ಬಂದ ವಸಂತ ಬಂದ ಇದೋ
ಸೃಷ್ಟಿಗೆ ಪುಳಕವ ತಂದ ಇದೋ
ಮರಮರದಲು ಚಿಗುರಿನ ಗಣಿಯ
ಹಕ್ಕಿಯ ಉಲ್ಲಾಸದ ದನಿಯ
ತೆರೆಸಿದ, ಮಂದಾನಿಲನನು ಕರೆಸಿದ
ಹರಸಿದ ಹೊಲಗದ್ದೆಗೆ ತೆನೆಯ.
ತೆಳುಮುಗಿಲನು ನೀಲಿಯ ನಭಕೆ
ತಿಳಿಭಾವವ ಜನಮಾನಸಕೆ,
ಹೊಳೆಯುವ ಹಸಿರಿನ ಬಣ್ಣದ ಶಾಲನು
ಮರಳಿ ಹೊದೆಸಿ ಗಿಡಮರ ವನಕೆ.
ಹಸಿರು ಮರಗಳ ಮಾಡಿನಲಿ
ಬಣ್ಣದ ಎಲೆಗಳ ಗೂಡಿನಲಿ
ಮರಿಗಳ ಕೂಡಿ ನಲಿಯುವ ಹಕ್ಕಿಯ
ಸಂತಸ ಚಿಮ್ಮಿಸಿ ಹಾಡಿನಲಿ.
ಅರುಣನ ಬೆನ್ನಿಗೆ ಎಳ ಬಿಸಿಲ
ಬೆಳೆಯುವ ಗದ್ದೆಗೆ ಹೊಸ ಫಸಲ,
ತೂಗುವ ಗಾಳಿಗೆ ಆಡುವ ತೆನೆಯ
ಬಾಗಿ ತಬ್ಬಿ ಕೇಳುತ ಕುಶಲ.
*****