ಅವನ ಮಣ್ಣ ಪ್ರೀತಿ
ಬಾಳಿಗೆ ಬಂಗಾರ ಸಿಂಗಾರ
ದಿನಾಲೂ ಬೀಸುವ ಗಾಳಿಯ
ನೆತ್ತಿ ನೇವರಿಸಿ ಮಣ್ಣನೊಡನೆ ಮಾತನಾಡಿ
ಅವಳ ಹಿಗ್ಗಿಸಿ ರೋಮಾಂಚನಗೊಳಿಸುತ್ತಾನೆ
ಗಂಧವತಿ ಅವಳು ಎದೆ ತೆರೆದು ಹಸಿರು ಸೂಸುತ್ತಾಳೆ.
ಮೆದುವಾದ ಅವಳು, ಅವನು
ಬಿತ್ತಿದ ಬೀಜಕೆ ಬಸಿರಾಗಿ,
ಹೊಲದ ತುಂಬೆಲ್ಲಾ ಹಸಿರು ತೆನೆಕಾಳು;
ಒಸರಿದ ಹಾಲು ಹೀರಿದ ಹಕ್ಕಿಗಳು ಹಾರಿವೆ
ನೀಲ ಗಗನದ ತುಂಬ ಗಾಳಿಪಟ ಹಾಸಿವೆ.
ಅವಳೀಗ ಅವನು ಪೂಜಿಸುವ ದೇವತೆ.
ಮೊದಲ ಹನಿ ಸಿಂಚನಕೆ ಅವನು
ಮೋಡಗಳ ತೆಕ್ಕೆಗೆ ಸರಿದು ಹೋಗಿದ್ದಾನೆ,
ಸಂತೆಯಿಂದ ತಂದ ಬೀಜಗಳ ಅವಳ
ಉಡಿತುಂಬ ಸುರಿದಿದ್ದಾನೆ, ಯಾರ
ಮೋಹದಲಿ ಯಾರ ಊಹೆಯಲಿ,
ಯಾವ ಕಾಳಿನ ಮರ್ಮರ ಯೋಗಿಣಿ?
ಅವನ ಒಲವಿಗೆ ಅವಳ ಚಿಗುರು,
ಬಗೆ ಬಗೆದು ಹಬ್ಬಿ ಸಿಂಗರಗೊಂಡ
ಬಯಲು ಧ್ಯಾನ, ಮರದೊಳಗಿನ ಮೌನ,
ಬೆಳಕಿನ ಹಣತೆ ಹಚ್ಚಿದಾಗ ಬೀಗುವ
ಅವನು ಅವಳ ಮಡಿಲ ಕೂಸು
ದಾಯಿನಿ ಗಂಧವತಿಯ ಒಳ ಹೊರಗೂ ಚೈತನ್ಯ.
*****