ಲಕ್ಸರಿನ ಬೀದಿಯಲ್ಲಿ
ಪೋಲೀಸರು ಒಬ್ಬ ಕಳ್ಳನನ್ನು
ಬಿಡದೇ ಮರ್ದಿಸುತ್ತಿದ್ದಾರೆ
ಅವನ ದವಡೆ ಒಡೆದು
ರಕ್ತ ನಿರಂತರ ಸೋರುತ್ತಿದೆ.
ಕೈರೊದ ಕ್ಲಬ್ಬಿನಲ್ಲಿ ಒಬ್ಬಾಕೆ
ಎಲ್ಲರನ್ನೂ ಕೇಳುತ್ತಿದ್ದಾಳೆ:
ಹಿಂದಾದುದನ್ನು ನಾನು ಕಂಡಿದ್ದೇನೆ
ಮುಂದಾಗುವುದು ನನಗೆ ಗೊತ್ತು-
ಹಾಗಂದರೇನು?
ಚರಿತ್ರೆಯ ಏಕಾಂತವನ್ನು ಮುರಿದವರು
ಮಾತಿಗೆ ಹೊಣೆಯಾಗುವರು
ಆದರೆ ಚರಿತ್ರೆ ಯಾರಿಗೂ ಹೊಣೆಯಲ್ಲ.
ಇಲ್ಲಿ ಹಿಂದೆ ಸೂರ್ಯನು
ದೇವರಾಗಿದ್ದ ಎಂದು ಹೇಳುತ್ತಾರೆ-
ಈ ಕಠಿಣ ಶಿಲೆಗಳಿಗೆ ಅಲ್ಲದಿದ್ದರೆ
ಇನ್ನೇನರ್ಥ- ?
ಆತನ ಚಿನ್ನದ ಕಣ್ಣುಗಳ ಮೇಲಿಂದ
ನೈಲ್ ನದಿಯ ನೆರೆ ನೀರು
ಅನೇಕ ಬಾರಿ
ಹರಿದು ಹೋಯಿತು.
ನಿಮಗೆ ಭೂತ ಪ್ರೇತಗಳಲ್ಲಿ
ಸದಾಚಾರದಲ್ಲಿ ಆತ್ಮದ
ಅಭಿಮಾನದಲ್ಲಿ ಪರಲೋಕದ
ನದೀತೀರಗಳಲ್ಲಿ ಹಾಗೂ
ಸತ್ತವರ ಶಾಪಗಳಲ್ಲಿ
ನಂಬಿಕೆಯಿಂದೆಯೇ?
ನಿಜ-
ವಿಷಯ ತುತಂಖಮನ್: ನಾನು ಮರೆತಿಲ್ಲ
ನನ್ನ ಮಾತುಗಳು ತಡವಿದರೆ
ಕ್ಷಮೆಯಿರಲಿ!
ನಿಮ್ಮ ಮುಖದಲ್ಲಿ ನನಗೆ
ನನ್ನ ಹಿಂದೆ ನಿಂತವರು
ಕಾಣಿಸುತ್ತಿದ್ದಾರೆ.
*****