ತಾರೆಯ ಚಿತ್ತಾರದ ಇರುಳಿನ ಹಸೆ
ಕನಸಿನ ಆರತಿ ಆನಂದದ ದೆಸೆ
ಕಳೆಯುತ ಕೂಡಿರೆ ಕಾಲದ ಉಡಿ ಕಿಸೆ,
ನಸುಬೆಳಕಲಿ ಮುತ್ತಿತು ಚಂದ್ರನ ರಾಹು!
ಹಗಲುದಯಕೆ ಕೈದಾಳವನುರುಳಿಸಿ,
ಇರುಳಿನಳಿವಿಗೆ ರಕ್ತವ ಹೊರಳಿಸಿ,
ದುಗುಡದ ಮೋಡದ ಕೆಂಪೆದೆ ಕೆರಳಿಸಿ,
ನಸುಬೆಳಕಲಿ ಮುತ್ತಿತು ಚಂದ್ರನ ರಾಹು!
ನಕ್ಕು ನಲಿಸಿ ನಗೆ ಹೊನಲನು ಸೂಸುವ
ಎಳ ಕೂಸಿನ ಮುಖ ಸೊಗಸನು ಕಲಸುವ
ವಿಕೃತ ಸಿಡುಬಿನಂದದಿ ಕರಿಯೂಡುವ
ನಸುಬೆಳಕಲಿ ಮುತ್ತಿತು ಚಂದ್ರನ ರಾಹು!
ಗೆಳತಿ, ಕಾಣೆ ನೀನಿದರೊಳ ರೀತಿ;
ಇದೋ ಚಂದಿರಗಿಂದೊದಗಿದ ದುರ್ಗತಿ
ಒಲವಿಗೆ ಬಳುವಳಿ ಜಗವೀಯುವ ಪ್ರತಿ.
ನಸು ಸೊಗಸಲೆ ಕೊಲುವುದು-ಒಲವನು ರಾಹು!
(೧೯-೧೨-೧೯೪೫ ರಂದು ಬೆಳಗ್ಗೆ ಚಂದ್ರ ಗ್ರಹಣ)
*****