ಸದ್ದಿಲ್ಲದೇ ಅರಳಿದ ಹೂಗಳು
ಮರದ ತುಂಬ ಹರಡಿ ಹಾಸಿತು
ಜೀವಗಂಧ ಝೇಂಕಾರದಲಿ ದುಂಬಿ ತಂಡ
ಗಾಳಿ ಬೀಸಿತು ತಂಪಾಗಿ ಮರದಲಿ
ಕುಳಿತ ಹಕ್ಕಿಗಳು ಉಲಿದವು ಇಂಪಾಗಿ.
ಗೂಡು ಕಟ್ಟುವ ನೆರಳು ಮಣ್ಣ
ಕಣಕಣದಲಿ ಹರಡಿ ಆಳಕ್ಕಿಳಿದ ಕಣ್ಣು
ತಾಯಿಬೇರು ನೂರು ರೂಪಕಗಳು
ಹುಟ್ಟಿದ ಜೀವ ಜಾಲ ಮೈ ಮನಸ್ಸಿನಲಿ
ಉಳಿದ ಮೌನ ಪ್ರತಿಧ್ವನಿ ರಿಂಗಣ.
ಆಳಕ್ಕೆ ಇಳಿದ ಭಾವಬಂಧ
ಮೇಲಕ್ಕೆ ಹಬ್ಬಿದ ಚಿಗುರಬಳ್ಳಿ
ಬಿಸಿಲು ಮಳೆ ಬೆಳದಿಂಗಳು
ಬೆಳೆಯುತ್ತ ಒಂದರೊಳಗೆ ಮತ್ತೊಂದು
ಎಂದೂ ಬರಿದಾಗದ ಕಡಲ ತಟ.
ಈ ಬೆಳವಣಿಗೆಯ ಬೆಳೆಯ ಇಳೆ
ಕೊನೆಯೆಂಬುದಿಲ್ಲ ಕ್ರಿಯೆ ಎದೆಯೊಳಗೆ
ಸೂರ್ಯ ಮುಳುಗಿದ ಮೇಲೆ ಬೆಳಕ ಕೊಡುವ ಚಂದ್ರ
ಕಣ್ಣಕಾಂತಿಯಲಿ ತೇಲಿದ ಗೌತಮನ ಬೆಳಕು
ಒಳಗೊಳಗೆ ಉಳಿದ ಪೂರ್ಣ ಪ್ರಜ್ಞೆ ಜ್ಞಾನ.
*****