ಆಕಾಶದ ರಾವುಗನ್ನಡಿಯೊಳಗೆ
ನನ್ನ ನಾ ದಿನನಿತ್ಯ ನೋಡಿಕೊಳ್ಳುತ್ತೇನೆ
ಪರೀಕ್ಷಿಸಿ ಉತ್ತರಿಸಿಕೊಳ್ಳುತ್ತೇನೆ
ನಸುಕಿನ ಮುಗ್ಧ ನಿದ್ದೆಯಿಂದೆದ್ದಾಗ
ನನ್ನೊಂದಿಗೆ ಮಂದಸ್ಮಿತ – ಉಷೆ ಬರುತ್ತಾಳೆ
ಹೊಸ್ತಿಲಿಗೆ ನೀರು ಹಾಕಿ
ನಮಸ್ಕರಿಸುವಾಗ
ಬಾಳೆ ತೆಂಗುಗಳ ಗರಿಗಳೊಳಗೆ
ಸೂರ್ಯ ಬಂದು
ಮುದ್ದಿಸಿ ಬಿಸಿ ಮಾಡುತ್ತಾನೆ.
ಬೆಳಗಿನ ಕೆಲಸ ಗಜಿಬಿಜಿಯೊಳಗೊಂದಾದಾಗ
ಆಗೀಗ ಸಿಟ್ಟು ಪಿತ್ತೇರಿದಾಗ
ರವಿ ನೆತ್ತಿಗೇರುತ್ತಾನೆ
ಮಧ್ಯಾನ್ಹದ ತೂಕಡಿಕೆಯಲ್ಲಿ
ಮೋಡಾಗಿ ರಾವು ಗನ್ನಡಿಗೆ ರಾಚುತ್ತೇನೆ
ಅಲ್ಲಿ ಚಕೋರೆಯಾಗಿ
ಮೋಡಿನ ವಿವಿಧ ರೂಪದೊಳಗೆ
ಹಳ್ಳ ಹೊಳೆಯಾಗಿ
ಜಾಜಿ ಗುಲಾಬಿಯಾಗಿ
ಬೆಟ್ಟ ಕಂದರವಾಗಿ ಆನೆ ಐರಾವತವಾಗಿ
ಬಂಗಾರದುಂಡೆಯಾಗಿ ಬೆಳ್ಳಿ ಚೌಕಟ್ಟಾಗಿ
ಚಿತ್ರಕಾರರ ಮನಸೂರೆಗೊಳ್ಳುವ ಸುಂದರಿಯಾಗಿ
ವಿಜ್ಞಾನಿಗಳ ಅಭೇದ್ಯ ಕೋಟೆ
ಸೀಳುವ ಶೂನ್ಯವಾಗಿ
ಪ್ರೇಮಿಗಳಿಗೆ ಪ್ರೇಯಸಿಯೋ
ಪ್ರಿಯಕರನೋ ಆಗಿ ನಾನು
ಸುಸ್ತು ಹೊಡೆದಾಗ –
ಜಡ ಕಳೆದುಕೊಳ್ಳಲು ಮೈ ಜಾಲಾಡಿಸುತ್ತೇನೆ
ಮೋಡ ಸರಸಿ ಮಳೆಯಾಗುತ್ತೇನೆ
ಚಿಲಿ ಪಿಲಿ ಪಕ್ಷಿಗಳ
ಮಕ್ಕಳ ಮನ ಗೆದ್ದುಕೊಳ್ಳಲು
ಮುಸ್ಸಂಜೆ ನೆನಪಿಸಿ
ದಾರಿ ತೋರುತ್ತೇನೆ
ಕತ್ತಲು ಸೇರಲು
ಚಂದ್ರನನ್ನು ಕರೆಯುತ್ತೇನೆ
ಚುಕ್ಕೆಯಾಗಿ ನಿನ್ನ ಸೇರುತ್ತೇನೆ
*****