ಇಂದ್ರಗಿರಿಯ ನೆತ್ತಿಯಲ್ಲಿ ನಿಂತ ಮಹಾಮಾನವ
ನೀಡು ನಮಗೆ ನಮ್ಮೊಳಗನು ಕಂಡುಕೊಳುವ ಧ್ಯಾನವ
ಹೌದು ನೀನೇ ಮಹಾಬಲಿ, ಹೆಣ್ಣು ಹೊನ್ನು ಗೆದ್ದೆ
ನಿಜದ ಬೆಳಕ ಕಾಣಬಯಸಿ ನಿದ್ದೆಯಿಂದ ಎದ್ದೆ ;
ಕಾಳಗದಲಿ ಗೆದ್ದೆ ನಿಜ, ಅದಕಿಂತಲು ಮಿಗಿಲು
ಗದ್ದೆ ನೀನು ನಿನ್ನನ್ನೇ ಸುಟ್ಟೆ ಭವದ ದಿಗಿಲು.
ಕೊಳೆಕಸಗಳ ಕೂಡಿ ನೆಲದಿ ಹರಿಯುತಿದ್ದ ನೀರೇ
ಆವಿಯಾಗಿ ಮುಗಿಲಾದೆ ಬಾನನಲೆವ ತೇರೇ,
ಕಣವಿದ್ದುದು ಗಣಿಯಾಯಿತು ನೋಡಿ ನಮಗೆ ಬೆರಗು
ರವಿಯ ಕಂಡು ಅಚ್ಚರಿ ಹುಲ್ಲು ಸುಡುವ ಉರಿಗೂ.
ಆತ್ಮಶಕ್ತಿ ರೂಪುಗೊಂಡು ನಿಂತ ಧೀರಶಾಸನ
ತನ್ನ ತಾನೆ ಗೆಲುವ ಬಗೆಯ ಬೋಧಿಸುವ ಧೀರನ
ನೋಡಿದೊಡನ ಶಾಂತವಾಗದೇನು ಭವದ ತಳಮಳ?
ಬೆಳಕಿಗೆ ಮುಖವಾಗದೇನು ಮನವು ನೀಗಿ ಕಳವಳ?
*****