ರಂಗಣ್ಣನ ಕನಸಿನ ದಿನಗಳು – ೨

ರಂಗಣ್ಣನ ಕನಸಿನ ದಿನಗಳು – ೨

ಕನಸು ದಿಟವಾಯಿತು

ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ ಹತ್ತಿತೆ ? ಸಾಕು, ಕಾಫಿ ಕುಡಿದು ಬಿಟ್ಟು ಏನಾದರೂ ತರಕಾರಿ ತಂದುಹಾಕಿ, ಹೋಗಿ ಸ್ನೇಹಿತರ ಮನೆಯಲ್ಲಿ ಕುಳಿತು ಬಿಟ್ಟು ಈ ಹುಚ್ಚನ್ನೆಲ್ಲಾ ಬಿಚ್ಚಿ ಊಟದ ಹೊತ್ತಿಗೆ ಬರಬೇಡಿ’- ಎಂದು ತಾತ್ಸಾರದಿಂದ ಹೇಳಿದಳು. ರಂಗಣ್ಣನು ತರಕಾರಿಯನ್ನೇನೊ ತಂದು ಮನೆಗೆ ಹಾಕಿದನು. ಆದರೆ ಸ್ನೇಹಿತರ ಮನೆಗೆ ಹೋಗದೆ ಬಿಡಲಿಲ್ಲ. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಮನೆಗೆ ಹಿಂದಿರುಗಿದನು. ಅವನು ಮನೆಯನ್ನು ಸೇರುವುದಕ್ಕೂ ಪಕ್ಕದ ಮನೆಯಿಂದ ಟಪಾಲಿನವನು ಹೊರಕ್ಕೆ ಬರುವುದಕ್ಕೂ ಸರಿ ಹೋಯಿತು. ಟಪಾಲಿನವನು ಒಂದು ಸರ್ಕಾರಿ ಲಕೋಟೆಯನ್ನು ಕೈಗೆ ಕೊಟ್ಟು ಹೊರಟು ಹೋದನು. ಲಕೋಟೆ ಡೆಪ್ಯುಟಿ ಡೈರೆಕ್ಟರವರ ಕಚೇರಿಯಿಂದ ಬಂದದ್ದು, ಒಡೆದು ನೋಡುತ್ತಾನೆ! ಜನಾರ್ದನಪುರಕ್ಕೆ ಇನ್‍ಸ್ಪೆಕ್ಟರಾಗಿ ವರ್ಗ ಮಾಡಿದ್ದಾರೆ! ರಜದಿಂದ ಹಿಂದಿರುಗಿ ಬರಬೇಕೆಂದೂ ಕೂಡಲೆ ಹೋಗಿ ಅಧಿಕಾರ ವಹಿಸಿಕೊಳ್ಳಬೇಕೆಂದೂ ತುರ್ತು ಆಜ್ಞೆ ಮಾಡಿದ್ದಾರೆ! ರಂಗಣ್ಣ ತನ್ನ ಕಣ್ಣುಗಳನ್ನು ನಂಬಲಿಲ್ಲ. ತಾನು ಎಲ್ಲಿರುವನೆಂಬ ಅರಿವೂ ಅವನಿಗೆ ಆಗಲಿಲ್ಲ. ಅದೇನು ಸಾಚಾನೇ ಖೋಟಾನೇ ಎಂದು ಎರಡು ಮೂರು ಬಾರಿ ನೋಡಿದನು, ಓದಿದನು. ಎಲ್ಲವೂ ಸಾಚಾ, ಟೈಪಾಗಿದೆ, ಸಾಹೇಬರ ರುಜುವಾಗಿದೆ, ಅಸಿಸ್ಟೆಂಟರ ರುಜು ಬಿದ್ದಿದೆ. ತನ್ನದೊಂದೇ ವರ್ಗವಲ್ಲ ; ಇತರರ-ನಾಲ್ಕೈದು ಮಂದಿಯ-ವರ್ಗಗಳೂ ಇವೆ. ರಂಗಣ್ಣನಿಗೆ ಇದೇನೋ ದೈವಮಾಯೆ ಎನ್ನಿಸಿತು ಒಳಕ್ಕೆ ಹೋಗಿ ಹೆಂಡತಿಗೆ ಲಕ್ಕೋಟೆಯನ್ನೂ ವರ್ಗದ ಆರ್ಡರನ್ನೂ ತೋರಿಸಿ ಸಮಾಚಾರವನ್ನು ತಿಳಿಸಿದನು. ಆಕೆ ನಂಬಲಿಲ್ಲ. ತನ್ನನ್ನು ಗೇಲಿ ಮಾಡುವುದಕ್ಕಾಗಿ ಗಂಡನು ಹಾಗೆ ಮಾಡುತ್ತಿದ್ದಾನೆಂದು ಆಕೆ ಬಗೆದಳು. ಆಮೇಲೆ ಅದು ತಮಾಷೆಯಲ್ಲ, ನಿಜ ಎನ್ನುವುದು ಆಕೆಗೂ ಗೊತ್ತಾಯಿತು. ಬೇಗ ಒಗ್ಗರಣೆ ಹಾಕಿ, ದೇವರ ಮನೆಗೆ ಹೋಗಿ ದೀಪಗಳನ್ನು ಹಚ್ಚಿ ದೇವರ ವೆಟ್ಟಿಗೆಗೆ ನಮಸ್ಕಾರ ಮಾಡಿದಳು. ಹೊರಕ್ಕೆ ಬರುತ್ತ, ನೋಡಿ, ನಾನು ಮಹಾ ಪತಿವ್ರತೆಯಾದ್ದರಿಂದ ನಿಮಗೆ ಈ ಆರ್ಡರು ಬಂತು. ನಿಮ್ಮ ಸಂಬಳ ಏನಾದರೂ ಮಾಡಿಕೊಳ್ಳಿ. ಆದರೆ ಭತ್ಯದ ದುಡ್ಡು ಒಂದು ಕಾಸನ್ನೂ ಮುಟ್ಟ ಕೂಡದು. ನನ್ನ ಹತ್ತಿರ ತಂದು ಕೊಟ್ಟು ಬಿಡಬೇಕು’- ಎಂದು ಕರಾರು ಹಾಕಿದಳು. ರಂಗಣ್ಣನು, ‘ನಾನು ಊಟ ಮಾಡಿಕೊಂಡು ಕಚೇರಿಗೆ ಹೋಗಿ ಎಲ್ಲವನ್ನೂ ವಿಚಾರಿಸುತ್ತೇನೆ. ಬೇಗ ಬಡಿಸು – ಎಂದು ಹೇಳಿದನು. ಅದರಂತೆ ಆಕೆ ಎಲೆ ಮಣೆ ಎಲ್ಲವನ್ನೂ ಹಾಕಿದಳು. ಅನ್ನವನ್ನು ಬಡಿಸಿದಳು. ದಿನವೂ ಎರಡು ಮಿಳ್ಳೆ ತುಪ್ಪ ಹಾಕುತ್ತಿದ್ದವಳು ಆ ದಿನ ನಾಲ್ಕು ಮಿಳ್ಳೆ ತುಪ್ಪ ಹಾಕಿದಳು.

ರಂಗಣ್ಣ ಊಟವನ್ನು ಮುಗಿಸಿಕೊಂಡು ಸೂಟನ್ನು ಧರಿಸಿಕೊಂಡು ಡೆಪ್ಯುಟಿ ಡೈರಕ್ಟರವರ ಕಚೇರಿಗೆ ಹೋಗಿ ವಿಚಾರಿಸಿದನು. ವರ್ಗದ ಆರ್ಡರು ಸರಿ ಎಂದು ಗೊತ್ತಾಯಿತು. ಸಾಹೇಬರನ್ನು ನೋಡಿ ತನ್ನ ಕೃತಜ್ಞತೆಯನ್ನು ಸೂಚಿಸಿ ಹಿಂದಿರುಗಿದನು. ಈ ಸಮಾಚಾರವನ್ನು ತಿಮ್ಮರಾಯಪ್ಪನಿಗೆ ತಿಳಿಸಬೇಕೆಂದು ಅವನಿಗೆ ದೊಡ್ಡದೊಂದು ಆತುರ. ಆದರೆ ಸಾಯಂಕಾಲದವರೆಗೂ ಅವನು ಮನೆಗೆ ಬರುವುದಿಲ್ಲ ಎಂದು ತಿಳಿದಿತ್ತು. ಹೇಗೋ ಕಾದಿದ್ದು ಗವೀಪುರದ ಬಡಾವಣೆ ಕಡೆಗೆ ಸಾಯಂಕಾಲ ಆರು ಗಂಟೆಗೆ ಹೋದನು. ತಿಮ್ಮರಾಯಪ್ಪ ಮನೆಗೆ ಬಂದಿರಲಿಲ್ಲ. ರಂಗಣ್ಣ ಆ ಬಡಾವಣೆಯ ಗುಹೇಶ್ವರನ ಗುಡ್ಡದ ಮೇಲೆ ಏಳು ಗಂಟೆಯವರೆಗೂ ಕುಳಿತುಕೊಂಡಿದ್ದು ಪುನಃ ಹೋಗಿ ಮನೆಯಲ್ಲಿ ವಿಚಾರಿಸಿದನು. ಆಗಲೂ ತಿಮ್ಮರಾಯಪ್ಪ ಬಂದಿರಲಿಲ್ಲ. “ಎಷ್ಟು ಹೊತ್ತಿಗೆ ಬರುತ್ತಾರೆ ಎಂದು ಕೇಳಿದ್ದಕ್ಕೆ, “ಗೊತ್ತಿಲ್ಲ. ಎಂಟು, ಒಂಬತ್ತು, ಹತ್ತು ಗಂಟೆ ಆದರೂ ಆಗುತ್ತದೆ”-ಎಂದು ಉತ್ತರ ಬಂದಿತು. ಏನು ಮಾಡುವುದು? ಊಟಮಾಡಿಕೊಂಡಾದರೂ ಬರೋಣವೆಂದು ರಂಗಣ್ಣ ಮನೆಗೆ ಹಿಂದಿರುಗಿದನು.

ಊಟವಾದ ಮೇಲೆ ಹೊಟ್ಟೆ ಭಾರವಾಯಿತು. ಪುನಃ ಗವೀಪುರದ ಬಡಾವಣೆ ಕಡೆಗೆ ಹೊರಡಲು ಮೊದಲು ಮನಸ್ಸಾಗಲಿಲ್ಲ. ಆದರೆ ಮಾರನೆಯ ದಿನ ಬೆಳಗ್ಗೆ ಹೋಗೋಣವೆಂದರೆ ಬೆಳಗ್ಗೆ ಎಂಟು ಗಂಟೆಗೆಲ್ಲ ತಿಮ್ಮರಾಯಪ್ಪ ಮನೆ ಬಿಟ್ಟು ಹೊರಟು ಹೋಗುತ್ತಾನೆ ಎಂಬುದು ತಿಳಿದಿತ್ತು. ಆದ್ದರಿಂದ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ತಿಮ್ಮರಾಯಪ್ಪನಿಗೆ ವರ್ತಮಾನ ಕೊಡಬೇಕು, ಇನ್‍ಸ್ಪೆಕ್ಟರಾಗಿ ಹೋಗುವವನು ಕಷ್ಟ ಪಡಲು ಹಿಂಜರಿದರೆ ಹೇಗೆ ? ಎಂದು ಮುಂತಾಗಿ ಚರ್ಚೆ ಮಾಡಿಕೊಂಡು – ರಂಗಣ್ಣ ಮನೆಯನ್ನು ಬಿಟ್ಟು ಹೊರಟನು. ತಿಮ್ಮರಾಯಪ್ಪನ ಮನೆಗೆ ಬಂದಾಗ ರಾತ್ರಿ ಒಂಬತ್ತು ಗಂಟೆಯಾಯಿತು ; ಮನೆಯ ದೀಪಗಳು ಕ್ಷಣ ಆರಿ ಪುನಃ ಹೊತ್ತಿಕೊಂಡವು. ಒಳಗೆ ವಿಚಾರಿಸಿದರೆ, ಇನ್ನೂ ಬಂದಿಲ್ಲ ಎಂದು ತಿಳಿಯಿತು. ಹಿಂದಿನ ದಿನ ತಿಮ್ಮರಾಯಪ್ಪ ಹೇಳಿದ್ದ ಕಥೆಯೆಲ್ಲ ರಂಗಣ್ಣನ ನೆನಪಿಗೆ ಬಂತು. ‘ಅಯ್ಯೋ ಪಾಪ! ಅವನು ಹೇಳಿದ್ದೆಲ್ಲ ನಿಜ’ ಎಂದುಕೊಂಡು ಹಿಂದಕ್ಕೆ ಹೊರಡಲು ಸಿದ್ಧನಾಗುತ್ತಿದ್ದಾಗ, ತಿಮ್ಮರಾಯಪ್ಪ, ಉಸ್ಸಪ್ಪ’ ಎಂದು ಹೇಳಿಕೊಳ್ಳುತ್ತಾ ಬೈಸಿಕಲ್ಲಿನಿಂದ ಇಳಿದನು ಬೈಸಿಕಲ್ಲು ಸಹ ‘ಉಸ್ಸಪ್ಪಾ! ಬದುಕಿಕೊಂಡೆ!’ ಎಂದು ಲಘುವಾಯಿತು. ರಾತ್ರಿ ಅಷ್ಟು ಹೊತ್ತಿನಲ್ಲಿ ರಂಗಣ್ಣ ಬಂದಿರುವುದನ್ನು ನೋಡಿ ತಿಮ್ಮರಾಯಪ್ಪನಿಗೆ ಆಶ್ಚರ್ಯವಾಯಿತು. ಆ ದಿನದ ವಿಶೇಷ ವರ್ತಮಾನವನ್ನು ತಿಳಿಸುವುದು ರಂಗಣ್ಣನಿಗೆ ಹೆಚ್ಚು ಕಾಲ ಹಿಡಿಯಲಿಲ್ಲ. ‘ಭಲೆ! ಭೇಷ್! ರಂಗಣ್ಣ ಶಿವನಾಣೆ ! ನನಗೆ ಬಹಳ ಸಂತೋಷ ಬಾ, ಒಳಕ್ಕೆ ಹೋಗೋಣ’ ಎಂದು ತಿಮ್ಮರಾಯಪ್ಪ ಹೇಳುತ್ತ ರಂಗಣ್ಣನ ಭುಜವನ್ನು ತಟ್ಟಿ ಒಳಕ್ಕೆ ಕರೆದುಕೊಂಡು ಹೋದನು.

ಕೊಟಡಿ ಅಚ್ಚು ಕಟ್ಟಾಗಿದ್ದಿತು. ಕುರ್ಚಿಗಳು, ಮೇಜು, ಸೋಫಾ ಮತ್ತು ನೆಲಕ್ಕೆ ಜಂಖಾನ ಇದ್ದು ವು. ತಿಮ್ಮರಾಯಪ್ಪ ಸ್ವಲ್ಪ ರಸಿಕನೂ ಭೋಗಿಯೂ ಆಗಿದ್ದನೆಂದು ಆ ಅಚ್ಚು ಕಟ್ಟಿನಿಂದ ಹೇಳಬಹುದಾಗಿತ್ತು. ರಂಗಣ್ಣನನ್ನು ಸೋಫಾದಲ್ಲಿ ಕುಳ್ಳಿರಿಸಿ ತನ್ನ ಬಟ್ಟೆಗಳನ್ನು ಬದಲಾಯಿಸಿಕೊಂಡು, ‘ಐದು ನಿಮಿಷ ವಿರಾಮ ಕೊಡು ಮಹಾರಾಯ ! ಊಟ ಮಾಡಿಕೊಂಡು ಬರುತ್ತೇನೆ. ನೀನು ಸ್ವಲ್ಪ ಹಾಲು ಹಣ್ಣನ್ನಾದರೂ ತೆಗೆದುಕೊ, ನೀನು ನಮ್ಮಲ್ಲಿ ಊಟ ಮಾಡುವುದಿಲ್ಲ’ – ಎಂದು ಹೇಳಿ ಒಳಕ್ಕೆ ಹೋದನು. ಕೆಲವು ನಿಮಿಷಗಳಲ್ಲಿ ಹಿಂದಿರುಗಿ ಬಂದು ಬೆಳ್ಳಿಯ ಲೋಟದ ತುಂಬ ಹದವಾದ ಹಾಲು, ಬೆಳ್ಳಿಯ ತಟ್ಟೆಯಲ್ಲಿ ಬಾಳೆಯ ಹಣ್ಣು ಮತ್ತು ಕಿತ್ತಿಳೆಹಣ್ಣುಗಳನ್ನು ತಂದಿಟ್ಟು, ‘ಇದನ್ನು ಊಟ ಮಾಡು’ ಎಂದು ನಗುತ್ತ ಹೇಳಿದನು.

‘ನಿನ್ನ ಮನೆಯಲ್ಲಿ ಊಟ ಮಾಡುವ ಕಾಲವೂ ನಿನ್ನ ಮಗಳನ್ನು ನನ್ನ ಮಗನಿಗೆ ಕೊಟ್ಟು ಮದುವೆ ಮಾಡುವ ಕಾಲವೂ ಬಂದಾಗ ನಮ್ಮ ದೇಶ ಉದ್ದಾರವಾಗುತ್ತದೆ. ಏನೋ ಹಿಂದಿನವರು ಮಾಡಿಟ್ಟ ಆಚಾರ ವ್ಯವಹಾರ. ಅಂತೂ ಸವೆದ ಹಾದಿಯಲ್ಲೇ ಹೋಗುತ್ತಿದ್ದೇವೆ.’

‘ಶಿವನಿದಾನೆ ಬಿಡು ! ಅವನು ಮನಸ್ಸು ಮಾಡಿದರೆ ಎಲ್ಲವೂ ಆಗುತ್ತದೆ’ ಎಂದು ಹೇಳಿ ತಿಮ್ಮರಾಯಪ್ಪ ಊಟಕ್ಕೆ ಹೋದನು. ರಂಗಣ್ಣನು ತಟ್ಟೆಯಲ್ಲಿದ್ದುದನ್ನೂ ಲೋಟದಲ್ಲಿದ್ದುದನ್ನೂ ಚೆನ್ನಾಗಿಯೇ ಊಟ ಮಾಡಿದನು. ಹದಿನೈದು ನಿಮಿಷಗಳ ತರುವಾಯ ತಿಮ್ಮರಾಯಪ್ಪ ಹಿಂದಿರುಗಿದನು. ಗಂಡ ಹೆಂಡರಿಗೆ ಏನೋ ಮಾತು ಬೆಳೆದ ಹಾಗಿತ್ತು. ಆಕೆ ಹಿಂದೆಯೇ ಬರುತ್ತ, ‘ನಾನು ಆ ದಿನದಿಂದಲೂ ಹೇಳುತ್ತಿದೇನೆ. ನಮಗೆ ಬಿಲ್ ಕೋಲ್ ಈ ಹಾಳು ಕೆಲಸ ಬೇಡ, ಹಿಂದಿನ ಕೆಲಸಕ್ಕನೆ ಹೊರಟು ಹೋಗೋಣ, ಈಗ ನಿಮ್ಮ ಸ್ನೇಹಿತರಿಗೆ ಎಷ್ಟು ಸುಲಭದಲ್ಲಿ ಇನ್‍ಸ್ಪೆಕ್ಟರ್ ಕೆಲಸ ಆಯಿತು. ನೀವೇ ನೋಡಿ’- ಎಂದು ರೇಗಾಡಿದಳು. ‘ಋಣಾನುಬಂಧ ಇರುವವರೆಗೂ ನಡೆಯಲಿ, ಬಿಟ್ಟು ಹೋಗುವಾಗ ಬಿಟ್ಟು ಹೋಗಲಿ. ನೀನೇಕೆ ರೇಗಾಡುತ್ತೀಯೆ ? ಹೋಗಿ ಮಲಗಿಕೋ ? ಎಂದು ಹೇಳುತ್ತ ತಿಮ್ಮರಾಯಪ್ಪ ಕೊಟಡಿಯೊಳಕ್ಕೆ ಬಂದನು.

ಪುನಃ ಸ್ನೇಹಿತರಿಬ್ಬರೂ ಮಾತನಾಡಲಾರಂಭಿಸಿದರು. ಹತ್ತು ಗಂಟೆ ಹೊಡೆಯಿತು. ಹೊತ್ತಾಯಿತೆಂದು ರಂಗಣ್ಣ ಎದ್ದನು. ತಿಮ್ಮರಾಯಪ್ಪ ಜೊತೆಯಲ್ಲಿ ಎದ್ದು, ಸರಿ, ಹೊರಡು. ಬೇಗನೆಯೆ ಹೋಗಿ ಕೆಲಸಕ್ಕೆ ಸೇರಿಕೋ. ನಾನು ಹೇಳಿದ ಮಾತುಗಳನ್ನು ಮಾತ್ರ ಮರೆಯಬೇಡ, ಮೇಷ್ಟರುಗಳು ಬಡವರು. ಅವರ ಹೊಟ್ಟೆಯ ಮೇಲೆ ಹೊಡೆಯ ಬೇಡ, ಒಂದು ವೇಳೆ ಜುಲ್ಮಾನೆ ಹಾಕಬೇಕಾದರೆ, ಎರಡು ತಿಂಗಳ ಅನಂತರ ವಜಾ ಮಾಡಿಬಿಡು. ಯಾವುದನ್ನೂ ಮನಸ್ಸಿಗೆ ಬಹಳವಾಗಿ ಹಚ್ಚಿಸಿ ಕೊಂಡು ಹೋಗಬೇಡ, ನನ್ನಿಂದಲೇ ದೇಶೋದ್ಧಾರವಾಗುತ್ತದೆ, ನಾನೇ ಉದ್ದಾರ ಮಾಡಿಬಿಡುತ್ತೇನೆ ಎಂಬ ಭಾವನೆ ಇಟ್ಟು ಕೊಳ್ಳಬೇಡ. ಆರೋಗ್ಯ ಕೆಡುವಂತೆ ಹೆಚ್ಚಾಗಿ ಸರ್ಕಿಟು ತಿರುಗಬೇಡ ; ಹೆಚ್ಚಾಗಿ ಬೈಸ್ಕಲ್ ತುಳಿಯಬೇಡ. ಗ್ರಾಮಸ್ಥರನ್ನು ವಿರೋಧ ಮಾಡಿಕೊಳ್ಳಬೇಡ, ಸರ್ಕಿಟು ಹೋದಾಗ ಮೇಷ್ಟರೋ ಗ್ರಾಮಸ್ಥರೋ ಏನಾದರೂ ಹಾಲೂ ಮೊಸರೂ ಹಣ ತಂದುಕೊಡುತ್ತಾರೆ. ಬಿಗುಮಾನ ಮಾಡಿಕೊಂಡು ತಿರಸ್ಕರಿಸಬೇಡ. ಇವುಗಳಲ್ಲೆಲ್ಲ ದೋಷವಿಲ್ಲ. ಪುಡಿ ಕಾಸುಗಳಿಗೆ ನೀನು ಆಶೆ ಪಡುವುದಿಲ್ಲವೆಂಬುದು ನನಗೆ ಗೊತ್ತು. ನೀನು ನೀತಿ ಕೆಡುವುದಿಲ್ಲ ಎನ್ನುವುದೂ ನನಗೆ ಗೊತ್ತು. ನಗುನಗುತಾ ಕೆಲಸ ಮಾಡು ; ನಗು ನಗುತಾ ಅವರೂ ಕೆಲಸಮಾಡುವಂತೆ ನೋಡಿಕೋ. ಜನಾರ್ದನಪುರ ಸ್ವಲ್ಪ ಪುಂಡು ರೇಂಜು ಸಾಲದ್ದಕ್ಕೆ ಅಲ್ಲಿ ಕೆಲವರು ಮುಖಂಡರ ಕಾಟ ಹೆಚ್ಚು. ಇಷ್ಟೇ ರಂಗಣ್ಣ ! ಸ್ವಲ್ಪ ಎಚ್ಚರಿಕೆಯಿರಲಿ; ಗುಮಾಸ್ತೆಯರ ಮೇಲೆ ಕಣ್ಣಿರಲಿ. ಸರ್ವಜ್ಞನ ವಚನ ನೆನಪಿದೆಯೋ ಇಲ್ಲವೊ ? – ನಂಬಿದಂತಿರಬೇಕು, ನಂಬದಲೆ ಇರಬೇಕು, ನಂಬಿದವ ಕೆಟ್ಟ ಸರ್ವಜ್ಞ’

‘ಒಳ್ಳೆಯದು ತಿಮ್ಮರಾಯಪ್ಪ! ಜ್ಞಾಪಕದಲ್ಲಿಟ್ಟು ಕೊಂಡಿರುತ್ತೇನೆ. ಇದಕ್ಕಾಗಿಯೇ ನಿನ್ನ ಹತ್ತಿರಕ್ಕೆ ನಾನು ಬಂದದ್ದು.’

‘ಬೆಂಗಳೂರು ಬಿಟ್ಟು ಹೊರಡುವ ಮೊದಲು ಇನ್ನೊಂದಾವೃತ್ತಿ ಬಾ, ತಾಂಬೂಲ ತೆಗೆದುಕೊಂಡು ಹೋಗು.’

‘ಹಾಗೇ ಆಗಲಿ, ನಿನಗೆ ಹೇಳದೆ ನಾನು ಹೊರಡುತ್ತೇನೆಯೆ?’ ಎಂದು ಉತ್ತರ ಹೇಳಿ ಬೈಸ್ಕಲ್ಲನ್ನು ಹತ್ತಿಕೊಂಡು ರಂಗಣ್ಣ ತನ್ನ ಮನೆಗೆ ಹಿಂದಿರುಗಿ ಬಂದನು.

ಮುಂದಿನ ಕೆಲವು ದಿನಗಳೆಲ್ಲ ಇನ್‌ಸ್ಪೆಕ್ಟರ್‌ಗಿರಿಗೆ ತಕ್ಕಂತೆ ಸಜ್ಜು ಮಾಡಿ ಕೊಳ್ಳುವುದರಲ್ಲಿ ಕಳೆದುವು. ಹೊಸದಾಗಿ ಕೆಲವು ಸರ್ಜ್ ಸೂಟುಗಳು, ಸರ್ಕಿಟಿಗೆ ಬೇಕಾದ ಮೆತ್ತೆ, ಹೋಲ್ಡ್ ಆಲ್ ಚೀಲ, ದಿಂಬುಗಳು, ಕಾಶ್ಮೀರ ಶಾಲು, ಟವಲ್ಲುಗಳು ಮೊದಲಾದುವನ್ನೆಲ್ಲ ಒದಗಿಸಿ ಕೊಂಡದ್ದಾಯಿತು. ಹಳೆಯ ಬೈಸ್ಕಲ್ಲನ್ನು ಮಾರಿಬಿಟ್ಟು ಹೊಸ ಬಿ. ಎಸ್. ಎ. ಬೈಸ್ಕಲ್ಲನ್ನು ತಂದದ್ದಾಯಿತು. ಸರ್ಕಿಟಿನಲ್ಲಿ ಅಡಿಗೆಗೆ ಬೇಕಾದ ಸಾಮಾನುಗಳನ್ನು ಇಟ್ಟು ಕೊಳ್ಳುವುದಕ್ಕೆ ಅಡಕವಾದ ಸಣ್ಣ ಡಬ್ಬಗಳು, ಆ ಡಬ್ಬಗಳನ್ನಿಡುವುದಕ್ಕೆ ಒಂದು ಟ್ರಂಕು-ಇವುಗಳ ಏರ್ಪಾಡಾಯಿತು. ತನ್ನ ಬಟ್ಟೆಗಳನ್ನು ಇಟ್ಟು ಕೊಳ್ಳುವುದಕ್ಕೆ ಎರಡು ಸೂಟ್ ಕೇಸುಗಳು, ಮುಖ ಕ್ಷೌರಕ್ಕೆ ಬೇಕಾದ ಕನ್ನಡಿ ಮೊದಲಾದ ಉಪಕರಣಗಳು, ಹಲ್ಲನ್ನುಜಿ ಕೊಳ್ಳುವ ಬ್ರಷ್, ಪೇಸ್ಟ್-ಎಲ್ಲವನ್ನೂ ತಂದುಕೊಂಡದ್ದಾಯಿತು. ರಂಗಣ್ಣನಿಗೆ ತಾನೊಬ್ಬ ದೊಡ್ಡ ಸಾಹೇಬ ನೆಂದೂ ತನ್ನ ದರ್ಬಾರು ಡೆಪ್ಯುಟಿ ಕಮೀಷನರ್ ಸಾಹೇಬರ ದರ್ಬಾರನ್ನು ಮೀರಿಸುವಂತಿರಬೇಕೆಂದೂ ಭಾವನೆಗಳಿದ್ದುವು. ಕೆಲವು ಕಡೆಗಳಲ್ಲಿ ಅಸಿಸ್ಟೆಂಟ್ ಇನ್‍ಸ್ಪೆಕ್ಟರುಗಳೆಂದರೆ ಅರಳಿಟ್ಟಿನ ಇನ್‌ಸ್ಪೆಕ್ಟರೆಂದೋ ಅವಲಕ್ಕಿ ಇನ್‍ಸ್ಪೆಕ್ಟರೆಂದೋ ಹಾಸ್ಯಕ್ಕೀಡಾಗಿದ್ದುದನ್ನು ಅವನು ತಿಳಿದಿದ್ದುದರಿಂದ ಆ ಮಟ್ಟಕ್ಕಿಳಿಯದೆ ಎಲ್ಲರಿಗೂ ಮೇಲ್ಪಂಕ್ತಿಯಾಗಿರಬೇಕೆಂಬ ಮಹತ್ವಾಕಾಂಕ್ಷೆ ಅವನಲ್ಲಿ ತುಂಬಿದ್ದಿತು. ಒಟ್ಟಿನಲ್ಲಿ ಸರೀಕರಲ್ಲಿ ತನ್ನ ಗೌರವವನ್ನು ಉಳಿಸಿಕೊಂಡು ಇಲಾಖೆಯ ಗೌರವವನ್ನೂ ಹೆಚ್ಚಿಸ ಬೇಕೆಂಬುದು ಅವನ ಇಚ್ಛೆ.

ಈ ರೀತಿ ಸಜ್ಜುಗಳಾಗುತ್ತಿದ್ದಾಗ ರಂಗಣ್ಣನ ಹೆಂಡತಿ ತನಗೆ ಸರಿಗೆಯಿರುವ ಎರಡು ಒಳ್ಳೆಯ ಧರ್ಮಾವರದ ಸೀರೆಗಳೂ ಕುಪ್ಪಸಗಳೂ ಬೇಕೆಂದು ಕೇಳಿದಳು. ಆ ಬೇಡಿಕೆ ನ್ಯಾಯವೆಂದು ರಂಗಣ್ಣನಿಗೆ ತೋರಿತು. ಪೇಟೆಗೆ ಹೋಗಿ ಆಕೆಗೆ ಬೇಕಾದ ಸೀರೆ ಕುಪ್ಪಸಗಳನ್ನು ತಂದದ್ದಾಯಿತು. ಇಷ್ಟಕ್ಕೆ ಸಜ್ಜು ಮುಗಿಯಬಹುದೆಂದು ರಂಗಣ್ಣನು ತಿಳಿದುಕೊಂಡಿದ್ದನು. ಆದರೆ ಅದು ಮುಗಿಯಲಿಲ್ಲ. ‘ನೋಡಿ, ಹುಡುಗರಿಗೆ ತಕ್ಕ ಬಟ್ಟೆ ಬರೆ ಇಲ್ಲ. ಪರದೇಶಿ ಮಕ್ಕಳಂತೆ ಅವರು ಓಡಾಡುವುದಕ್ಕಾಗುತ್ತದೆಯೆ? ಸ್ಕೂಲಿನಲ್ಲಿ ಅಮಲ್ದಾರರ ಮಕ್ಕಳು ಒಳ್ಳೆಯ ಬಟ್ಟೆ ಗಳನ್ನು ಹಾಕಿಕೊಂಡು ಕುಳಿತಿದ್ದರೆ ನಿಮ್ಮ ಮಕ್ಕಳು ಈ ಹಳೆಯ ಚಿಂದಿ ಗಳನ್ನು ತೊಟ್ಟು ಕೊಂಡು ಕುಳಿತಿರುವುದೆ ? ಖಂಡಿತ ಆಗುವುದಿಲ್ಲ. ಇಷ್ಟೆಲ್ಲಾ ಹಣ ಖರ್ಚಾಯಿತು. ಇನ್ನು ಒಂದು ನೂರು ರೂಪಾಯಿ ಖರ್ಚು ಮಾಡಿದರೆ ಅವರಿಗೂ ಬಟ್ಟೆ ಬರೆ ಆಗುತ್ತದೆ ಎಂದು ಆಕೆಯ ಒತ್ತಾಯವಾಯಿತು.

‘ಕೈಯಲ್ಲಿರುವ ಹಣವೆಲ್ಲ ಖರ್ಚಾಗಿ ಹೋಯಿತು. ಬ್ಯಾಂಕಿನಲ್ಲಿ ಇನ್ನೂರು ರೂಪಾಯಿ ಸಾಲವಾಯಿತು. ಪ್ರಯಾಣದ ವೆಚ್ಚಗಳಿಗೆ ಮಾತ್ರ ಹಣವಿದೆ. ಹುಡುಗರಿಗೆಲ್ಲ ಆಮೇಲೆ ಬಟ್ಟೆ ಬರೆಗಳನ್ನು ಒದಗಿಸೋಣ. ಇನ್ನೆರಡು ತಿಂಗಳು ಕಾಲ ತಾಳು.’

‘ಖಂಡಿತ ಆಗೋದಿಲ್ಲ. ಖರ್ಚಿನಲ್ಲಿ ಖರ್ಚು ಆಗಿ ಹೋಗಲಿ. ಇನ್ನೂ ಒಂದು ನೂರು ರೂಪಾಯಿ ಬ್ಯಾಂಕಿನಿಂದ ತನ್ನಿ, ಮುಂದೆ ನಿಮ್ಮ ಸಂಸಾರವನ್ನು ಬಹಳ ಹಿಡಿತದಿಂದ ನಡೆಸಿ ಹಣವನ್ನು ಉಳಿಸಿ ಕೊಡುತ್ತೇನೆ. ಈ ಸಾಲವೆಲ್ಲ ತೀರಿಹೋಗುತ್ತದೆ.’

ರಂಗಣ್ಣನು ವಿಧಿಯಿಲ್ಲದೆ ಮತ್ತೆ ಹಣವನ್ನು ತಂದು ಮಕ್ಕಳಿಗೂ ಬಟ್ಟೆಬರೆಗಳನ್ನು ಒದಗಿಸಿದನು. ಹೀಗೆ ಎಲ್ಲ ಏರ್ಪಾಟುಗಳೂ ಆದುವು. ತಿಮ್ಮರಾಯಪ್ಪನ ಮನೆಗೆ ಹೋಗಿ ಎಲ್ಲವನ್ನೂ ತಿಳಿಸಿದ್ದಾಯಿತು, ಅವನಿಂದ ಬೀಳ್ಕೊಂಡದ್ದಾಯಿತು.


Previous post ಹೃದಯ ತಜ್ಞರು
Next post ಆಟವಾಡುವ ಮಕ್ಕಳನ್ನು ಕಂಡು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…