ರಚನೆ: ೫ನೆಯ ಸೆಪ್ಟೆಂಬರ್ ೧೯೪೨, ಮೈಸೂರು
ಮಾನವ ಜನ್ಮದಾಗ್ ಹುಟ್ಟಿದ್ಮೇಲೆ
ಏನೇನ್ಕಂಡಿ
ಜೀವನ್ದೊಳ್ಗೆ ಸಾಯೋತನ್ಕ
ಗಂಡಾಗುಂಡಿ.
ಲಕ್ಷ್ಮೀಪುರಂ ಸ್ಟೇಷನ್ನೊಳ್ಗೆ
ಕುಳಿತ್ಕೊಂಡಿ
ಬರೀತೇನೆ ಲಾವಣಿ ಒಂದು,
ಜೈಲಿನ್ಕಂಡಿ.
ಹಿಂದೆ ಎಂದೂ ಜೈಲಿನ್ಕಡ್ಗೆ
ಸುಳ್ದಿರ್ಲಿಲ್ಲ
ಜೈಲಿನ್ಜೀವ್ನ ಹೆಂಗಂಬೋದ್
ತಿಳ್ದಿರ್ಲಿಲ್ಲ!
ಸಾವಿರ್ದೊಂಬೈನೂರ ನಲ್ಪ.
ತ್ತೆರ್ಡ್ನೇ ಇಸ್ವಿ
ಸೆಪ್ಟೆಂಬರು ಐದ್ನೇ ತಾರೀಕ್
ಜೈಲಿಬಂದ್ವಿ!
ಪೋಲೀಸ್ನೋರು ಮೀಟಿಂಗಾದ್ಮೇಲ್
ನನ್ನನ್ಹಿಡ್ದ್ರು,
ನನ್ನೇಲ್ನಂಬ್ಕೆ ಇಲ್ದೋರಂಗೆ
ಬೀಗಾ ಜಡ್ದ್ರು;
ಲಾಕಪ್ನಾಗೆ ಸೇರಿತ್ತು
ಎರ್ಡಿಂಚ್ಕಸ
ಮಾಡೋದೆಂಗೆ ಎನ್ನಿಸ್ಬಿಡ್ತು
ಅದ್ರಾಗ್ವಾಸ!
ಮಧ್ಯೆ ಮಧ್ಯೆ ಟೆಲಿಫೋನ್ ಗಂಟೆ
ಹೊಡ್ಕೊಳ್ತಿತ್ತು
ಬೂಡ್ಸಿನ್ಧಕ್ಕೆಯೊಳ್ಗೆ ಎದೆ
ಧಸ್ಸೆನ್ತಿತ್ತು.
ಲಾಕಪ್ನಿಂದ ಹೊರಕ್ನೋಡೋಕ್
ಇತ್ತೊಂದ್ಕಿಂಡಿ
ಅದ್ರಿಂದೊಳ್ಗೆ ಗುಬ್ಬಚ್ಯೊಂದು
ಬರೋದ್ಕಂಡಿ.
ಹೊರಗ್ಗಾಳೀಲ್ ಕುಣ್ದಾಡ್ತಿದ್ವು
ಮರ್ದೆಲ್ಗೊಳು
ನಿಮ್ ಸ್ವಾತಂತ್ರ್ಯ ನಮ್ಗಿಲ್ವಲ್ಲ
ಅಯ್ಯೋ ಗೋಳು!
ಎಂಬೋ ಯೋಚ್ನೆ ತುಂಬಿ ಬಂತು
ಮನಸ್ನೊಳ್ಗೆ
ಕೆನ್ನೀರ್ತುಂಬ್ತು ತಕ್ಷಣ್ವೇನೆ
ಕಣ್ಣಿನೊಳ್ಗೆ!
ಕಣ್ಣೀರ್ನೊಳ್ಗೆ ಕಾಣ್ದೇಹೋಯ್ತು
ಜೈಲಿನ್ಕಟ್ಟು
ಬಿಚ್ಚಿ ಹೋಯ್ತು ಒಂದ್ ಕ್ಷಣ್ದಲ್ಲೆ
ಸ್ಪಪ್ನದ್ಕಟ್ಟು!
***
ಹಿಮಾಲಯ ಮಲೆ ಮೇಲೆ
ನಾಡಿನ್ಬಾವ್ಟ
ಹಾರ್ತಾ ಇದೆ ಅದರ್ಮೇಲೆ
ಬಾನಿನ್ಗುಮ್ಟ!
ಬಾವ್ಟದ್ಪಾದ ತೊಳೀತಿದೆ
ಗಂಗಾ ನದಿ
ಅದ್ಕೇ ಅದು ಭಾರತದಾಗೆ
ಪಾವನ ನದಿ!
ಬಾವ್ಟವನ್ನು ಹಿಡ್ದಿದ್ದಾರೆ
ಗಾಂಧೀಯೋರು
ಎಡ್ಬಲ್ದಲ್ಲಿ ಜವ್ಹರ್ಲಾಲು
ಆಜಾದರು.
ಎಲ್ಲೂ ಕೂಗ್ತಾರ್ “ಬೋಲೋ ಭಾರತ್
ಮಾತಾಕಿ ಜೈ”
ಭಾರತ್ಮಾತೆ ಉತ್ರ ಕೊಟ್ಳು
“ಗಾಂಧೀಕಿ ಜೈ!”
*****