ಚೈತ್ರ ಎಷ್ಟು ಬಂದವೋ ಕದವ ಬಡಿದು ನಡೆದವೋ
ಹಕ್ಕಿ ಕೊರಳು ಕರೆಗಂಟೆಯ ಒತ್ತಿ ಒತ್ತಿ ದಣಿದವೋ
ತೆರೆಯ ಬರದ ಬಾಗಿಲೇ, ನೆಲ ಹಾಯದ ನೇಗಿಲೇ
ಇದ್ದರಾಯ್ತೆ ಬದುಕು ಬರಿದೆ ? ನುಡಿಯಬೇಕು ಮದ್ದಲೆ
ಇರುವುದೇಕೆ ಕೊರಡು ಹೀಗೆ ಹೊರಚೆಲ್ಲದೆ ಬೆಂಕಿ,
ಕೂಡಿ ಕಳೆದು ಗುಣಿಸದಿರಲು ವ್ಯರ್ಥತಾನೆ ಅಂಕಿ ?
ಮೊಳೆಯದಿರುವ ಬಿತ್ತಕೆ, ಸುಳಿ ದಾಟದ ಚಿತ್ರಕೆ
ಅರ್ಥವುಂಟೆ ಕವಚ ಕಳೆದು ಕೂಡದಿರಲು ಸತ್ಯಕೆ ?
ಮೈಯ ತಾಗಿ ಹೋದರೇನು ಮನಸಿಗಿಳಿಯದಂಥದು ?
ಬರಿಯ ಚಿಪ್ಪು, ಒಳಗೆ ಅವಿತ ಮುತ್ತು ಕಾಣದಂಥದು
ಕೆಂಪು ಹಸಿರು ನೀಲಿ ಬೆರಸಿ, ಬಿಳಿಯ ಕಪ್ಪು ಕುಡಿಯದೆ
ಎಲೆ ಚಿಮ್ಮುವುದೆಂತು ಜೀವ ಕಾವುಗೊಂಡು ತಳಿಯದೆ ?
ಎದುರಾಗುವ ಮೆರವಣಿಗೆಯ ಎದುರಿಸಲೀ ಜೀವ
ಬೇಕು ಬೇಡ ಟೀಕೆಯಿರದೆ ಎಲ್ಲ ಹಾವ ಭಾವ
ಆಯ್ಕೆ ಏಕೆ, ಏಕೆ ತಾಕಲಾಟ ಏಕೆ ಕಾತರ ?
ಅರ್ಥ ಸಿಗಲು ಅನುಭವಕ್ಕೆ ಜರಿಯಂಚಿನ ಧೋತರ
ಬೇವು ಕಹಿಯೆ, ಆದರೇನು ? ಮರದ ನೆರಳು ತಂಪು
ಕಳೆದು ನೆನೆದ ಅನುಭವದಲಿ ಕಹಿಯೂ ಸವಿ, ಕಂಪು
ಬೇವು ಉರುಳಿ ಉರುವಲಾಗಿ, ಕಬ್ಬು ಜಲ್ಲೆ ನುರಿಯಲಿ
ಕುದಿವ ರಸದ ಸವಿಯು ಆಲೆಮನೆಯಾಚೆಗೂ ಹಬ್ಬಲಿ
*****