಮಖೋರರು ನನ್ನನು ಬಿಡುವುದಿಲ್ಲ – ಎಂದು ಹೇಳಲೆ?
ಕೆಲವು ದಿನಗಳಿಂದ ಕಣ್ಮರೆಯಾಗಿದ್ದ ಚೀಸಿನ ಟಿನ್ನು ಆವತ್ತು ರಾತ್ರಿ ಮತ್ತೆ ಬೇಡಿಸತೊಡಗಿತು.
ನಿದ್ದೆಯಿರದೆ ಕಣ್ಣು ಕೆಂಪಾಗಿದ್ದವನನ್ನು ತಾಯಿ, “ಯಾಕೆ ವಿನೂ, ಮೈ ಸರಿಯಾಗಿಲ್ಲವೆ? ಪಾತ್ರೆ ತಿಕ್ಕಬೇಡ ಅಂದರೆ ನೀನು ಕೇಳ್ಲಿಲ್ಲ. ಎಷ್ಟು ಹೊತ್ತಿಗೆ ನಿದ್ದೆ ಮಾಡ್ದೆ ಹೇಳು. ಇರ್ಲಿ, ಮೊದ್ಲು ಚಾ ಮಾಡಿ ತರ್ತೇನೆ” ಎಂದು ವಿಚಾರಿಸಿ ಅಡುಗೆ ಕೋಣೆಗೆ ಹೋದಳು.
ಎಲ್ಲರೂ ಕೂತು ಉಪಾಹಾರ ಮಾಡುವಷ್ಟರ ಹೊತ್ತಿಗೆ ಫೋನು ಸದ್ದಾಯಿತು. ವಿನಯಚಂದ್ರನೆ ಎದ್ದು ಧಾವಿಸಿ ಹೋಗಿ ತೆಗೆದ.
“ಹಲೋ!”
“ವಿನಯಚಂದ್ರ?”
“ಅವನೇ”
“ನಾನು ಮೊಹಿಯುದ್ದೀನ್. ಹೇಗಿದ್ದೀ?”
“ಇನ್ನೂ ಸತ್ತಿಲ್ಲ ಕಣೋ. ಯಾಕೆ ನಿನಗೆ ಆಶ್ಚರ್ಯವಾಗ್ತದೆಯೇ?”
“ನಿನ್ನೆ ರಾತ್ರೆ ಮನೆ ಸೇರುವಾಗ ತಡವಾಯ್ತು. ಆದ್ದರಿಂದ್ಲೆ ನಿನಗೆ ಫೋನ್ ಮಾಡಕ್ಕಾಗಲಿಲ್ಲ. ನಿನ್ನನ್ನ ನಿದ್ದೆಯಿಂದ ಎಚ್ಚರಿಸೋದಕ್ಕೆ ಮನಸ್ಸಿರಲಿಲ್ಲ.”
“ಥ್ಯಾಂಕ್ಸ್! ನಿನ್ನೆ ಎಷ್ಟು ಚೆನ್ನಾಗಿ ನಿದ್ದೆ ಮಾಡಿದೇಂದ್ರೆ….. “ವ್ಯಂಗ್ಯ ಅರ್ಥವಾಗದವನಂತೆ ಮೊಹಿಯುದ್ದೀನ್ ಹೇಳಿದ.
“ರಾತ್ರೆ ಫ಼ೈಜ್ ಬಂದಿದ್ನಂತೆ.”
“ಯಾರು ಈ ಹೊಸ ಕ್ಯಾರಕ್ಟರ್?”
“ಫ಼ೈಜ್ ನನ್ನ ಕಸಿನ್. ನಿನ್ನೆ ಹೋಗಿದ್ವೆಲ್ಲ. ರಿಮೋಟ್ ತಗಳ್ಳೋಕೆ?”
“ಓಹೋ! ಕಸಿನ್! ಏನಂತೆ ಅವ್ನಿಗೆ!”
“ಅರೇ ನೀನಿನ್ನೂ ನಿನ್ನ ಪಾರ್ಸೆಲ್ ಬಿಚ್ಚಿ ನೋಡಿಲ್ವೆ?”
“ಇಲ್ಲಪ್ಪಾ, ಯಾತಕ್ಕೆ?”
“ನಿನ್ನೆ ಪ್ಯಾಕ್ ಮಾಡುವಾಗ ಮರೆತು ಹಳತನ್ನೆ ಪ್ಯಾಕ್ ಮಾಡಿ ಕೊಟ್ಟಿದ್ರಂತೆ! ಹೊಸತನ್ನ ತಂದು ಕೊಟ್ಟಿದ್ದಾನೆ.”
“ದೇವರು ದೊಡ್ಡವ!”
“ಏನಂದಿ?”
“ಏನಿಲ್ಲ, ಥ್ಯಾಂಕ್ಸ್ ಅಂದೆ.”
“ಕಾಲೇಜಿಗೆ ಬರೋವಾಗ ತರ್ತೇನೆ.”
“ಖಂಡಿತ ತಗೊಂಡ್ಬಾ.”
“ತರ್ತೇನೆ. ನಾನೇನೂ ನಿನ್ನಷ್ಟು ಮರೆಗುಳಿ ಅಲ್ಲ. ನಿನ್ನೆ ರಾತ್ರಿ ಫೋನ್ ಮಾಡಿದ್ದು ಮತ್ತೆ ಯಾತಕ್ಕೆ?”
“ಯಾತಕ್ಕೂ ಇಲ್ಲ, ಗುಡ್ ನೈಟ್ ಹೇಳೋಕೆ”
ಎಂದು ಫೋನನ್ನ ಕೆಳಗಿಟ್ಟ.
ನಂತರ ಟೇಬಲಿಗೆ ಮರಳಿದವನು ಏನೋ ನೆನಪು ಮಾಡಿಕೊಂಡವನಂತೆ, “ಡ್ಯಾಡಿ, ನಾ ಹೇಳಿದ್ದೆ ನಮ್ಮ ಫ಼ೈನಲ್ ಈಯರ್ ಸ್ಟಡಿ ಟೂರ್ ಬಗ್ಗೆ ನೆನಪಿದ್ಯೆ? ಮುಂದಿನ ವಾರ ಹೋಗೋದೂಂತ ಫ಼ಿಕ್ಸ್ ಮಾಡಿದ್ದಾರೆ,” ಎಂದ. ಎಂದೂ ಹೆಚ್ಚು ಮಾತಾಡದ ತಂದೆ ಮಗನ ಜತೆ ಕಣ್ಣ ಭಾಷೆಯಲ್ಲೇ ಎಲ್ಲಿಗೆ ಎಂದು ಕೇಳಿದರು. “ಮುಂಬಯಿ, ಅಹ್ಮದಾಬಾದ್, ನಂತರ ಬರೋವಾಗ ಗೋವಾ, ಮಂಗಳೂರು ಅಂತ ಇಟ್ಟುಕೊಂಡಿದ್ದಾರೆ. ಒಂದು ವಾರದ ಪ್ರೋಗ್ರಾಂ ಬರೋ ಶನಿವಾರ ಹೊರಡೋದೂಂತ.” ಎಂದ. ಎಷ್ಟೂ ಬೇಕಾಗತ್ತೆ ಖರ್ಚಿಗೆ? “ಒಂದೆರಡು ಸಾವಿರ ಬೇಕೂಂತ ಹೇಳಿದ್ದಾರೆ, ” ಎಂದ. ನಂತರ ಮನಸ್ಸಿನಲ್ಲೆ ಲೆಕ್ಕ ಹಾಕಿ, “ಮೇಲಿನ್ಹೊಂದು ಸಾವಿರ ಇದ್ದರೆ ಚೆನ್ನಾಗಿರತ್ತೆ. ಮುಂಬಯಿ ಯಲ್ಲಿ ಒಂದು ಜತೆ ಶೂಸ್ ಕೊಳ್ಳೋಣಾಂತ,” ಎಂದು ಸೇರಿಸಿದ. ತಂದೆ ಹಾಂ, ಹೂಂ ಹೇಳಲಿಲ್ಲ. ತಾಯಿ ಮಾತ್ರ ಕೊಡಲೆ ಟೂರ್ ನಲ್ಲಿ ಏನೇನು ಮುಂಜಾಗರೂಕತೆಗಳನ್ನ ತೆಗೆದುಕೊಳ್ಳಬೇಕು ಎಂದು ಉಪದೇಶ ಸುರುಮಾಡಿದಳು. ತನ್ನ ಟೇಬಲ್ ಮೇಲೆ ಚೆಕ್ ಇರತ್ತೆ ಎಂದು ವಿನಯಚಂದ್ರನಿಗೆ ಗೊತ್ತಿತ್ತು. ಹಾಗೇ ಆಯಿತು. ಮೂರು ಸಾವಿರದ ಐದುನೂರಕ್ಕೆ ಚೆಕ್ಕು. ಮೇಲೆ ಪೇಪರ್ ವೈಟು. ಉದಾರಿ ತಂದೆ. ಅವತ್ತು ಮೊದಲು ಮೊಹಿಯುದ್ದೀನನ ಭೇಟಿ ಮಾಡಿ ಅವನಿಂದ ರ್ಮೋಟ್ ಕಂಟ್ರೋಲರನ್ನ ಇಸಕೊಂಡ. ಆಮೇಲೆ ಬ್ಯಾಂಕಿನಿಂದ ಚೆಕ್ ಮುರಿಸಿ, ಮೊಹಿಯುದ್ದೀನನಿಗೆ ಸಲ್ಲಬೇಕಾದ್ದನ್ನು ಸಲ್ಲಿಸಿ ಉಳಿದ ಹಣವನ್ನು ಜೇಬಿನಲ್ಲಿರಿಸಿಕೊಂಡ. ಕ್ಲಾಸ್ ಮೇಟ್ ಶಂಕರ ದೀಕ್ಷಿತನನ್ನು ಕಂಡೊಡನೆ ಒಂದು ಐಡಿಯಾ ಹೊಳೆಯಿತು.
“ದೀಕ್ಷಿತ! ಒಂದು ಕೆಲಸ ಆಗಬೇಕು!” ಎಂದ.
ಶಂಕರ ದೀಕ್ಷಿತ ಯಾರ ಜತೆ ಹೆಚ್ಚು ಮಾತುಕತೆ ಆಡೋ ವ್ಯಕ್ತಿಯಲ್ಲ. ರ್ಯಾಡಿಕಲಿಸ್ಟ್. ಆದರೂ ಆತ ಒಮ್ಮೆ ಅಪೆಂಡಿಸೈಟಿಸ್ ನಲ್ಲಿ ನರಳಿದಾಗ ಹಾಸ್ಪಿಟಲಿಗೆ ಕರಕೊಂಡು ಹೋಗಿ ಉಪಚರಿಸಿದ್ದು ವಿನಯಚಂದ್ರನೇ. ಆದ್ದರಿಂದ ದೀಕ್ಷಿತ ಸ್ನೇಹಿತನಾಗಿ ಬಿಟ್ಟ ಎಂದೇನೂ ಇಲ್ಲ. ಯಾರನ್ನೂ ಸಹಿಸಿಕೊಳ್ಳದವನು ವಿನಯಚಂದ್ರನನ್ನು ಸಹಿಸಿಕೊಳ್ಳುತ್ತಿದ್ದ.
“ಅದೇನು ಕೆಲಸ ಹೇಳು,” ಎಂದ ದೀಕ್ಷಿತ.
“ಕಾನ್ ಫ಼ಿಡೆನ್ಷಿಯಲ್”
“ಓಕೇ”
“ನಾ ಒಂದು ವಾರ ತಲೆಮರೆಸಿಕೊಳ್ಳಬೇಕಾಗಿದೆ. ಅಜ್ಞಾತವಾಸ, ನಿನ್ನ ರೂಮ್ ನಲ್ಲಿ ಆಶ್ರಯ ಕೊಡೋಕ್ಕೆ ಅಗತ್ಯೆ?”
“ಅಜ್ಞಾತವಾಸ! ನಿನಗೆ!”
“ಯಾವ ಪ್ರಶ್ನೇನೂ ಕೇಳಬೇಡ, ದಯವಿಟ್ಟು. ಬಹಳ ಖಾಸಗಿ ವಿಷಯ. ಯಾರಿಗೂ ಮರ್ಯಾದ ತರುವಂಥ ಸಂಗತಿಯಲ್ಲ ಕಣಯ್ಯ. ದ ಮ್ಯಾಟರ್ ಈಸ್ ಫ಼ೆಮಿನೈನ್!”
“ನನ್ನ ರೂಮ್ ನಲ್ಲಿ ಒಂದೇ ಕಾಟ್ ಇರೋದು.”
“ನೆಲದಲ್ಲಿ ಮಲಕ್ಕೋತೇನೆ.”
“ಬೆಡ್.”
“ಜಮಖಾನೆ, ಚಾಪೆ, ಚದ್ದರ ಏನಾದರೂ ಸಾಕು.”
ದೀಕ್ಷಿತ ಯೋಚನೆಯಲ್ಲಿ ಬಿದ್ದವನಂತೆ ಕಾಣಿಸಿದ.
“ಏನು ಯೋಚ್ನೆ ಮಾಡ್ತಾ ಇದ್ದೀ? ನಿನ್ನ ಅಭ್ಯಾಸಕ್ಕೆ ನಾನೇನೂ ತೊಂದ್ರೆ ಮಾಡಲ್ಲ.” ಎಂದ ವಿನಯಚಂದ್ರ.
“ಅದಲ್ಲಯ್ಯ, ಸೊಳ್ಳೆಗಳ ಕಾಟ.” ಎಂದ ದೀಕ್ಷಿತ.
“ಕಾಯಿಲ್ ಹಚ್ಚಿ ಬಿಡ್ತೀನಿ.”
“ಅದರ ವಾಸ್ನೆ ನನಗೆ ಹಿಡಿಸಲ್ಲ. ಅಲ್ದೆ ಬೆಂಕಿಯ ಅಪಾಯ ಬೇರೆ.”
“ನಾ ಏನಾದ್ರೂ ಮಾಡ್ಕೊಳ್ತೇನೆ, ಆಯ್ತಲ್ಲ.”
“ಯಾವತ್ನಿಂದ?”
“ಸ್ಕಾಟರ್ಡೇ ಬೆಳಿಗ್ಗೇನೇ ಬಂದ್ಬಿಡ್ತೇನೆ. ಆಯ್ತಲ್ಲ.”
“ಯಾವತ್ನಿಂದ?”
“ಸ್ಯಾಟರ್ಡೇ ಬೆಳಿಗ್ಗೇನೇ ಬಂದ್ಬಿಡ್ತೇನೆ. ರೂಮ್ನಲ್ಲಿರ್ತೀ ತಾನೆ.”
ಉತ್ತರಕ್ಕೆ ಕಾಯದ ಪಿಲಾತನಂತೆ, ವಿನಯಚಂದ್ರ ಅಲ್ಲಿಂದ ತೆರಳಿದ.
ಹೊಸತೊಂದು ಶರ್ಟು ಪ್ಯಾಂಟ್ಸು ಕೊಳ್ಳೋದಿತ್ತು ಸ್ಕೂಟರ್ ಹತ್ತಿ, ಎಲ್ಲರೂ ಹಾಡಿ ಹೊಗಳುತ್ತಿರುವ ಸ್ವಪ್ನಲೋಕ ಶಾಪಿಂಗ್ ಕಾಂಪ್ಲೆಕ್ಸ್ ಗೆ ಬಂದು ವೇರ್ ಹೌಸ್ ಹೆಸರಿನ ರೆಡಿಮೇಡ್ ಅಂಗಡಿಯೊಂದನ್ನು ಪ್ರವೇಶಿಸಿದ.
*****