ಯತಿವರನೆ ನಿನ್ನ ಹೆಸರಿಂದು ಉಸಿರಾಗಿಹುದು
ನಿನ್ನ ತಪೋಬಲದಿ ಬೆಳಗಿರುವೆ ನಾಡನೆಲ್ಲವನು
ಸುಖ-ದುಃಖ ಸಮನಾಗಿಸಿದ ಸ್ಥಿತಪ್ರಜ್ಞ ನೀನು!
ಕಡುವಿರ ಸಿದ್ಧಯೋಗಿ ಶ್ರೀ ಕಾಡಸಿದ್ದೇಶ್ವರಾ!!
ಈ ಪುಣ್ಯ ಭೂಮಿಯಲಿ ಪುಲ್‌ಪೊದರು ಬೆಳೆದು
ಹಿಂದೊಮ್ಮೆ, ಪ್ರಕೃತಿ ರೌದ್ರರಮಣೀಯತೆ ತಾಳಿತ್ತು,
ನಿನ್ನ ಅಧ್ಯಕ್ಷತೆಯಲಿ ಸರ್ವವೂ ನಿಯತ ಸ್ವಚ್ಛಂಧವಿತ್ತು,
ಇಂದೋ ಸೌ೦ದರ್ಯ ಸುಕುಮಾರತೆ ಮೆರೆಯುತ್ತಿವೆ!
ಕಾಡೆಲ್ಲಾ ನಾಡಿನಾ ಬಯಲಾಯ್ತು; ಮೋಡ ಮಿಂಚಾಯ್ತು
ಕಾಡು ನಗುವ ನಂದನವಾಯ್ತು; ಮಿಂಚು ಬೆಳಕಾಯ್ತು.
ಕಡು ಕಾಡೇ ನಾಡಿಗೆ ಪ್ರಥಮ ನಾಂದಿಯಾಯ್ತು
ನೋಡು ವಿದ್ಯಾನಗರವೇ ಮೈದಾಳಿತು; ಶ್ರೀ ಕಾಡಸಿದ್ದೇಶ್ವರಾ !
ಕಾಡಿನಲಿ ತಪಗೈಯ್ಯೆ ವಾಸಿಸಲು ಶ್ರೀ ಕಾಡಸಿದ್ದೇಶ್ವರನಾದೆ,
ಸೌಂದರ್ಯ ಪೋಷಕನಾಗಿ ನಾಡ ಶ್ರೀ ಸಿದ್ದೇಶ್ವರನಾದೆ.
ಕಾಡನ್ನು ಸತ್ಯ-ಸತ್ವಗಳಲಿ ಮೆರೆವ ನಂದನವಾಗಿಸಿದೆ !
ನಿನ್ನ ತಪೋವನವನೇ ಸಂಸ್ಕೃತಿಯ ಬೀಡಾಗಿಸಿದೆ !!
*****