ಮೂರ್‍ತಿ

ಹಗುರವಾಗಿ ತೇಲಿ ಬರುವುದು ನೀರು ಹನಿ ಹನಿ ಮುಗಿಲ ಮಳೆಯಾಗಿ ನಾವು ನಿಂತ ಕಡೆಗೆ ಉತ್ಸವ ಮೂರ್‍ತಿಯಂತೆ ನಾವಾಗಿ ಹೋಗಿ ದಣಿದು ಮಣಿದು ನಮಿಸಿ ಬರಬೇಕು ಕಣ್ಣಿಗೆ ನಿಲುಕದ ಅಗಾಧ ಕಡಲಿಗೆ ಗರ್‍ಭಗುಡಿಯ ವಿಗ್ರಹದಂತೆ...

ನಗೆ

ಹಾಲಿನ ರುಚಿಯಿಲ್ಲ ಮೊಸರಿಗೆ ಮೊಸರಿನ ರುಚಿಯಿಲ್ಲ ಮಜ್ಜಿಗೆಗೆ ಮಜ್ಜಿಗೆಯ ರುಚಿಯಿಲ್ಲ ಬೆಣ್ಣೆಗೆ ಬೆಣ್ಣೆಯ ರುಚಿಯಿಲ್ಲ ತುಪ್ಪಕ್ಕೆ ದಿನ ಒಂದರಲ್ಲಿ ರುಚಿಗಳ ಹಲವು ಬಗೆ ಪ್ರತಿ ಹೆಜ್ಜೆಯಲ್ಲು ಕಾಲದ ಕುಹಕ ನಗೆ *****

ದಿಗಿಲು

ಮನೆಯಲ್ಲಿ ಬೆಳ್ಳಿಯ ತೊಟ್ಟಿಲು ಚಿನ್ನದ ಬಟ್ಟಲು ಬೆಣ್ಣೆ ತುಪ್ಪ ತಿಂದು ಬೆಳೆದ ಮಕ್ಕಳು ಮರಿ ಮಕ್ಕಳು ಎಲ್ಲೋ ಕಾಡಲ್ಲಿ ಬೆಳೆದ ಗೊಬ್ಬರ ನೀರೂ ಉಣಿಸದ ಬಿದಿರ ಊರುಗೋಲು ಎದುರಾದರೆ ಏನೋ ದಿಗಿಲು *****

ನೆರಳು

ಒಬ್ಬರು ಬೆಳೆಯಲು ಅರಮನೆ ಕೋಟೆ ಕೊತ್ತಲು ಮತ್ತೊಬ್ಬರು ಬೆಳೆಯಲು ಗುಡಿ ಗುಡಾರ ಗುಡಿಸಲು ಕೊನೆಗೆ ಯಾರೋ ತೋಡಿದ ನೆಲದ ಮನೆಯ ಮಡಿಲು ಅದಕ್ಕೆ ಮಣ್ಣಿನ ಬಾಗಿಲು ಮುಚ್ಚಿದರೆ ಶಾಶ್ವತ ನೆರಳು *****