ದೇಶದಲ್ಲಿ ಮೂರನೆಯ ಮಹಾಚುನಾವಣೆ. ವರ್ಷ ೧೯೬೨. ದೇಶದ ಒಳಹೊರಗೆಲ್ಲಾ ಜವರಹರಲಾಲ್ ನೆಹರೂ ವಿರುದ್ಧ ಡಾ. ಲೋಹಿಯಾ ಲೋಕಸಭೆಗೆ ಸ್ಪರ್ಧಿಸುತ್ತಾರೆಂಬ ಸುದ್ದಿಯ ಗದ್ದಲ. ನೆಹರೂವನ್ನು ಪರಾಜಯಗೊಳಿಸಲು ಅಸಾಧ್ಯ ಎಂಬುದು ವಿಶ್ವ ನಂಬುಗೆ. ಇದುವರೆವಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದವರೆಂದರೆ ಪ್ರತಿಗಾಮಿಶಕ್ತಿಗಳು ಮತ್ತು ಕೋಮುವಾದಿಗಳು ಮಾತ್ರ. ನೆಹರೂ ವಿರುದ್ಧ ರಾಜಕೀಯ ಆದರ್ಶದ ತಳಹದಿಯ ಮೇಲೆ ಮೊಟ್ಟ ಮೊದಲಿಗೆ ಸ್ಪರ್ಧಿಸಿದವರೆಂದರೆ ಡಾ. ಲೋಹಿಯಾ.
ನೆಹರೂ ನಿರ್ಮಿಸಿಕೊಂಡಿದ್ದ ಹೊರಹೊಳಪು ಅಧಿಕಾರಮುಷ್ಟಿ ಮತ್ತು ಕಾಂಗ್ರೆಸ್ ಪಕ್ಷದ ಪ್ರಭಾವದೊಂದಿಗೆ ಹೋಲಿಸಿದಾಗ ಸೀಮಿತ ಆಧಿಕಾರದ, ಅಸಂಘಟಿತ ಪಕ್ಷದ ಮತ್ತು ಹಣಬಲವಿಲ್ಲದ ಲೋಹಿಯಾ ಏನೇನೂ ಅಲ್ಲ. ಆದರೆ ಪ್ರತಿಯೊಬ್ಬರಿಗೂ ತಿಳಿದಿತ್ತು ಸ್ಪರ್ಧೆ ಮಾತ್ರ ಕುತೂಹಲಕರ ಎಂಬುದು.
ಕಾಂಗ್ರೆಸ್ ಹಾಗೂ ನೆಹರೂ ತಮ್ಮ ಅಧಿಕಾರವನ್ನ ಕೇಂದ್ರೀಕರಿಸಿದ್ದು ಚುನಾವಣಾ ಕ್ಷೇತ್ರವಾದ ಪೂಲ್‌ಪುರ್‌ನಲ್ಲಿ. ಹಾಗೆ ಮಾಡಲು ಕಾರಣ ಬಹುಶಃ ಲೋಹಿಯಾರವರ ಶಕ್ತಿಯನ್ನು ಹಾಗೂ ಸ್ಪರ್ಧಿಸಿರುವ ರೀತಿಯನ್ನು ಅವರು ತಿಳಿದಿದ್ದರಿಂದ.
ಲೋಹಿಯಾ ಭಾರತದ ಬಡಜನತೆ ಮತ್ತು ಸಾಮಾನ್ಯ ಜನರು ಬಹುಶಃ ನಾನು ಅವರಿಗೆ ಸೇರಲ್ಪಟ್ಟಿದ್ದೇನೆ ಎಂಬ ಅವರ ನಂಬಿಕೆಯನ್ನು ಬಿಟ್ಟರೆ ನನ್ನಲ್ಲಿ ನನ್ನದಾಗಿ ಮತ್ತೇನೂ ಇಲ್ಲ ಎಂದು ತಮ್ಮ ಚುನಾವಣಾ ಕರಪತ್ರದಲ್ಲಿ ತಮ್ಮ ಕ್ಷೇತ್ರದ ಮತದಾರರಿಗೆ ಸ್ಪಷ್ಟವಾಗಿ ಬರೆದಿದ್ದರು.
ರಾಜಕೀಯ ತತ್ವಗಳ ಮೇಲೆ ನೆಹರೂ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆಂಬ ಸಂತೋಷ ಒಂದು ಕಡೆಯಾದರೆ ಮತ್ತೊಂದು ಕಡೆ ಮಾನಸಿಕ ತುಮುಲದಿಂದ ಹೋರಾಡುತ್ತಿದ್ದರು ಲೋಹಿಯಾ. ಒಂದು ಕಾಲದಲ್ಲಿ ಲೋಹಿಯಾರವರ ಆತ್ಮೀಯರಾಗಿದ್ದ ನೆಹರೂ ಈಗ ಪ್ರತಿಸ್ಪರ್ಧಿಯಾಗಿದ್ದರು. ಲೋಹಿಯಾ ತಮ್ಮ ನಾಮಪತ್ರವನ್ನು ಸಲ್ಲಿಸುವ ಮುನ್ನ ನೆಹರೂಗೆ ಒಂದು ಪತ್ರ ಬರೆದರು:
ಮೆಚ್ಚಿನ ಅಧ್ಯಕ್ಷರೆ, (ಲೋಹಿಯಾ ಭಾರತರಾಷ್ಟ್ರೀಯ ಕಾಂಗ್ರೆಸ್ ಕಮಿಟಿಯ ಹೊರದೇಶಗಳ ಕಾರ್ಯದರ್ಶಿಯಾಗಿದ್ದಾಗ ನೆಹರೂ ಅದರ ಅಧ್ಯಕ್ಷರಾಗಿದ್ದರು. ಆಗ ಲೋಹಿಯಾ ನೆಹರೂರವನ್ನು ಅಧ್ಯಕ್ಷರೆಂದು ಸಂಭೋಧಿಸುತ್ತಿದ್ದರು.)
ಈ ಪತ್ರವನ್ನೋದಲು ಬಹುಶಃ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇಂದು ಏನಾದರೂ ಬರೆಯಲೇಬೇಕೆಂಬ ತೀವ್ರತೆಯುಂಟಾಗಿದೆ ನನಗೆ. ಅದು ಏಕೆಂದರೆ ನಾನು ನಿಮ್ಮ ವಿರುದ್ಧ ಚುನಾವಣೆಗೆ ನಿಲ್ಲಬೇಕೆಂದು ತೀರ್ಮಾನ ಮಾಡಿದ್ದೇನೆ. ಈ ಒಂದು ತೀರ್ಮಾನದಿಂದ ಎಷ್ಟೋ ಹಳೆಯ ನೆನಪುಗಳು ಒಂದರ ಮೇಲೊಂದು ಬರುತ್ತಿವೆ. ಆದರೆ ರಾಜಕೀಯದಲ್ಲಿ ವೈಯಕ್ತಿಕ ಸಂಬಂಧಗಳು ಗೌಣ ಹಾಗೂ ಅರ್ಥವಿಲ್ಲದ್ದು. ಕಾಂಗ್ರೆಸ್ ಕಮಿಟಿ ಕಛೇರಿಯಿಂದ ನಾನು ಹೊರ ಬಂದಾಗಲೇ ಆ ಕಟ್ಟಡಕ್ಕೆ ನನ್ನ ಕಟ್ಟಕಡೆಯ ನಮಸ್ಕಾರವನ್ನು ಹಾಕಿದ್ದೇನೆ. ಆಗ ಅರುಣ ನನ್ನೊಡನಿದ್ದಳು. ಅವಳು ಕೇಳಿದಳು ನೀವು ಏನು ಮಾಡುತ್ತಿದ್ದೀರಿ ? ಎಂದು. ಮಾನಸಿಕ ಆಘಾತಗಳಿಂದ ನೊಂದ ನಾನು ತಪ್ಪು ತೀರ್ಮಾನವನ್ನು ತೆಗೆದುಕೊಂಡಿದ್ದೇನೆಯೆ ? ಆದರಿಂದು, ಬಹಳ ವರ್ಷಗಳು ಉರುಳಿದನಂತರ ಅದನ್ನು ಅರಿವು ಮಾಡಿಕೊಳ್ಳುತ್ತಿದ್ದೇನೆ, ಅದು ಆತುರದಿಂದ ತೆಗೆದುಕೊಂಡ ತೀರ್ಮಾನವಲ್ಲವೆಂದು. ಅದೇ ನನ್ನ ಮತ್ತು ನಿಮ್ಮ ಕೊನೆಯ ಭೇಟಿ.
ಈ ಚುನಾವಣೆಯಲ್ಲಿ ನಿಮ್ಮ ಗೆಲುವು ಬಹಳ ಮಟ್ಟಿಗೆ ನಿಶ್ಚಯ. ಆದರೆ ಈ ಬಹಳ ಮಟ್ಟಿಗೆ ನಿಶ್ಚಯವನ್ನು ಅನಿಶ್ಚಯವನ್ನಾಗಿ ಮಾಡಬಹುದು ಮತ್ತು ಮುಂದುವರಿದು ಅದನ್ನು ನಿಮ್ಮ ಸೋಲನ್ನಾಗಿ ಮಾರ್ಪಡಿಸಬಹುದು; ಆಗ ದೇಶಕ್ಕೆ ಸೌಖ್ಯವಿರುತ್ತದೆಂದು ನಾನು ಸಂತಸಪಡುವೆ. ನಿಮಗೂ ಸಹ, ನಿಮ್ಮನ್ನು ನೀವು ತಿದ್ದಿಕೊಂಡು ಒಳ್ಳೆಯ ಮನುಷ್ಯನಾಗುವ ಅವಕಾಶ ಒದಗುತ್ತದೆ.
ಚುನಾವಣೆಯಲ್ಲಿ ನನ್ನ ವಿರುದ್ಧ ಈ ನನ್ನ ಪತ್ರವನ್ನು ಬಹುಶಃ ನೀವು ಉಪಯೋಗಿಸಿಕೊಳ್ಳಬಹುದು. ಆದರೆ ನನಗೊಂದು ನಿಶ್ಚಯ, ನೀವು ಇದುವರೆವಿಗೂ ನನಗೆ ಮಾಡುತ್ತ ಬಂದಿರುವ ದ್ರೋಹಕ್ಕೆ ಹೋಲಿಸಿಕೊಂಡಾಗ ಮುಂದೆ ಮತ್ತೇನು ಮಾಡಲು ಸಾಧ್ಯ!
ಕಡೆಯದಾಗಿ ನೀವು ಹೆಚ್ಚು ದಿನ ಬದುಕಲಿ ಎಂದು ಪ್ರಾರ್ಥಿಸುತ್ತೇನೆ. ಏಕೆಂದರೆ, ನಿಮ್ಮನ್ನು ೧೯೪೭ ಕ್ಕೆ ಮುಂಚಿನ ಮನುಷ್ಯನನ್ನಾಗಿ ಮಾರ್ಪಡಿಸುವ ಅವಕಾಶ ನನಗೆ ಸಿಕ್ಕಬಹುದು.
ನಿಮ್ಮವ
ರಾಮ ಮನೋಹರ ಲೋಹಿಯಾ
ನೆಹರೂ ಸಹ ಪ್ರಾಮಾಣಿಕವಾಗಿ ಉತ್ತರಿಸಿದರು. ನೆಚ್ಚಿನ ರಾಮ ಮನೋಹರ, ದಿನಾಂಕ ಮತ್ತು ವಿಳಾಸವಿಲ್ಲದೆ ನಿಮ್ಮ ಪತ್ರ ತಲುಪಿದೆ. ನನ್ನ ಪತ್ರ ನಿಮಗೆ ತಲಪುತ್ತದೆಯೋ ಇಲ್ಲವೋ ನಾನು ಕಾಣೆ. ಏಕೆಂದರೆ ನಿಮ್ಮ ವಿಳಾಸ ನನ್ನಲ್ಲಿ ಇಲ್ಲ. ಇದನ್ನು ನಾನು ಸಮಾಜವಾದಿ ಪಕ್ಷ, ಅಲಹಾಬಾದ್ ಎಂಬ ವಿಳಾಸಕ್ಕೆ ಕಳುಹಿಸುತ್ತಿದ್ದೇನೆ.
ನನಗೆ ಬಹಳ ಸಂತೋಷ. ಏಕೆಂದರೆ, ಗಂಭೀರ ವಿಚಾರವುಳ್ಳ ನಿಮ್ಮಂತ ವ್ಯಕ್ತಿ ರಾಜಕೀಯ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧಿಸಲು ಬಂದಿದ್ದೀರ. ಈ ಚುನಾವಣೆಯಲ್ಲಿ ರಾಜಕೀಯ ಕಾರ್ಯಕ್ರಮಗಳ ಮೇಲೆ ಹೆಚ್ಚಿನ ಚರ್ಚೆಯಾಗುತ್ತದೆಂದು ನಾನು ತಿಳಿದಿದ್ದೇನೆ. ವೈಯಕ್ತಿಕ ಟೀಕೆ ಅತಿ ಕಮ್ಮಿ ಇರಲೆಂಬ ವಿಚಾರ ಗಮನವಿರಲಿ. ನನ್ನ ಕಡೆಯಿಂದ ಈ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ನಾನು ಒಂದು ದಿನವೂ ಹೋಗುವುದಿಲ್ಲ, ಎಂದು ನಿಮಗೆ ವಚನ ಕೊಡುತ್ತೇನೆ.
ನಿಮ್ಮವ
ಜವಹರಲಾಲ್ ನೆಹರೂ
ಅಂತಹ ಪತ್ರ ಬರೆದ ಮೇಲೂ ಪೂಲ್‌ಪುರ್ ಚುನಾವಣೆ ಕ್ಷೇತ್ರಕ್ಕೆ ತಮ್ಮ ಚುನಾವಣಾ ಭಾಷಣ ಮಾಡಲು ನೆಹರೂ ನಾಲ್ಕು ಬಾರಿ ಹೋಗಿದ್ದರು. ಚುನಾವಣೆಯ ಹೋರಾಟ ಪ್ರಬಲವಾಗಿತ್ತು. ಲೋಹಿಯಾ ಸೋಲಬೇಕಾಯ್ತು, ಸೋತರು. ಆದರೆ ಲೋಹಿಯಾ ಇನ್ನೊಂದು ಅರ್ಥದಲ್ಲಿ ಗೆದ್ದರು. ಕಾಂಗ್ರೆಸ್ಸಿನ ಮತ್ತು ಸರ್ಕಾರದ ಆಯುಧಗಳೆಲ್ಲವನ್ನೂ ಉಪಯೋಗಿಸಿಕೊಂಡರೂ ಸಹ ನೆಹರೂ ಅಜೇಯನಲ್ಲ ಎಂಬುದು ಶೃತವಾಯ್ತು. ಏಕೆಂದರೆ ಲೋಹಿಯಾ ಪೂಲ್‌ಪುರ್‌ನ ಮೂರು ಮತಗಟ್ಟೆಗಳಲ್ಲಿ ನೆಹರೂವನ್ನು ನೂರಾರು ಮತಗಳಿಂದ ಸೋಲಿಸಿದ್ದರು. ಆಗ ಅಮೆರಿಕದ ಟೈಮ್ಸ್ ಪತ್ರಿಕೆ ಹೀಗೆ ಬರೆದಿತ್ತು : “ನೆಹರೂಗೆ ಮತಹಾಕಿದ ಪ್ರತಿ ಇಬ್ದರು ಮತದಾರರ ನಂತರ ಒಬ್ಬ ಮತದಾರ ತನ್ನ ಮತವನ್ನ ಸಮಾಜವಾದಿ ಪಕ್ಷದ ನಾಯಕ ಲೋಹಿಯಾಗೆ ಹಾಕಿದ್ದ” ಎಂದು. ಈ ಪೂಲ್‌ಪುರನ ಚುನಾವಣಾ ಫಲಿತಾಂಶದಿಂದ ಭಾರತದ ಪ್ರಜೆಗಳಿಗೆ ಮನವರಿಕೆಯಾದ ಒಂದಂಶವೆಂದರೆ ಪ್ರಾಮಾಣಿಕತೆ ಇದ್ದಲ್ಲಿ ಕಲ್ಲುಬಂಡೆಯನ್ನು ಸಹ ಬಿರುಕು ಬಿಡಿಸಬಹುದೆಂಬುದು.
ಫೆಬ್ರವರಿ ೧೯೭೯
*****