ಮುತ್ತಿನಂತಹ ಅಕ್ಕಂದಿರಿಬ್ಬರನ್ನು
ಕುದುರೆಯೊಂದು ಕೆಡವಿ
ಕಂಗೆಡಿಸಿದ ಸುದ್ದಿ
ನಿಮಗೂ ತಲುಪಿರಬಹುದು
ಅಕ್ಕಂದಿರೇ ಹುಚ್ಚುತನದಿಂದ
ಕುದುರೆಯನ್ನು ಕೆಣಕಿ ಕಂಗೆಟ್ಟರೆಂದು
ಹಬ್ಬಿಸಿದ ಸುದ್ದಿಯನ್ನು
ನೀವು ನಂಬಿರಲೂಬಹುದು.
ಬಯಲೊಳಗೆ
ಬಯಲಾದರಂತೆ ಅಕ್ಕಂದಿರು
ಧೂಳೊಳಗೆ ಮೈ ಮುಚ್ಚಿಕೊಂಡವರನ್ನು
ಮೆರವಣಿಗೆಯಲ್ಲಿ ಕುಣಿಸಿದರಂತೆ
ಮಾನವಂತರು.
ಎಚ್ಚರವಾಗಿರುವ ರಸ್ತೆಗಳೆ
ನೀವು ಕಂಡಿರೆ… ನೀವು ಕಂಡಿರೆ….
ಸುಡುವ ಸೂರ್ಯಗಳೆ
ನೀವು ಕಂಡಿರೆ… ನೀವು ಕಂಡಿರೆ….
ಮೈ ತುಂಬ ಎಲೆರೆಪ್ಪೆಗಳನ್ನು
ಅಂಟಿಸಿಕೊಂಡಿರುವ ಮರಗಳೆ
ನೀವು ಕಂಡಿರೆ… ನೀವು ಕಂಡಿರೆ…
ನನ್ನಕ್ಕಂದಿರನ್ನು ಹಣ್ಣು ಮಾಡಿದ
ಹುಣ್ಣುಗಳಾರು ನೀವು ಹೇಳಿರೆ…
ನನ್ನಕ್ಕಂದಿರ ಹೃದಯ ಗೋರಿಗೊಳಿಸಿ
ವಿಜಯಪತಾಕೆ ಹಾರಿಸಿದ
ಶೂರರಾರು ನೀವು ಹೇಳಿರೆ…
ಎಂದು ಪ್ರಲಾಪಿಸುವುದು ವ್ಯಥ.
ಎಲ್ಲರ ಒಳಹೊಕ್ಕು ಶೋಧಿಸುವ
ಗಾಳಿಗೆ ಮಾತು ಬರುವಂತಿದ್ದರೆ?!
ಮಾತಿರಲಿ-
ಮೌನವನ್ನು ಮಣಿಸಬಲ್ಲ
ಮಹಾಶಯರಿರುವ ಈ ನಾಡಿನಲ್ಲಿ
ಕುದುರೆಯ ಕೆನೆತವಷ್ಟೆ ಸತ್ಯ.
ಉಳಿದದ್ದೆಲ್ಲ ಮಿಥ್ಯ.