೧
ಕವಿತೆ ಹುಟ್ಟುವುದು ಮಹಲಿನಲ್ಲಲ್ಲ,
ಮುರುಕು ಜೋಪಡಿಗಳಲ್ಲಿ.
ಕವಿತೆ ಹುಟ್ಟುವುದು ಝಗಝಗಿಸುವ
ದೀಪಗಳ ಬೆಳಕಿನಲ್ಲಲ್ಲ ಬುಡ್ಡಿ-
ಬೆಳಕಿನ ಮಿಡುಕಿನಲ್ಲಿ.
ಕವಿತೆ ಹುಟ್ಟುವುದು ಕಲ್ಪನೆಯ ಮೂಸೆಯಲ್ಲಲ್ಲ
ದೈನಂದಿನ ಘಟನಾವಳಿಗಳಲ್ಲಿ.
ಕವಿತೆ ಹುಟ್ಟುವುದು ತುಂತುರುಮಳೆಯಲ್ಲಲ್ಲ
ನೊಂದವರ ಕಣ್ಣೀರಿನಲ್ಲಿ.
ಕವಿತೆ ಹುಟ್ಟುವುದು ಬಿಗಿದ ಕೊರಳಿನಲ್ಲಿ,
ನಿರಾಶೆಯ ನೆರಳಿನಲ್ಲಿ, ಅಸಹಾಯಕರ ಆಕ್ರಂದನದಲ್ಲಿ.
ಇವೆಲ್ಲ, ಅಲ್ಲಿ ಇಲ್ಲಿ ಹೆಕ್ಕಿ ಪಟ್ಟಿಮಾಡಿದ
ನುಡಿಮುತ್ತುಗಳು. ಹೋದಲ್ಲೆಲ್ಲ ಹಿಂಬಾಲಿಸಿ
ಕಾಡುವ ಮಾತಿನ ಭೂತಗಳು.
೨
ಆದರೆ ನನ್ನ ಕವಿತೆ, ಹುಟ್ಟಿದ್ದು ಮಹಲಿನಲ್ಲಿ,
ಪಿಳಿಪಿಳಿ ಕಣ್ಣುಬಿಟ್ಟಿದ್ದು ಝಗಝಗಿಸುವ
ದೀಪಗಳ ಬೆಳಕಿನಲ್ಲಿ, ಬೆಳೆದಿದ್ದು ಕಲ್ಪನೆಯ-
ಮೂಸೆಯಲ್ಲಿ, ಅರಳಿದ್ದು ಕನಸಿನಲ್ಲಿ.
ಆದರೂ ಈ ಕವಿತೆಗೆ-
ತುಡಿತ-ಮಿಡಿತಗಳಿಗೆ ಸ್ಪಂದಿಸುವ ಹೃದಯವಿದೆ
ಮನದಲ್ಲಿ ಹೊಸೆದ ಹೊಸ ಕನಸಿದೆ.
ಕಣ್ಣ ಬಿಂಬದಲ್ಲಿ ಕೈ ಕೈ ಬೆಸೆದು ಜೊತೆಯಾಗಿ
ಹೆಜ್ಜೆಯಿಡುವ ಹಂಬಲವಿದೆ.
ಇಷ್ಟಾದರೂ ಹಲವರ ದೃಷ್ಟಿಯಲ್ಲಿ ನನ್ನದು
ಹುಟ್ಟುವುದಕ್ಕೆ ಮುಂಚೆಯೆ ಸತ್ತ ಕವಿತೆ
ಕೆಲವರ ದೃಷ್ಟಿಯಲ್ಲಂತು ಬದುಕಿದರೂ ಸತ್ತ ಕವಿತೆ!