ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ
ಶೀಲ ಮಾಡತೀರಿ ನಾಡೆಲ್ಲಾ
ತೊಗಲಿನ ಆಟಾ ತಿಳಿಯದು ತಮ್ಮಾ
ತಗಲುಮಾತು ಒಂದು ಚೂರಿಲ್ಲ ||ಪ||
ತೊಗಲಿನೊಳಗೆ ತೊಗಲ್ಹುಟ್ಟತೈತಿ
ಕಾಮನಾಟಾ ಕೇಳೋ ಕಡಿಮೆ ಜಲಾ
ಪಿಂಡರಕ್ತ ಕಾಯದೇಹ ಕಣ್ಣಿಗೆ ಛಾಯಾ
ಕಾಣಿಸುವದು ಈ ತೊಗಲಾ
ಕುಡಗೋಲ ಪಿಡಿದು ಕೂಲಿಮಾಡಿ
ತುಂಬಿಸಬೇಕೋ ಈ ಚೀಲಾ
ಒಂದರಘಳಿಗೀ ಅನ್ನವಿಲ್ಲದಿರೆ
ಸೈಲಬೀಳತೈತ್ಯೋ ಈ ತೊಗಲಾ
||ಇಳವು||
ತೊಗಲಿನ ಉಸಾಬರಿ ನಾನು ಎಷ್ಟು ಮಾಡಬೇಕ
ಬೇಗು ಬೆಳಗು ಸಂಜಿಯಾ ತನಕ
ಸ್ಥಿರವಿಲ್ಲದ ತೊಗಲು ಹುಟ್ಟಿಬಂತು ಸಾವುದಕ
ಗೊತ್ತುಹತ್ತಲಿಲ್ಲೋ ಸವಿ ಸುಖಕ
||ಏರು||
ತೊಗಲಿನ ಸವಿಸುಖ ತೊಗಲು ಬಲ್ಲದಿದು
ರಾತ್ರಿ ಹಗಲು ಹರಿದಾಡೋ ತೊಗಲಾ ||೧||
ಸತ್ತು ಹೋಗಲು ಭೂಮಿಯ ಕಿತ್ತು ಹಾಕತೈತಿ
ಮತ್ತೆ ತೊಗಲು ಜೀವಕಾಧಾರಾ
ತೊಗಲಿನ ಬಾರು ಮಿಣಿ ಜತಿಗೆ ಕಣ್ಣಿ ತೊಗಲ ಮ್ಯಾಡಾರ
ತೊಗಲಿಗೆ ತೊಗಲಾ ಮದುವೆ ಮಾಡಿದರು
ತೊಗಲಿಗೆ ಮಾಡ್ಯಾರೋ ಉಪಕಾರ
ಅರಿಶಿನ ಕುಂಕುಮ ಅರದು ಎರದುಕರ
ತೊಗಲಿಗೆ ಮಾಡ್ಯಾರೋ ಸಿಂಗಾರಾ
||ಇಳವು||
ತೊಗಲಿಗೆ ಮೆಚ್ಚಿ ವೀರಾಧಿವೀರ ಜನರೆಲ್ಲಾ
ಸತ್ತುಹೋದರೆಂಬುವದು ಗುಲ್ಲಾ
ಇಂದ್ರ ಚಂರ್ರ ದೇವತೆ ಋಷಿ
ಮುಳುಗಿ ಹೋದರೋ ಎಲ್ಲಾ
ಇದರಾಟಾ ಯಾರಿಗೂ ತಿಳಿಲಿಲ್ಲಾ
||ಏರು||
ನಾ ಆದರೇನು ನೀ ಆದರೇನು
ಅರಸ ಪ್ರಧಾನಿ ಆದರೋ ತೊಗಲಾ || ೨ ||
ತೊಗಲು ತೊಳಿದುಕರ ನೀರ ಮಡಿಯ ಮಾಡಿ
ಗುಂಡಿಯಂತಿದೋ ಪಿಕನಾಶಿ
ಗಂಧ ವಿಭೂತಿ ತೊಗಲಿಗೆ ಧರಿಸಿ
ಜಾತಿ ಚಾತಿ ಬ್ಯಾರೆಯೆನಿಸಿ
ಜಪತಪವೆಂದು ಸನ್ಯಾಸಿ
ಬೂದಿಯೆಲ್ಲ ಮೈಯಿಗೆ ಪೂಸಿ
ಶಿವಶಿವಯೆಂದು ಶಿವಪೂಜಿ ಮಾಡುತಿ
ತೊಗಲಿನ ಮ್ಯಾಲೆ ಕೂತು ಜಪ ಎಣಿಸಿ
||ಇಳವು||
ಬಂಧು ಬಳಗಯೆಲ್ಲ ಮುಂದು ಹಾಕಿಕೊಂಡು ಬರುತೀರಿ
ತೊಗಲಿನ ಬೀಗರಿರತೀರಿ
ಮಿಗಿಲಾದ ತೊಗಲಿಗೆ ಮಾನ ಮರ್ಯಾದೆ ಮಾಡತೀರಿ
ದಾನ ದಕ್ಷಿಣೆಯನ್ನು ಕೊಡತೀರಿ
|| ಏರು||
ಸಿದ್ದ ಶಿಶುನಾಳಧೀಶನ ದಯೆಯೊಳು
ಬುದ್ಧಿವಂತರು ತಿಳಿಯಿರಿ ತೊಗಲಾ || ೩ ||
*****