ಮೊನ್ನೆ ಸುರಿದ ಭಾರಿ ಮಳೆಗೆ
ಮನೆ-ಮನೆಗಳು ಒಡೆದು
ಬಯಲು ಆಲಯವಾಯ್ತು
ಸುತ್ತಿ ಸುಳಿದು ತಿರುಗಿದ ಇತಿಹಾಸ
ಗಿರಿಗಿಟ್ಟಿಯಾಗಿ ಆಕಾಶ ನದಿ ಹಳ್ಳ
ಕೊಳ್ಳಗಳು ವಿಕಾರಗಳಾದವು.
ಅನ್ನ, ಹಸಿವು ನೀರು ನೀರಡಿಕೆ
ಕರುಳಿಗೆ ಅಂಟಿಕೊಂಡ ಮಕ್ಕಳು
ದಿಕ್ಕು ದಿಸೆಯಿಲ್ಲದ ಅಲೆಮಾರಿ ಬದುಕು
ಹರಿದ ನೀರಿಗೆ ನಿದ್ದೆಬಾರದೇ
ಹೊರಳಾಡಿದ ರಾತ್ರಿಗಳು ಚಿಂದಿ
ಮನಸ್ಸುಗಳು ತೋಯ್ದು ತಪ್ಪಡಿ ಮುದ್ದೆಯಾಯಿತು.
ಸ್ಮಶಾನದ ಸಂಜೆ ಕೆಟ್ಟ ಗಾಳಿ ಬೀಸಿ
ಚಳಿಗೆ ಥರಗುಟ್ಟಿವೆ ಕೂಸು ಕುನ್ನಿಗಳು
ಕಣ್ಣ ತುಂಬ ಕಂಬನಿ ಹೊತ್ತ ಜೀವ ಭಯ
ಸಾವಿಗೆ ಹೆದರಿದ ಮೂಕ ಮರ್ಮರ
ವಿಶಾಲ ಬಯಲಿನ ತುಂಬ ಹೆರಿಗೆ ಮನೆ
ನೋವು ಸಂಕಟಗಳು ಹರಿಕೊಂಡವು.
ಬಾಡಿಗೆಗೆ ಮನೆಮಠವಿಲ್ಲ ಶಾಲೆಗಳಿಲ್ಲ
ಕರ್ಫೂ ತುಂಬಿದ ದಿನಗಳು ಚಾಕರಿಗೆ
ಬೇಕಿಲ್ಲ ಗಂಜೀ ಕುದಿಸಲು ಕಟ್ಟಿಗೆ ಇಲ್ಲ
ಹೊದೆಯಲು ವಸ್ತ್ರವಿಲ್ಲ, ಹುಣ್ಣುಗಳ
ಗಾಯಕ್ಕೆ ಮುಲಾಮು ಸವರುವವರ್‍ಯಾರು
ಪ್ರಜಾಪ್ರಭುತ್ವಕ್ಕೆ ಬೇಗ ಪ್ರಾರ್ಥನೆಯ ಭಾಷೆ ತಿಳಿಯುವುದಿಲ್ಲ.
ನೀರಲಿ ತೇಲಿದ ಮನೆ ಮಠ ಗುಡಿ
ಬಟ್ಟೆಯೇ ಹೊದಿಸದ ಹೆಣಗಳು
ಅರ್ಧ ದಾರಿಯಲಿ ಬಿಟ್ಟು ಹೋದವರ ಗೋಳು
ಮನೆ ಗೂಡಿ ಮುರಿದು ಬಿದ್ದಿವೆ ಹಕ್ಕಿಗಳು
ಹಸಿರು ಕಾಣದೇ ಎತ್ತಲೋ ಹಾರಿ ಹೋಗಿವೆ
ಮೋಡಗಳು ಕಣ್ಣೀರು ಸುರಿಸುವುದ ನಿಲ್ಲಿಸಲಿ
ನಾವು ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪ ಪಡೋಣ.
*****