ಸೂರ್ಯ ದಿನಾಲೂ ಉದಯಿಸಿ
ಮುಳುಗುತ್ತಾನೆ ಇದು ಎಲ್ಲಿಗೆ
ಹೋಗಿ ನಿಲ್ಲಬಹುದು ಇಲ್ಲಾ
ಇಲ್ಲೇ ಇರುವುದು ಜಗದ ಪ್ರೀತಿ.
ಒಂದು ಕಾಣುತ್ತದೆ ಒಂದು
ಕಾಣುವುದಿಲ್ಲ ಮರದಲ್ಲಿ
ಮೌನವಾಗಿ ಚಿಗುರುವ ಹಸಿರು ಹಣ್ಣು
ಅಲ್ಲಿ ಮಾತು ಭಾಷೆ ಜಗದ ದಾಹ.
ಪಡೆದುಕೊಂಡ ಸಿಹಿ ಕಳೆದು
ಕೊಂಡ ಕಹಿ ಸದಾ ಕಣ್ಣಿಗೆ
ಕಾಣುವದಿಲ್ಲ ಬೆಳದಿಂಗಳ ರಾತ್ರಿ
ನೆನದ ಕ್ಷಣಗಳೆಲ್ಲಾ ಜಗದ ಮೋಹ.
ಸಿಕ್ಕ ಮರವ ತಬ್ಬಿ ಬೆಳೆದ ಬಳ್ಳಿ
ಸೂರ್ಯನ ಮೋಹಿಸಿ ಹರಿವ ನದಿ
ಸಮುದ್ರದ ಅಲೆಗಳ ಮೇಲೆ ಹಾರುವ ಹಕ್ಕಿ ಹಿಂಡು
ಪಾದಕ್ಕಂಟಿದ ಮಣ್ಣು ಜಗದ ಮಾಯೆ.
ನನ್ನೊಳಗೆ ನಿನ್ನದು ಅವನೊಳಗೆ
ಬೇರೊಬ್ಬರ ಮುಂಜಾನೆ ಸಂಜೆ ಚರಿತೆ
ಅರಳಿ ತೇಲಿದ ಹಾಯಿದೋಣಿ ಎಲ್ಲ
ಚಿಗುರು ಚಲನೆಯ ಉಸಿರು ಜಗದ ಮನೆ.
*****