ತಿಮ್ಮರಯಪ್ಪನ ಕಥೆ
ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ ಗಾನವನ್ನು ಹಗಲಿರಳೂ ಕೇಳಿ, ಸಾಲದುದಕ್ಕೆ ಅವುಗಳಿಂದ ಮುತ್ತಿಡಿಸಿಕೊಂಡು ಮನೆಯ ಮಂದಿಯೆಲ್ಲ ಮಲೇರಿಯಾ ಜ್ವರದಲ್ಲಿ ನರಳಿ, ಬದುಕಿದರೆ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪಂಚಾಮೃತದ ಅಭಿಷೇಕ ಮಾಡಿಸುತ್ತೇನೆಂದು ಹರಕೆ ಮಾಡಿಕೊಂಡು ಬೆಂಗಳೂರಿಗೆ ಸಂಸಾರ ಸಮೇತನಾಗಿ ಬಂದಿದ್ದನು. ಬೆಂಗಳೂರಿಗೆ ಬಂದಮೇಲೆ ಸ್ನೇಹಿತರ ಮನೆಗಳಿಗೆ ಹೋಗುವುದು, ಅವರ ಯೋಗಕ್ಷೇಮಗಳನ್ನು ವಿಚಾರಿಸುವುದು, ತನ್ನ ಮತ್ತು ಮನೆಯವರ ಅನಾರೋಗ್ಯದ ವಿಷಯಗಳನ್ನು ತಿಳಿಸುವುದು, ಅವರು ಹೇಳುವ ಪ್ರೀತಿ ಪೂರ್ವಕವಾದ ಸಮಾಧಾನದ ವಾಕ್ಯಗಳನ್ನು ಕೇಳುವುದು, ಕಡೆಗೆ ಮನೆಗೆ ಹಿಂದಿರುಗಿ ಊಟಮಾಡಿ, ಮಧ್ಯಾಹ್ನ ನಿದ್ರೆ ಮಾಡುವುದು ಅವನ ದಿನಚರಿಯಾಗಿತ್ತು. ಸಾಯಂಕಾಲ ಪೇಟೆಯ ಕಡೆಗೋ ಲಾಲ್ ಬಾಗಿನ ಕಡೆಗೋ ಹೋಗುತಿದ್ದನು.
ಸೋಮವಾರ ಇರಬಹುದು. ಸಾಯಂಕಾಲ ಆರು ಗಂಟೆ ಸಮಯ. ರಂಗಣ್ಣ ಸರಿಗೆಯ ಪಂಚೆಯನ್ನು ಉಟ್ಟು ಕೊಂಡು ಒಳ್ಳೆಯ ಸರ್ಜ್‍ಕೋಟನ್ನು ತೊಟ್ಟುಕೊಂಡು ಒಂದಂಗುಲ ಸರಿಗೆಯ ರುಮಾಲನ್ನು ಇಟ್ಟುಕೊಂಡು ಪೇಟಯ ಕಡೆಗೆ ಹೊರಟಿದ್ದಾನೆ. ಮಾರ್ಕೆಟ್ ಚೌಕದ ಬಳಿಯ ಗಲಾಟೆಗಳನ್ನು ದಾಟಿಕೊಂಡು ದೊಡ್ಡ ಪೇಟೆಯ ಇಕ್ಕಟ್ಟು ರಸ್ತೆಯಲ್ಲಿ ಜನಸಂದಣಿಯಲ್ಲಿ ನುಸುಳಿಕೊಂಡು ಹೋಗುತ್ತಿದ್ದಾನೆ. ದೊಡ್ಡ ಪೇಟೆಯ ಚೌಕ ಬಂದಿತು. ತಲೆಯನ್ನು ಬಗ್ಗಿಸಿಕೊಂಡು ಹೋಗುತ್ತಿದ್ದಾಗ ಯಾರೋ ಹಿಂದಿನಿಂದ ಬಂದು ಬೆನ್ನಮೇಲೆ ತಟ್ಟಿ, ‘ಏನು ರಂಗಣ್ಣ ?’ ಎಂದು ಸಂಬೋಧಿಸಿದರು. ತಿರುಗಿ ನೋಡುತ್ತಾನೆ, ತಿಮ್ಮರಾಯಪ್ಪ ! ಅವನು ತನ್ನ ಪೂರ್ವದ ಸಹಪಾಠಿ, ಹಿಂದಿನ ಕಾಲದ ಸ್ನೇಹಿತ. ತಿಮ್ಮರಾಯಪ್ಪ ಸ್ಥೂಲಕಾಯದವನು ; ದೊಡ್ಡ ತಲೆ, ದೊಡ್ಡ ಹೊಟ್ಟೆ, ಅವನಿಗೆ ಒಂದು ಸೂಟಿಗೆ ಆರು ಗಜ ಡಬ್ಬಲ್ ಪನ್ನ ಬಟ್ಟೆ ಇಲ್ಲದಿದ್ದರೆ ಆಗದು. ಅಕಸ್ಮಾತ್ತಾಗಿ ಸಂಧಿಸಿದ ಸ್ನೇಹಿತನ ಕುಶಲಪ್ರಶ್ನೆ ಮಾಡಿದ್ದಾಯಿತು. ‘ತಿಮ್ಮರಾಯಪ್ಪ ! ಬಹಳ ದಿನಗಳಾಗಿ ಹೋದವು ; ನಡೆ, ಆನಂದಭವನಕ್ಕೆ ಹೋಗೋಣ. ಇಲ್ಲಿಯೇ ಇದೆ’ – ಎಂದು ರಂಗಣ್ಣ ಅವನ ಕೈ ಹಿಡಿದುಕೊಂಡು ಚಿಕ್ಕ ಪೇಟೆಯ ರಸ್ತೆಗೆ ತಿರುಗಿದನು. ತಿಮ್ಮರಾಯಪ್ಪನಿಗೂ ಹೋಟಲ್ ತಿಂಡಿ ಎಂದರೆ ಹೆಚ್ಚಿನ ಒಲವು.
ಆನಂದ ಭವನದ ಮಹಡಿಯ ಮೇಲೆ ಸ್ನೇಹಿತರಿಬ್ಬರೂ ಕುಳಿತು ತಿಂಡಿಗಳನ್ನು ತಿನ್ನುತ್ತ ಮಾತಿಗಾರಂಭಿಸಿದರು.
‘ಈಗ ನೀನು ಯಾವುದೋ ಕಂಪೆನಿಯ ಕಚೇರಿಯಲ್ಲಿ ಇರುವುದಾಗಿ ಪತ್ರಿಕೆಗಳಲ್ಲಿ ಓದಿದೆ. ಹೌದೇ ? ಸಂಬಳ ಎಷ್ಟು ? ಅಲೋಯನ್ಸ್ ಏನಾದರೂ ಉಂಟೋ ?’
“ನೋಡಪ್ಪ ! ನಾನು ಇಲ್ಲಿಗೆ ಬಂದು ಆರು ತಿಂಗಳಾದುವು. ಏತಕ್ಕೆ ಬಂದೆನೋ ಶಿವನೇ ! ಎಂದು ಪೇಚಾಡುತ್ತಿದೇನೆ.’
‘ಅದೇತಕ್ಕೆ ? ಮೊದಲಿನ ಸಂಬಳವೇ ಬರುತ್ತಿದೆಯೇ ? ಅಲೋಯೆನ್ಸ್ ಇಲ್ಲವೇ ?’
ಎಲ್ಲಾ ಇದೆಯಪ್ಪ, ಇಲಾಖೆಯಲ್ಲಿದ್ದಾಗ ನೂರೆಪ್ಪತ್ತೈದು ರೂಪಾಯಿಗಳ ಸಂಬಳ ಬರುತ್ತಿತ್ತು. ಮೇಲೆ ಭತ್ಯ ಬರುತ್ತಿತ್ತು. ಇಲ್ಲಿ ಇನ್ನೂರು ರೂಪಾಯಿ ಸಂಬಳ ಕೊಡುತ್ತಿದ್ದಾರೆ. ಮೇಲೆ ಎಪ್ಪತ್ತೈದು ರೂಪಾಯಿ ಅಲೋಯನ್ಸ್ ಕೊಡು ತ್ತಾರೆ. ಆದರೂ………’
‘ಇನ್ನೇನು ಆದರೂ ? ಹಿಂದಿನದಕ್ಕಿಂತ ನೂರು ರೂಪಾಯಿ ಹೆಚ್ಚಾಗಿ ಗಿಟ್ಟಿಸುತ್ತಾ ಇದ್ದೀಯೆ. ನಿನಗೆ ಅಸಮಾಧಾನಕ್ಕೇನೂ ಕಾರಣವೇ ಇಲ್ಲವಲ್ಲ. ನಿಮ್ಮ ಜನಕ್ಕೆ ಶಿಫಾರಸುಗಳಿರುತ್ತೆ, ಬಡ್ತಿಗಳು ದೊರೆಯುತ್ತೆ. ಅಲ್ಲಿ ಇಲ್ಲಿ ಅಲೋಯೆನ್ಸ್ ಬರುವ ಕಡೆ ಹುದ್ದೆಗಳು ದೊರೆಯುತ್ತವೆ. ನಮ್ಮನ್ನು ಕೇಳುವವರಾರು ? ತೀರ್ಥಹಳ್ಳಿ ಕೊಂಪೆಗೋ ಮೂಡಗೆರೆಗೋ ಮಿಡಲ್ ಸ್ಕೂಲ್ ಹೆಡ್ ಮಾಸ್ಟರ್ ಕೆಲಸಕ್ಕೆ ನಮ್ಮನ್ನು
ಹಾಕುತ್ತಾರೆ ?
‘ಅದು ನಿನ್ನ ಅಭಿಪ್ರಾಯ. ಕೇಳು ರಂಗಣ್ಣ ! ಬೆಂಗಳೂರಿಗೆ ಬಂದ ಮೇಲೆ ಹದಿನೈದು ಪೌಂಡು ತೂಕದಲ್ಲಿ ಇಳಿದು ಹೋಗಿದ್ದೇನೆ ! ಮನೆಯಲ್ಲಿ ದಿನವೂ ಆಕೆ-ಏಕೆ ಬಂದಿರೋ ಈ ಹಾಳು ಕೆಲಸಕ್ಕೆ ? ಆಗಲೇ ಮೂಳೆ ಬಿಟ್ಟು ಕೊಂಡಿದ್ದೀರಿ ; ನಮಗೆ ಈ ಕೆಲಸ ಬೇಡ ; ಹಿಂದಿನ ಕೆಲಸಕ್ಕೆ ಹೊರಟು ಹೋಗೋಣ ಎಂದು ಹೇಳುತ್ತಿದ್ದಾಳೆ.’
‘ವಿಚಿತ್ರದ ಮನುಷ್ಯರು ನೀವು ! ಈಗ ನಿನ್ನ ತೂಕ ಎಷ್ಟು ? ನಿನ್ನಾಕೆಯ ತೂಕ ಎಷ್ಟು ?’
‘ನನ್ನ ತೂಕ ಈಗ ಇನ್ನೂರ ಐದು ಪೌಂಡು. ಆಕಯದು ನೂರತೊಂಬತ್ತು ಪೌಂಡು, ಹಿಂದಿನಗಿಂತ ನೂರು ರೂಪಾಯಿ ಹೆಚ್ಚಿಗೆ ಸಂಬಳ ಸಾರಿಗೆ ಬರುತ್ತಿದೆ ಎಂದು ನೀನೇನೋ ಹೇಳಿದೆ. ಆದರೆ ಕೇಳು ಮಹಾರಾಯ ! ನಾನು ಬೆಳಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ರಾತ್ರಿ ಎಂಟು ಗಂಟೆಯಾದರೂ ಮನೆಗೆ ಬರುವುದು ಕಷ್ಟ, ಈ ದಿನವೇನೋ ಅಕಸ್ಮಾತ್ತಾಗಿ ಬೇಗ ಹೊರಟು ಬಂದೆ. ದಿನಾಗಲೂ ಬೆಳಗ್ಗೆ ಅಷ್ಟು ಹೊತ್ತಿಗೆಲ್ಲ ಊಟಮಾಡಿ ಅಭ್ಯಾಸವಿಲ್ಲ, ಟಿಫಿನ್ ಕ್ಯಾರಿಯರಿನಲ್ಲಿ ಅನ್ನ ಹುಳಿ ಇತ್ಯಾದಿಯನ್ನು ಮಧ್ಯಾಹ್ನ ತರಿಸಿಕೊಳ್ಳಬೇಕು. ಕಚೇರಿಯಲ್ಲೂ ಒಂದು ಕ್ಷಣ ವಿರಾಮವಿಲ್ಲ, ಮೂಟೆಗಳನ್ನು ತೂಕ ಮಾಡಿ, ಮಾಡಿ, ಆ ಲೆಕ್ಕಗಳನ್ನೆಲ್ಲ ಬರೆದೂ ಬರೆದೂ ಸುಸ್ತಾಗಿ ಹೋಗುತ್ತೆ, ದಿನಾಗಲೂ ಒಂದೇ ವಿಧವಾದ ಕೆಲಸ. ಬೇಜಾರು ಹೇಳ ತೀರದು. ನನಗೇನೂ ಈ ಹಾಳು ಕೆಲಸ ಬೇಕಾಗಿರಲಿಲ್ಲ. ಆದರೂ ಗಂಟು ಬಿತ್ತು.’
‘ಇದೇನು ಹೀಗೆ ಹೇಳುತ್ತೀಯೆ ? ಈ ಕೆಲಸ ನಿನಗೆ ಬೇಕಾಗಿರಲಿಲ್ಲವೆ ? ನಿನ್ನ ಪ್ರಯತ್ನವಿಲ್ಲದೆಯೆ ಇದು ಕೈಗೂಡಿತೆ ? ಈ ಆವುಟ
ಯಾರ ಹತ್ತಿರ ಎತ್ತುತ್ತೀಯೆ ? ಈಚೆಗೆ ನೀನೂ ಸ್ವಲ್ಪ ಪಾಲಿಟಿಕ (politics) ಕಲಿತ ಹಾಗೆ ಕಾಣುತ್ತದೆ.’
‘ಇಲ್ಲ ನನ್ನಪ್ಪ ! ಶಿವನಾಣೆ ರಂಗಣ್ಣ ! ನಾನು ಪ್ರಯತ್ನ ಪಡಲಿಲ್ಲ. ಈಗಲೂ ನನಗೆ ಬೇಕಾಗಿಲ್ಲ. ಬಿಟ್ಟು ಬಿಟ್ಟರೆ ನನ್ನ ಹಿಂದಿನ ಕೆಲಸಕ್ಕೆ ಈ ಕ್ಷಣ ಹೊರಟು ಹೋದೇನು. ಆದರೆ ನಮ್ಮ ಜನರ ಕಾಟ ಹೇಳತೀರದು, ಆ ಸಿದ್ದಪ್ಪ-ನಮ್ಮ ಜನರಲ್ಲಿ ಮುಖಂಡ ಎಂದು ಹಾರಾಡುತ್ತಾನೆ. ದಿವಾನರನ್ನು ಅನುಸರಿಸಿಕೊಂಡು ನಡೆಯುತ್ತ ಪ್ರತಿಷ್ಠೆ ತೋರಿಸಿ ಕೊಳ್ಳುತ್ತಾನೆ. ಅವನು ನಮ್ಮನ್ನೆಲ್ಲ ಉದ್ದಾರ ಮಾಡುತ್ತೇನೆಂದು ತಿಳಿದುಕೊಂಡು ದಿವಾನರ ಹತ್ತಿರ ಹೋಗಿ ಅರಿಕೆ ಮಾಡಿ ಕೊಂಡನಂತೆ. ಅವರೋ ಬಹಳ ಬುದ್ದಿವಂತರು. ಒಬ್ಬ ಮುಖಂಡನನ್ನು ಜೇಬಿಗೆ ಹಾಕಿಕೊಂಡ ಹಾಗಾಯಿತು ಎಂದು ಕೊಂಡರು. ಸರ್ಕಾರಕ್ಕೇನೂ ನಷ್ಟವಿಲ್ಲ, ಕಂಪೆನಿಯವರು ಹೆಚ್ಚು ಸಂಬಳ ಕೊಡುತ್ತಾರೆ, ಆಗಬಹುದು ಎಂದು ಹೇಳಿ ಈ ಏರ್ಪಾಟು ಮಾಡಿ ಕೊಟ್ಟರು. ಸಿದ್ದಪ್ಪ ನನ್ನ ಹತ್ತಿರ ಬಂದು, ದಿವಾನರಿಗೆ ಶಿಫಾರಸು ಮಾಡಿ ನಿನಗೆ ಬೇರೆ ಕಡೆ ಕೆಲಸ ಮಾಡಿಸಿ ಕೊಟ್ಟಿದ್ದೇನೆ ; ತಿಂಗಳಿಗೆ ನೂರು ರೂಪಾಯಿ ಹೆಚ್ಚಾಗಿ ಬರುತ್ತೆ ; ಮುಂದೆ ಇನ್ನೂ ಹೆಚ್ಚಾಗಿ ಬರುತ್ತೆ ; ನಮ್ಮ ಕೋಮಿನ ನಾಲ್ಕು ಜನಕ್ಕೆ ಅನುಕೂಲಮಾಡಿ ಕೊಟ್ಟ ಪುಣ್ಯ ನನಗೆ ಬರಲಿ ಎಂದು ಹೇಳಿದನು. ಈ ಕೆಲಸ ನನಗೆ ಬೇಡ ಎಂದು ನಾನು ಹೇಳಿದೆ. ಅವನು ನನ್ನ ಮರ್ಯಾದೆ ತೆಗೆಯ ಬೇಡ ತಿಮ್ಮರಾಯಪ್ಪ ! ನಮ್ಮ ಜನ ಹಿಂದೆ ಬಿದ್ದಿದ್ದಾರೆ ಸಹಾಯಮಾಡಬೇಕು ಎಂದು ನಾನು ಕೇಳಿ, ಅವರು ಅಗಲಿ ಎಂದು ಹೇಳಿ ಮಾಡಿ ಕೊಟ್ಟ ಮೇಲೆ, ನೀನು ಹೀಗೆ ಹಟಮಾಡಿದರೆ ಹೇಗೆ ? ಮತ್ತೆ ಅವರ ಹತ್ತಿರ ನಾನು ಮುಖ ತೋರಿಸುವುದು ಹೇಗೆ ? ಅವರು ನನ್ನನ್ನು ಮುಖಂಡ ಎಂದು ತಿಳಿದಾರೆಯೆ ? ಹಾಗೆಲ್ಲ ಮಾಡಬೇಡ ಎಂದು ಬಲಾತ್ಕಾರ ಮಾಡಿ ನನ್ನ ತಲೆಗೆ ಈ ಕೆಲಸವನ್ನು ಕಟ್ಟಿದ್ದಾನೆ.”
‘ಈಗೇನು ? ಒಳ್ಳೆಯದೇ ಆಯಿತು. ನನಗೂ ಯಾವನಾದರೊಬ್ಬ ಮುಖಂಡ ಶಿಫಾರಸು ಮಾಡಿ, ಹಾಗೆ ಬಲಾತ್ಕಾರದಿಂದ ತಲೆಗೆ ಕಟ್ಟಿದರೆ ಸಂತೋಷದಿಂದ ತಲೆಗೆ ಕಟ್ಟಿಸಿಕೊಂಡೇನು ?’
‘ರಂಗಣ್ಣ ನಿನಗೇನು ಗೊತ್ತು. ಇಲ್ಲಿ ದಿನಕ್ಕೆ ಹನ್ನೆರಡು ಗಂಟೆಗಳ ಕಾಲ ದುಡಿದು ಮೈ ಕೈ ನೋಯಿಸಿಕೊಂಡು ಇನ್ನೂರು ರೂಪಾಯಿಗಳ ಸಂಬಳ ತೆಗೆದು ಕೊಳ್ಳುವುದು ಜಾಣತನವೋ ಅಥವಾ ಅಲ್ಲಿ ದಿನಕ್ಕೆ ಎರಡು ಗಂಟೆಗಳ ಕಾಲ ಕಚೇರಿಗೆ ಹೋದ ಶಾಸ್ತ್ರ ಮಾಡಿ ಆಟ ಆಡಿ ಕೊಂಡಿದ್ದು ನೂರೆಪ್ಪತೈದು ರೂಪಾಯಿಗಳ ಸಂಬಳ ತೆಗೆದುಕೊಳ್ಳುವುದು ಜಾಣತನವೋ ? ಅಲ್ಲಿ ಸುಖವಾಗಿದ್ದೆ. ಇನ್‍ಸ್ಪೆಕ್ಟರು ಎಂದು ಗೌರವ ಇತ್ತು. ಮೇಷ್ಟ್ರುಗಳೋ ಶ್ಯಾನುಭೋಗರುಗಳೊ ಉಪ್ಪಿಟ್ಟು, ದೋಸೆ, ಕಾಫಿ, ಎಳನೀರು, ಬಾಳೆ ಹಣ್ಣು ಮುಂತಾದುವನ್ನು ತಂದು ಕೊಟ್ಟು, ಉಪಚಾರ ಮಾಡುತ್ತಿದ್ದರು. ಮೂರು ಹೊತ್ತೂ ಪುಷ್ಕಳವಾಗಿ ತಿಂಡಿ ತೀರ್ಥಗಳ ನೈವೇದ್ಯ ಮಾಡಿಸಿಕೊಂಡು ಹಾಯಾಗಿ ಕಾಲ ಕಳೆದುಕೊಂಡು ಇದ್ದವನನ್ನು ತಂದು ಈ ಸೆರೆಮನೆಯಲ್ಲಿ ಕೂಡಿ ಖೈದಿಯ ಕೈಯಲ್ಲಿ ಕೆಲಸ ತೆಗೆಯುವಂತೆ ತೆಗೆಯುತ್ತಿದ್ದರೆ ಸಹಿಸಿಕೊಂಡು ಬದುಕಿರಬಹುದೇ? ಇದು ಏನು ಬಾಳು ರಂಗಣ್ಣ ? ಸ್ವಾತಂತ್ರವಿಲ್ಲ ಸಂತೋಷವಿಲ್ಲ ; ಒಂದು ಒಳ್ಳೆಯ ನೋಟವಿಲ್ಲ ಊಟವಿಲ್ಲ’
‘ತಿಮ್ಮರಾಯಪ್ಪ ! ನೀನು ಹೇಳುತ್ತಿರುವ ವರ್ಣನೆ ನನ್ನ ಬಾಯಲ್ಲಿ ನೀರೂರಿಸುತ್ತಿದೆಯಲ್ಲ ! ಹಾಗೆ ಆಟ ಆಡಿ ಕೊಂಡು ಸಂಬಳ ತೆಗೆದು ಕೊಳ್ಳಬಹುದೇ ? ಕಚೇರಿಯಲ್ಲಿ ಕೆಲಸ ಹೆಚ್ಚಲ್ಲವೇ ? ಹೊರಗಡೆ ಹೋದರೆ ಸ್ಕೂಲುಗಳ ತನಿಖೆ, ಅವುಗಳ ವರದಿ ಬರೆಯುವುದು, ಗ್ರಾಮಸ್ಥರಿಗೆ ಸಮಾಧಾನ ಹೇಳುವುದು, ವಿದ್ಯಾಭಿವೃದ್ಧಿಯನ್ನು ದೇಶದಲ್ಲುಂಟುಮಾಡುವುದು ಇವೆಲ್ಲ ಜವಾಬ್ದಾರಿಯ ಕಷ್ಟ ತರವಾದ ಕೆಲಸಗಳಲ್ಲವೆ?’
‘ಹುಚ್ಚಣ್ಣ ನೀನು, ರಂಗಣ್ಣ ! ಶಿವನಾಣೆ ನಿನಗೆ ಹೇಳುತ್ತೇನೆ ಕೇಳು. ನೀನೆಲ್ಲೋ ಹುಡುಗರಿಗೆ ಪಾಠ ಹೇಳಿಕೊಂಡು ಇರುವ ಮನುಷ್ಯ. ಈಚೆಗೆ ಮೇಷ್ಟ್ರುಗಳಿಗೂ ನಾರ್ಮಲ್ ಸ್ಕೂಲಿನಲ್ಲಿ ಸ್ವಲ್ಪ ಪಾಠ ಹೇಳಿದ್ದೀಯೆ. ನಿನಗೆ ಹೊರಗಿನ ಪ್ರಪಂಚ ಏನೂ ತಿಳಿಯದು. ಸ್ಕೂಲು ಗೀಲು ಉದ್ದಾರವಾಗುವುದು ಇನ್ನು ಒಂದು ಶತಮಾನಕ್ಕೋ ಎರಡು ಶತಮಾನಕ್ಕೋ! ಬ್ರಿಟಿಷರೆಲ್ಲ ಗಂಟು ಮೂಟೆ ಕಟ್ಟಿ ಕೊಂಡು ಓಡಿ ಹೋದರೆ, ನಮ್ಮ ಮಹಾತ್ಮ ಗಾಂಧಿ ಭರತಖಂಡದ ಚಕ್ರವರ್ತಿ ಆದರೆ, ಸೌರಾಷ್ಟ್ರ ಸೋಮನಾಥನ ದೇವಾಲಯ ಮತ್ತೆ ಊರ್ಜಿತವಾದರೆ ನಿನ್ನ ಸ್ಕೂಲು ಉದ್ದಾರವಾಗುತ್ತದೆ ! ವಿದ್ಯಾಭಿವೃದ್ಧಿ ಆಗುತ್ತದೆ!’
‘ಅಷ್ಟೇನೆ? ಸರಿ, ಬಿಡು ; ಆಗದ ಹೋಗದ ಮಾತು. ಮತ್ತೆ ದೇಶದ ತುಂಬ ಅಷ್ಟೊಂದು ಸ್ಕೂಲುಗಳಿವೆ ; ಅಷ್ಟೊಂದು ಸಿಬ್ಬಂದಿ ಕೆಲಸ ಮಾಡುತ್ತಾ ಇದ್ದಾರೆ ; ಅಷ್ಟೊಂದು ಹಣ ಖರ್ಚು ಮಾಡುತ್ತಾ ಇದ್ದಾರೆ ; ನಾವು ಸಹ ಮೇಷ್ಟ್ರುಗಳನ್ನು ತಯಾರುಮಾಡಿ ಕಳಿಸುತ್ತಾ ಇದ್ದೇವೆ.’
‘ಆದರೇನು ರಂಗಣ್ಣ ! ಅಲ್ಲಿ ಇಲ್ಲಿ ಕೆಲವರು ಮೇಷ್ಟ್ರುಗಳು ಭಯಭಕ್ತಿಗಳಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಹಲವರಿಗೆ ಪಾಠ ಹೇಳಿಕೊಡುವುದು ಗೊತ್ತಿಲ್ಲ. ಗ್ರಾಮಸ್ಥರಿಗೆ ಸುತರಾಂ ಶ್ರದ್ಧೆ ಹುಟ್ಟಿಲ್ಲ. ನಾನೂ ಸ್ಕೂಲ್ ತನಿಖೆಗಳನ್ನು ಮಾಡಿದೆ. ಏನಿದೆ ಅಲ್ಲಿ ನೋಡುವುದು ? ಬರಿಯ ಸೊನ್ನೆ ! ಇನ್ನು ಸುಮ್ಮನೆ ಬಡ ಮೇಷ್ಟ್ರ ಮೇಲೆ ಹಾರಾಡಿ ಪ್ರಯೋಜನವಿಲ್ಲ ಎಂದುಕೊಂಡು ಸುಮ್ಮನಾದೆ. ಉಪಾಧ್ಯಾಯರ ಸಭೆ ಮಾಡುವುದು, ತಿಂಡಿ ತೀರ್ಥ ಹೊಡೆಯುವುದು, ಒಂದೆರಡು ಭಾಷಣ ಮಾಡುವುದು, ವರದಿಗಳನ್ನು ಗೀಚಿ ಮೇಲಕ್ಕೆ ಕಳಿಸಿಬಿಡುವುದು, ತಿಂಗಳುಗುತ್ತಲೂ ಜೇಬಿಗೆ ಸಂಬಳ ಇಳಿಬಿಡುವುದು ಹೀಗೆ ರಾಮರಾಜ್ಯದಲ್ಲಿದ್ದ ಮನುಷ್ಯ ಇಲ್ಲಿಗೆ ಬಂದು ನರಳುತ್ತಾ
ಇದ್ದೆನಲ್ಲ!’
‘ಆದರೂ ನೂರು ರೂಪಾಯಿ ಹೆಚ್ಚಾಗಿ ಬರುತ್ತಿದೆಯಲ್ಲ ತಿಮ್ಮರಾಯಪ್ಪ ! ನೀನು ಸಿದ್ದಪ್ಪನವರಿಗೆ ಕೃತಜ್ಞನಾಗಿರಬೇಕು.’
‘ಅಯ್ಯೋ ಶಿವನೇ ! ಕೃತಜ್ಞನಾಗೇನೋ ಇದ್ದೇನೆ. ಆದರೆ ನೋಡು, ನಾವು ವ್ಯಾಪಾರದವರು, ನೀನು ಕಂಡಿದ್ದೀಯಲ್ಲ. ನಾನು ಕೋಲಾರದಲ್ಲಿದ್ದಾಗ ಮನೆಯ ಬಾಡಿಗೆ ಹತ್ತೋ ಹನ್ನೆರಡೋ ರೂಪಾಯಿ ಕೊಡುತ್ತಿದ್ದೆ. ಒಬ್ಬ ಮೇಷ್ರ್ಟನ್ನೇ ಅಡಿಗೆಗೆ ಇಟ್ಟು ಕೊಂಡಿದ್ದೆ. ಅವನಿಗೆ ನಾನೇನೂ ಸಂಬಳ ಕೊಡುತ್ತಿರಲಿಲ್ಲ. ಈಗಲೂ ನನ್ನಾಕೆ ನನಗೆ ಹೇಳುತ್ತಾಳೆ : ಹಾಳು ಬೆಂಗಳೂರಿಗೆ ಬಂದು ಎಲ್ಲವನ್ನೂ ದುಡ್ಡು ಕೊಟ್ಟು ಕೊಂಡು ಕೊಳ್ಳುವ ಸ್ಥಿತಿ ಬಂದಿದೆಯಲ್ಲ ; ಹುಣಿಸೆಯ ಹಣ್ಣಿಗೆ ದುಡ್ಡು ಹಾಕಬೇಕಾಗಿದೆಯಲ್ಲ ; ಅವರೆ ಕಾಯಿಗೆ ದುಡ್ಡು ಕೊಟ್ಟು ತಿನ್ನಬೇಕಾಗಿದೆಯಲ್ಲ ; ಬರಿಯ ತರಕಾರಿಗೇನೆ ತಿಂಗಳಿಗೆ ಹದಿನೈದು ರೂಪಾಯಿಗಳಾಗುತ್ತೆ. ಈ ಸಂಸಾರ ಹೇಗೆ ಪೂರೈಸುತ್ತೆ ? ನನ್ನ ಕೈಯಲ್ಲಾಗದು ಎನ್ನುತ್ತಾಳೆ. ಜೊತೆಗೆ ಇಲ್ಲಿ ಮನೆಯ ಬಾಡಿಗೆ ನಲವತ್ತು ರೂಪಾಯಿ. ನನ್ನ ಹೆಂಡತಿ ಅಡಿಗೆ ಮಾಡಲಾರಳು ; ಅಡಿಗೆಯವನಿಗೆ ತಿಂಗಳಿಗೆ ಇಪ್ಪತೈದು ರೂಪಾಯಿ. ನನ್ನ ಮಕ್ಕಳ ಮನೆಮೇಷ್ಟರಿಗೆ ಕೋಲಾರದಲ್ಲಿ ಏನನ್ನೂ ಕೊಡುತ್ತಿರಲಿಲ್ಲ ; ಇಲ್ಲಿ ತಿಂಗಳಿಗೆ ಹದಿನೈದು ರೂಪಾಯಿ. ಏನಾಯಿತು ಈ ಲೆಕ್ಕಾಚಾರವೆಲ್ಲ ? ಹೇಳು ರಂಗಣ್ಣ. ಕಷ್ಟವೂ ಹೆಚ್ಚಿತು, ಆದಾಯವೂ ಇಳಿಯಿತು. ಎರಡು ದಿನ ನೀನೂ ಇನ್ಸ್‍ಪೆಕ್ಟರ್ ಗಿರಿ ಮಾಡಿದರೆ ಆ ಸುಖ ಆ ಭೋಗ ಗೊತ್ತಾಗುತ್ತದೆ ; ಈಗಿನ ನನ್ನ ಅವಸ್ಥೆ ಅರಿವಾಗುತ್ತದೆ.’
ಈ ಮಾತುಗಳು ಮುಗಿಯುವ ಹೊತ್ತಿಗೆ ತಿಂಡಿ ತಿನ್ನುವುದು ಮುಗಿಯಿತು. ಮಾಣಿ ಬಿಲ್ಲನ್ನು ತಂದು ಕೊಟ್ಟನು. ತಿಮ್ಮರಾಯಪ್ಪನೇ ಹಣವನ್ನು ಕೊಟ್ಟನು. ಹೋಟಲನ್ನು ಬಿಟ್ಟು ಬರುತ್ತ ಪರಸ್ಪರವಾಗಿ ಸಂಸಾರದ ಮಾತುಗಳನ್ನು ಆಡುತ್ತ ಮಕ್ಕಳೆಷ್ಟು? ಹೆಣ್ಣು ಮಕ್ಕಳಿಗೆ ಮದುವೆ ಆಗಿದೆಯೆ ? ಹುಡುಗರು ಯಾವ ತರಗತಿಗಳಲ್ಲಿ ಓದುತ್ತಿದ್ದಾರೆ ಇತ್ಯಾದಿ ಪ್ರಶ್ನೋತ್ತರಗಳಿಂದ ದಾರಿಯನ್ನು ಸಾಗಿಸುತ್ತ ವಿಶ್ವೇಶ್ವರಪುರದ ಸಜ್ಜನರಾಯರ ಸರ್ಕಲ್ ಬಳಿಗೆ ಬಂದರು. ರಂಗಣ್ಣನು ಅಲ್ಲಿ ನಿಂತು ‘ಇನ್ನು ನಾನು ಮನೆಗೆ ಹೋಗುತ್ತೇನೆ. ನಾಳೆ ನಾಳಿದ್ದರಲ್ಲಿ ಭೇಟಿ ಯಾಗುತ್ತೇನೆ’ ಎಂದು ಹೇಳಿದನು. ತಿಮ್ಮರಾಯಪ್ಪ ಗವೀಪುರದ ಬಡಾವಣೆಗೆ ಹೋಗಬೇಕಾಗಿತ್ತು. ಅವನು ಅತ್ತ ಕಡೆಗೆ ಹೊರಟು ಹೋದನು.
ರಂಗಣ್ಣ ರಾತ್ರಿ ಊಟಮಾಡಿ ಹೆಂಡತಿಯೊಡನೆ ಆ ದಿನ ಸಂಜೆ ನಡೆದ ವೃತ್ತಾಂತವನ್ನೆಲ್ಲ ಹೇಳಿದನು. ಆಕೆ, ‘ಅಯ್ಯೋ ! ಆ ಭಾಗ್ಯವನ್ನು ನಾವು ಕೇಳಿಕೊಂಡು ಬಂದಿದ್ದೇವೆಯೆ ? ಅದಕ್ಕೆಲ್ಲ ಪುಣ್ಯ ಮಾಡಿರಬೇಕು. ಅಮಲ್ದಾರರ ಹೆಂಡತಿ, ಪೊಲೀಸ್ ಇನ್ಸ್‍ಪೆಕ್ಟರ ಹೆಂಡತಿ- ಅವರ ಜೊತೆಯಲ್ಲಿ ಸರಿಸಮನಾಗಿ ಊರಲ್ಲಿ ಓಡಾಡುವುದನ್ನು ಈ ಜನ್ಮದಲ್ಲಿ ಕಾಣೆ’- ಎಂದು ಚಿಂತಾಕ್ರಾಂತಳಾಗಿ ಹೇಳಿದಳು. ಆ ರಾತ್ರಿ ರಂಗಣ್ಣನಿಗೆ ಸರಿಯಾಗಿ ನಿದ್ದೆ ಬರಲಿಲ್ಲ. ಕನಸುಗಳು ಮತ್ತು ಕಲ್ಪನೆಗಳು ತಲೆಯಲ್ಲಿ ತುಂಬಿಕೊಳ್ಳುತ್ತಿದ್ದುವು. ತನಗೆ ಇನ್ಸ್‍ಪೆಕ್ಟರ್‌ಗಿರಿ ಆಯಿತೆಂದೇ ಕನಸು ಬಿತ್ತು. ತಾನು ಹಳ್ಳಿಯ ಕಡೆ ಸರ್ಕೀಟು ಹೋದಂತೆಯೂ ತಿಮ್ಮರಾಯಪ್ಪ ವರ್ಣಿಸಿದ ಹಾಗೆಯೇ ಗ್ರಾಮಸ್ಥರು ಮರದ ಕೆಳಗೆ ಗುಂಪು ಸೇರಿ ಹೂವಿನ ಹಾರ, ಹಣ್ಣುಗಳು, ಎಳನೀರು ಮೊದಲಾದುವನ್ನು ಇಟ್ಟುಕೊಂಡು ಕಾದಿದ್ದಂತೆಯೂ ಕಾಫಿ ಉಪ್ಪಿಟ್ಟು ದೋಸೆಗಳು ಬಾಳೆಯೆಲೆಯ ಮುಸುಕಿನಲ್ಲಿ ಸೇರಿಕೊಂಡು ವಾಸನೆ ಬಿರುತ್ತಿದ್ದಂತೆಯೂ ಸುಖ ಸ್ವಪ್ನವನ್ನು ಕಂಡು ರಾತ್ರಿಯನ್ನು ಕಳೆದನು.
*****