-೧-
ಕತ್ತೆತ್ತಿದರೆ ಸಾಕು ನಡುರಾತ್ರಿಯಲ್ಲಿ
‘ಲಕ್ಷ ನಕ್ಷತ್ರಮಯ ವಕ್ಷಾಂತರಿಕ್ಷ!
ಕುಚುಕದ ಅರೆಮರೆಗೆ ಊರ್ವಶೀವಕ್ಷ!
ನೀಲಿಯಂಗಳದಲ್ಲಿ ಎಲ್ಲೆಂದರಲ್ಲಿ
ಮಿಂಚಿ ಹೊಂಚುವ ಕಣ್ಣು,
ಆಹ! ಇರುಳಿನ ಹಕ್ಕಿ ಕೊಕ್ಕಿನಿಂದೆತ್ತೆತ್ತಿ
ತಿನ್ನಲಿರಿಸಿದ ಹಣ್ಣು;
ಒಂದರಿಂದೊಂದಕ್ಕೆ ಗೆರೆಯೆಳೆದ ಪಕ್ಷಕ್ಕೆ
ಕೋಟಿ ಚಕ್ರವ್ಯೂಹ,
ಜ್ಯಾಮಿತಿಯ ಉಸಿರು ಕಟ್ಟಿಸುವ, ಸಾಧಿಸಬರದ
ಅಗಣಿತ ಪ್ರಮೇಯ.
ಕ್ಷುದ್ರಗಳ ಮುಕ್ಕಿ ಸೊಕ್ಕಿದ ಬುದ್ಧಿ ಇಲ್ಲಿ.
ಪೂರ ಕಕ್ಕಾಬಿಕ್ಕಿ,
ಉಸಿರು ಕಟ್ಟಿದೆ ಹುಚ್ಚುನೆರೆಯಲ್ಲಿ ಸಿಕ್ಕಿ.
ಯಾವುದೋ ಚಿಕ್ಕೆ ಮತ್ತಾವುದಕ್ಕೋ ಓಡಿ
ಸುತ್ತು ಹಾಕುತ್ತ,
ಯಾವ ನೀಹಾರಿಕೆಯೊ ಯಾವುದೋ ಗ್ರಹದ
ತೇರನೆಳೆಯುತ್ತ,
ಯಾರು ಹೂಡಿದ್ದೊ ಈ ಚದುರಂಗದಾಟ
ಯಾವ ಐನ್‌ಸ್ಟೀನರೂ ಹೊಕ್ಕಿರದ ತೋಟ ?
ನೆಚ್ಚಿ ಬದುಕಿದ ನೆಲದ ಸತ್ಯಗಳಿಗೆಲ್ಲ
ಇಲ್ಲಿ ಶೀರ್ಷಾಸನ;
ಗೋಳದ ಗುರುತ್ವದಾಚೆಗೆ ಗಿರಿತೂಕವೂ ಜಳ್ಳು,
ಬೆಳಕಿನ ವೇಗದಲ್ಲಿ ಚಲಿಸಲು
ವಸ್ತುರೂಪವೇ ಸುಳ್ಳು,
ಬಣ್ಣ ಬರೀ ಕಣ್ಣ ಭ್ರಮೆ
ಕಣ್ಣೋ ಅದಕ್ಕೆ ಕುಣಿವ ಮರುಳು,
ಇಲ್ಲಿಯ ಹಗಲು ಎಲ್ಲಿಗೋ ಇರುಳೂ ಅಲ್ಲವಾಗಿ
ಈವರೆಗೆ ಕಂಡದ್ದೆಲ್ಲ
ಕಾಣದ್ದರ ನೆರಳು-
ಎಂಬ ಬಗೆ ಕವಿಸಿ ಕುದಿಸುವ ಜ್ಯೋತಿಯಣುಗಳೆ
ಕೋಟಿಗಳ ಅಣಕಿಸುವ ನಕ್ಷತ್ರಗಂಗೆಗಳೆ
ಅಂತರಿಕ್ಷದ ಮಹಿಮೆ ಹಾಡುವ ಅಭಂಗಗಳೆ
ವಿಶ್ರಾಂತಿಗಾಗಿ ಶಚಿ ಕಳಚಿಟ್ಟ ತೊಡವುಗಳೆ
ಗಾಳಿಯಲುಗಾಟಕ್ಕೆ ಪಾರಿಜಾತದ ವೃಕ್ಷ
ತಪತಪನೆ ಸುರಿಸಿರುವ ಹೂವುಗಳೆ ಹೇಳಿ,
ಮಾಯೆಯಲ್ಲಿಳಿದ ಸ್ಟಷ್ಟಿಯಂಗಗಳೆ ಹೇಳಿ,
ಹೇಗೆ ಬಂದಿರಿ ನೀವು ?
ಯಾರ ಆಜ್ಞೆಗೆ ಗಾಣ ಸುತ್ತುತ್ತಿರುವಿರಿ ನೀವು?
-೨-
ನೆಲದಲ್ಲಿ ಜಲದಲ್ಲಿ ವಾಯುಗೋಳದ ಕೋಟಿ ಕೋಟಿ
ಕುಡಿಕೆಗಳಲ್ಲಿ ಕುದಿವ ಪ್ರಾಣ,
ಕಡಲ ಲಯಕ್ಕೆ ಮಿಡಿವ ಗುಟ್ಟುಗಳು, ಬೊಂಬೆಗಳ
ಕೆಳಚರಂಡಿಗಳಲ್ಲಿ ಸೃಷ್ಟಿಗಾನ.
ಹೃದಯ ಯಕೃತ್ತು ಶ್ವಾಸಕೋಶ, ಮಿದುಳಿನ ಜಾಲ
ಬುದ್ಧಿ ತತ್ತರಿಸುವ ರಹಸ್ಯಭಾಂಡ,
ಸೃಷ್ಟಿಯ ಮಸಾಲೆಯನ್ನು ನೆಕ್ಕಿ ಚಪ್ಪರಿಸುವ
ತೇಗುವಿಂದ್ರಿಯ ರಕ್ತಮಾಂಸ ಪಿಂಡ,
ಕೂಗಿ ಬೇಡುವ, ಸಿಗದೆ ರೇಗಿ ಕಾಡುವ, ಸಿಕ್ಕು
ತಬ್ಬಿ ಹಾಡುವ ಚೋದ್ಯ, ಯಕ್ಷಗಾನ;
ತನ್ನೊಳಗೆ ಘಟಿಸುವುದ ತಾನೇ ಅರಿಯದ ಘಟ
ಯಾರೋ ಹೆದೆಗೆ ಹೂಡಿ ಜಿಗಿದ ಬಾಣ.
ಯಾಕೆ ಗಂಡಿಗೆ ಹೆಣ್ಣು ಹೆಣ್ಣು ಗಂಡಿಗೆ ಸದಾ
ಕಾಮಕೊಪ್ಪರಿಗೆಯಲಿ ಬೇಯಬೇಕು?
ಕೊಡುವಂತೆಯೇ ಗಂಡು, ಪಡೆವಂತೆಯೇ ಹೆಣ್ಣು
ಪೂರಕ ವಿರೋಧ ಮೈ ಪಡೆಯಬೇಕು?
ಬಸಿರ ಕತ್ತಲಿನಲ್ಲಿ ಜಿಗಿತ ಪ್ರಾಣಕ್ಕೆ ಏಕೆ
ಹೊಕ್ಳುಳಿನ ಬಳ್ಳಿ ರಕ್ಷೆ ರಚಿಸಬೇಕು?
ಬಿದ್ದ ಫಲವನ್ನು ಪ್ರೀತಿಯಿಂದ ಎದೆಗಪ್ಪಿದರೆ
ಅಲ್ಲೇ ಹಾಲಿನ ಧಾರೆ ಚಿಮ್ಮಬೇಕು?
‘ನಿಲ್ಲು ನಿಲ್ಲೆಲೆ ನವಿಲೆ ನಿನ್ನ ಕಣ್ಣುಗಳೇಸು
ಕಣ್ಣ ಬಣ್ಣಗಳೇಸು, ಎಣಿಸಲಾರೆ’
ಬೆರಗಿಗುತ್ತರವಿತ್ತು ಮಣಿಸಲಾರೆ,
‘ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಲ್ಲೆ ಆಹಾರವಿತ್ತವರು ಯಾರೋ?’
ಈ ಗಂಟುಗಳನ್ನೆಲ್ಲ ಬಿಚ್ಚುವರು ಯಾರೋ?
-೩-
ತಾಯೇ ಡಯೋಟೀಮ
ಏನು ಹೇಳಿದ್ದು ನೀ ಸಾಕ್ರಟೀಸನಿಗೆ ?
ತಕ್ಕ ಉತ್ತರವಾಯ್ತೆ ಯಾಜ್ಞವಲ್ಕರ ಮಾತು ಮೈತ್ರೇಯಿಗೆ?
ಬಿಂಬಗಳ ಮೀಟಿ, ಮೇಲೇರಿ ಶಿಖಿರದ ತುದಿಗೆ
ಮಿಂಚುವ ಹುಚ್ಚು ಯಾಕೆ ಬೇಂದ್ರೆ ಬ್ಲೇಕರಿಗೆ ?
ಆರಂಭದಿಂದಲೂ ಗುಮಾನಿಯಿತ್ತೆ ಅವರಿಗೆ?
ಕಾಣದಿದ್ದರು ವಸ್ತು ನೆರಳು ಕಂಡಿತ್ತೇ
ಹೇಗೋ ವಾಸನೆ ಹಿಡಿದು ಪತ್ತೆ ಹಚ್ಚಿದ ದಾರಿಯಲ್ಲಿ
ಸ್ಪಷ್ಟಾಸ್ಪಷ್ಟ ಹೆಜ್ಜೆ ಗುರುತಿತ್ತೆ?
ಗೋಪುರದ ದಾರಿಯಲ್ಲಿ ಮೇಲಕ್ಕೇರುವ ಹಾಗೆ
ಕಾಣದ್ದು ಯಾವುದೋ ಕರೆಯಿತೇನು?
ಕಣ್ಣಿನಲಿ ಕನಸುಗಳ ಬರೆಯಿತೇನು?
ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ
‘ಎಲ್ಲಿರುವೆ ಹೇಳು ನೀ ನಿಜವೆ, ನೆರಳೆ’?
ಅಥವಾ ಎಲ್ಲಾ ಬರೀ ಮನಸ್ಸಿನ ಕರಾಮತ್ತೊ?
ಗಾಯಕ್ಕೆ ಮದ್ದು ಸವರುವ ತಂತ್ರವೋ?
ನಂಬಿದ ಚಿತ್ತ ತನ್ನ ಭ್ರಮೆಯ ಉರುಳಲ್ಲಿ
ತಾನೇ ಕೊರಳನ್ನಿಡುವ ತಿರುಮಂತ್ರವೋ?
ಬರಿಯ ಶಂಕೆಯ ಬೆಂಕಿಯಲ್ಲಿ ಸುರಿಸಿದ ಆಜ್ಯ
ಉರಿಯ ನೆಂಟು,
ಟೇಬಲಿನ ಸುತ್ತ ಹರಟೆಯೆ ಕೊರಗು ಬೆಳಕಿನಲಿ
ಬಿಚ್ಚಬಾರದ ಗಂಟು.
ಮಸೆದ ಬುದ್ಧಿಗಳ ಚಮತ್ಕಾರ ಸೆಮಿನಾರಲ್ಲಿ
ಅಳೆಯಲಾಗದ್ದು
ಬಯಕೆ ಬಣವೆಯೆ ಸುಟ್ಟು ಸಾವಿನೆದುರೇ ಪಟ್ಟು
ಹಿಡಿದು ಸೆಣಸುವ ಧೀರ ಪಡೆಯಬಹುದಾದ್ದು.
ಹಟಹಿಡಿದು ಕೂತ ವಟುವನ್ನು ಬೇಡಿದ ಯಮ :
ಹೆಣ್ಣು ನೆಲ, ಹೊನ್ನು
ಏನುಬೇಕೋ ಎಲ್ಲ ಕೊಡುವೆ ಹೂ ಎನ್ನು
‘ನಚೇಕೇತೋ ಮರಣಂ ಮಾನುಪ್ರಾಕ್ಷಿಃ’
ಕಾಲಡಿಗೆ ಬಿದ್ದಿದ್ದ ಕಾಯಸುಖವನ್ನೆಲ್ಲ
ಕಸದಂತೆ ಬದಿಸರಿಸಿ ಬಾಲರ್ಷಿ ನುಡಿದ :
‘ವರಸ್ತು ಮೇ ವರಣೀಯಂ ಸಏವಂ’
ಬೆಳಕು ತರಲೆಂದು ಬಾಳನ್ನೆ ಬಲಿಕೊಟ್ಟು
ಉರಿಯುತ್ತ ಕೂತ ಬಾಲಾರ್ಕನ ಕಥೆ
ಬುದ್ಧ, ಅಲ್ಲಮ, ಪರಮಹಂಸ, ಶಂಕರ, ರಮಣ
ಉರಿದ ಬತ್ತಿಯ ಬಾಳು ಬೆಳಕಿನ ಜೊತೆ.
-೪-
ಇತ್ತ ಬೆಳಕಿನ ಸರಳು, ನಡುವೆ ಶುದ್ಧ ಸ್ಫಟಿಕ
ಬಣ್ಣ ಬಣ್ಣದ ಕಿರಣಜಾಲ ಅತ್ತ
ಕಾಣದ ಕತ್ತಲಲ್ಲಿ ಝೇಂಕರಿಸುತ್ತಿರುವ ಶ್ರುತಿಮೂಲ
ಹಸಿರ ಮಾಯಾಜಾಲ ದಿಗಂತದನಕ.
ತರ್ಕದಲ್ಲೇ ನೆಟ್ಟು ಅನುಭವದ ಗತಿಬಿಟ್ಟು
ಒಡೆದ ಮಡಕೆಯಲಿ ನೀರೆತ್ತುವ ಛಲ
ವ್ಯರ್ಥ. ಭಾವನೆಯ ಕಲ್ಪನೆಯ ರೆಕ್ಕೆಯ ಆಡಿ
ನೆಗೆವ ಪ್ರಜ್ಞೆಗೆ ಮಾತ್ರ ದಕ್ಕುವ ಫಲ.
ತಟಸ್ಥನಾದರೆ ಏನು ತಿಳೀದೀತು, ಭೋರ್ಗರೆದು
ನುಗ್ಗುವ ಮಹಾನದಿಯ ಒಡಲ ಮರ್ಮ,
ತೆರೆಯ ಏರಿಳಿತ, ಸುಳಿ, ಸೆಳವು, ಜಲಚರ, ಬಂಡೆ
ತಳದ ಮರಳಿನ ದುಂಡು ಹರಳ ಬಣ್ಣ ?
ಅಲ್ಲೆ ದಂಡೆಯ ಮೇಲೆ ಇಟ್ಟ ಬಗೆ ಬಗೆ ಕುಡಿಕೆ
ಮಡಕೆ, ಹಂಡೆಗಳಲ್ಲಿ ನದಿಯ ನೀರು;
ರುಚಿಯೊಂದೆ, ಆದರೂ ನದಿಯ ಬಲ, ಸೆಳವಿಲ್ಲ
ಕೂಡಿಕೊಳ್ಳದೆ ತಿಳಿವ ದಾರಿಯಲ್ಲ.
ನೆಲದಲ್ಲಾರಿದ ನೀರು ಮುಗಿಲ ಬಸಿರಲ್ಲಿದೆ.
‘ಸತ್ತಮೇಲೂ ಮತ್ತೆ ಏಳುತ್ತೇವೆ
ಕನಸ ಕಾಣುತ್ತೇವೆ ಸೃಷ್ಟಿಸುತ್ತೇವೆ
ಚಂದ್ರ ಮಂಡಲದಾಚೆ ಸ್ವರ್ಗವನ್ನೂ’
ಅನಂತ ವಿಶ್ವದ ದಿವ್ಯಗಾನವನ್ನೂ
-೫-
ತೀವ್ರಭೋಗದ ಬಂಡೆ ಬೆಲ್ಲದಲ್ಲಿ
ಕಡೆದಿಟ್ಟ ಶಿಲ್ಪ
ಕೈಗಳಿವೆ ಅಡವು, ದೃಷ್ಟಿಯಿದೆ ಕಾಣದು,
ಕಾಲಿದ್ದರೂ ಏನು ನಡಿಗೆಯಿಲ್ಲ
ಸತ್ತಂತಿರುವ ಬದುಕು ಸಾವಿರದ ಸೃಷ್ಟಿಯ
ರಹಸ್ಯಕ್ಕೆ ಬೆರಗಾಗಿ ಚಿಗುರುತ್ತದೆ,
ತೆರೆದ ದೃಶ್ಯದ ಮರೆಗೆ ಕರೆದ ತತ್ವದೆ ಸಾರ
ತಿಳಿವ ಕಾತರತೆಯಲಿ ಚೀರುತ್ತದೆ.
‘ಮರೆಗೆ ನಿಂತು ಕಾಯುತಿರುವ
ಕರುಳು ಯಾವುದು
ಸಾವಿರದ ಸೋಜಿಗವ ತೆರೆವ
ಬೆರಳು ಯಾವುದು?’
‘ಯಾರು ಬೆಳಕ ಸುರಿದರು?
ನದಿಗಳನ್ನು ತೆರೆದರು?
ಆಕಾಶದ ಹಾಳೆಯಲ್ಲಿ
ತಾರೆಗಳನು ಬರೆದರು?’
‘ಬಾ ಬಾ ಓ ಬೆಳಕೇ
ಕರುಣಿಸಿ ಇಳಿ ನೆಲಕೆ
ನೀನಿಲ್ಲದೆ ಬಾಳೆಲ್ಲಿದೆ
ಹೋಳಾಗಿದೆ ಬದುಕೇ?’
ನಿಂತ ಬದುಕು ಹೀಗೆ ನಿನ್ನ
ಚಿಂತೆಯಲ್ಲಿ ಚಲಿಸುತ್ತ
ನೋಡುತ್ತೇನೆ ಸುತ್ತ;
ನೆಲಬಾನು ಕಡಲಲ್ಲಿ ನಿನ್ನದೆ ಹೆಸರು
ಹರಿಯುವ ಇರುವೆಯಲ್ಲೂ ನಿನ್ನದೆ ಉಸಿರು.
-೬-
ಕೊಂಬೆಗಳ ಏರಿ ಮರದಿಂದ ಮರಕ್ಕೆ ಹಾರಿ
ಹಲ್ಕಿರಿವ ಮಂಗ
ಸಲ್ಲದ ವೇಷ ತೊಟ್ಟು ಉರಿವ ರಾಕೆಟ್ಟೇರಿ
ಗ್ರಹದಿಂದ ಗ್ರಹಗಳಿಗೆ ನೆಗೆವ ಭಂಗ.
ಯಾಕೆ ಕಾತರಪಡುವೆ,
ಏನ ಹುಡುಕುತ್ತಿರುವೆ?
ಅಲೆವ ಮನಸಿನ ಕಾಲು ಕಡಿಯಬೇಕೋ,
ಹೊರಗೆ ಹರಡಿದ ಮರದ
ಮೂಲ ಮಣ್ಣೊಳಗಿದೆ
ಮನದಂತರಿಕ್ಷವನು ಈಜಬೇಕೋ!
‘ಏಳು ಸಮುದ್ರ ಏಳು ಪರ್ವತಗಳು
ಹಾಳುಬಿದ್ದವು ಕೇಳಿ ಬ್ಯಾಸತ್ತೆ,
ನೀರು ತುಂಬಿದ ಬಾವಿ ನದರಿಟ್ಟು ನೋಡಿದೆ
ನದಿ ನದಿ ಕಲಕ್ಯಾಡಿ ಬ್ಯಾಸತ್ತೆ’
ಆಕಾಶವಳೆದದ್ದು ಸಾಕೋ ಸಾಕು,
ಸ್ಕೇಲು ತಕ್ಕಡಿ ಟೇಪು ಯಾಕೆ ಬೇಕು?
ಒಳಗೆಲ್ಲೋ ಗುಟ್ಟಾಗಿ ಹರಿಯುವ ಸರಸ್ವತಿಯ
ಅಮೃತದಾಳಗಳಲ್ಲಿ ಮೀಯಬೇಕು.
‘ಕರೆಯುವುವು ಮತ್ತು ಮತ್ತೂ ಬಾನ ಹಕ್ಕಿಗಳು’
ಕೇಳಿ ಕಳವಳಿಸುವುದು ಪ್ರಾಣಪಕ್ಷಿ
ತಾಯೆ ದನಿ ಗುರುತಿಸದೆ ಮರಿಹಕ್ಕಿ ಕಂಗಾಲು
ತನ್ನ ಮೂಲವ ತಾನೆ ಕಾಣದಕ್ಷಿ
‘ಕಲ್ಪದಾದಿಯಲ್ಲೆ ನನ್ನ ನಿನ್ನ ವಿರಹವಾಗಿ
ಎಲ್ಲೊ ಏನೊ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ,
ಮರವೆಗೊಂಡು ಬಿದ್ದೆ ನಾನು ನೆಲದ ಮಣ್ಣುತಾಗಿ’
ಬಿದ್ದಿದ್ದರೂ ಏನು ಬಿದ್ದಿರುವೆ ಎಂಬರಿವು
ಎದ್ದು ಹಾರಲು ಭಾವದುದ್ದೀಪನ,
ಗುರುತು ಸಿಕ್ಕಿದ ಮೇಲೆ ಮರೆತಿದ್ದ ಕೊರಗೇಕೆ?
ಮತ್ತೆ ಕರೆಯುವ ತವರಿನತ್ತ ಯಾನ.
‘ಕಾಣದಿರುವುದರ ದನಿ ಕಾಡುತಿರಲಿ
ಮುಗಿಲುಗಳು ಮನದಲ್ಲಿ ಆಡುತಿರಲಿ
ಪ್ರಾಣಪಕ್ಷಿಯ ರೆಕ್ಕೆ ಜ್ಞಾನಗೋಪುರ ಹಕ್ಕೆ
ಆಚೆ ದಡದೆಡೆ ಸದಾ ತುಯ್ಯುತಿರಲಿ.’
———————–
ಈ ಕವಿತೆಯಲ್ಲಿ ಕಠೋಪನಿಷತ್ತು, ಕನಕದಾಸ, ಶರೀಫ ಸಾಹೇಬ, ಯೇಟ್ಸ್, ಬೇಂದ್ರೆ,
ಮಧುರಚೆನ್ನ, ಕುವೆಂಪು, ಅಡಿಗ – ಈ ಕವಿಗಳಿಂದ ಕೆಲವು ಸಾಲುಗಳನ್ನು ಉದ್ಧರಣ
ರೂಪದಲ್ಲಿ ಬಳಸಲಾಗಿದೆ.
*****