ಗಗನ ಹರಿದು, ಭೂಮಿ ಮೆರೆದು; ಹಚ್ಚ ಹೊದಿಕೆ ಹೊದ್ದಿತು
ಮುಗಿಲು ಮುತ್ತಿ; ಇಳೆಯನಪ್ಪಿ ಸಗ್ಗ ಸೋಗನ ಜೈಸಿತು
ಕೃಷಿಯ ಕಾಮಧೇನು ತಾನು ಹರುಷದಿಂದ ಕರೆಯಿತು
ಹಸಿದು ಬಿರಿದ ಧರೆಯ ಹೊಟ್ಟೆ ಹೊಳೆದು ಕಾಂತಿ ತಾಳಿತು
ಸಗ್ಗ ಹೊಳೆಯು ಅಗ್ಗವಾಗಿ ಹಿಗ್ಗಿನಿಂದ ನುಗ್ಗಿತು
ಧಗಿಪ ದಾವಾಗ್ನಿಯಲ್ಲಾ ಭಗ್ನಗೊಂಡು ಕುಗ್ಗಿತು
ನಗುತ ವಿನಯ ಗಗನ ಮೊಗ್ಗು ಸೊಬಗಿನಿಂದ ಅರಳಿತು
ತಗ್ಗಿ ಬಗ್ಗಿ ಕುಗ್ಗಿ ನಿಂತ ಚಿಕ್ಕಪೊದೆಯು ಚಿಗುರಿತು
ಹರುಷ ತುಂಬಿ ಹೊಟ್ಟೆಯುಬ್ಬಿ ಹೊಡೆಯು ಮೇಲೆ ಎದ್ದಿತು
ಒಡಲ ಒಡೆದು ಮೇಲೆ ನೆಗೆದು ಗಗನವನೇ ಕೆಣಕಿತು
ಹೊಡೆಯು ಹಾರಿ ಹೂವ ತೋರಿ ಹಾಲ್ಗಾಳು ತುಂಬಿತು
ಗಾಳಿ ಓಡಿ ತಲೆಯು ತಾಕಲಾಡಿ; ಕವಿಯ ಮಂಕು ಮಾಡಿತು
ಅಗೋ ಹುಡುಗ ಬಂದ ತುಡುಗನೆಂದು ಹಣ್ಣು ಅಡಗಿತು
ಹಸಿರ ಎಲೆಯ ದೇಟಿನಡಿಗೆ ಅಡಗಿ ಇಣಕಿ ನೋಡಿತು
ಕಲ್ಲನೆಸೆದ ತುಂಟನೆಂದು ಟೊಂಗೆಯಲುಗಿ ನಡುಗಿತು
ಎಲ್ಲ ಚಲುವು ಚಿಮ್ಮಿ ಚದುರಿ ಚಂದದಿಂದ ಕಂಡಿತು
ಗಗನ ಯೋಧಗಾಗಿ ನವಿಲು ಗರಿಯನುಚ್ಚಿ ಕುಣಿಯಿತು
ಕೇಕೆ ಹಾಕಿ ನೆಲವ ನೂಕಿ ಕುಣಿತದಿಂದ ದಣಿಯಿತು
ವೃಷ್ಟಿ ಒಲಿದು ವಿಜಯ ಗೈದು ಭೂದೇವಿ ಕೂಡಿತು
ಸುತ್ತು ಸೃಷ್ಟಿ, ಚಲುವನೆತ್ತಿ ಜಗವ ಬೆರಗುಗೊಳಿಸಿತು
*****