ತಾಯ ಚುಂಬನದಲ್ಲಿ ಮೊದಲ ಹೂಬನ!

ತಾಯ ಚುಂಬನದಲ್ಲಿ ಮೊದಲ ಹೂಬನ!

ಚಿತ್ರ: ಮೊಹಮದ್ ಹಾಸನ

ತಾಯ ಮಡಿಲು ಮಮತೆಯ ಮಲ್ಲಿಗೆ ತೊಟ್ಟಿಲು ಮಾತ್ರವೇ ಅಲ್ಲ, ತಾಯಿ ನೀಡುವ ಬಿಸಿಬಿಸಿ ಚುಂಬನದಿಂದಲೇ ಮಗುವಿನ ಜೀವನದ ಜೇನ ಹೆಬ್ಬಾಗಿಲು ತೆರೆಯುತ್ತದೆ. ಹೆತ್ತತಾಯಿ ಅರಮನೆಯ ಮಹಾರಾಣೀಯೇ ಇರಲಿ, ಇಲ್ಲವೆ… ಹುಲ್ಲ ಗುಡಿಸಿಲಿನ ಕೂಲಿಕುಂಬಳಿಯ ಬೆಮರಿನ ಜೀವವೇ ಆಗಿರಲಿ… ಮಗುವಿಗೆ… ಅವಳೇ ದೇವರು… ಅವಳೇ ವಿಶ್ವ… ಅವಳೇ ಮೂಡು – ಪಡುವಲದ ಹೊಂಬೆಳಗು! ಈ ನಿಟ್ಟಿನಲ್ಲಿ ಮಗುವಿಗೆ ಅವಳು ತಾಯಿ ಮಾತ್ರವಲ್ಲ. ತಾಯಿರೂಪದಿಂದ ಬಂದ ಶಿಕ್ಷಕಿ… ಸದ್ಗುರು… ಸಂಭ್ರಮದ ಗೆಳತಿ! ಇಂಥ ಮಗುವಿನ ಮನಸ್ಸನ್ನೇ ಅಲ್ಲಮಪ್ರಭು… ‘ಕೂಸು ಕಂಡ ಕನಸಿನಂತೆ ಇದ್ದಿತು’ ಎಂದು ಗಾನಿಸಿದ್ದಾನೆ. ಕೂಸಿನ ಕನಸಿಗಿಂತಲೂ ಮಿಗಿಲಾದ ನಿರ್ಮಲ, ಲಲಿತ, ಕೋಮಲಭಾವ ಇನ್ನೊಂದಿರಲು ಸಾಧ್ಯವೇ ಇಲ್ಲ! ಸಂಸ್ಕೃತದ ನಾಟಕಕಾರ ಭವಭೂತಿ ಕೂಡ ‘ಉತ್ತರರಾಮಚರಿತೆ’ಯಲ್ಲಿ… ‘ಮಗುವೆಂದರೆ ಸತಿ-ಪತಿಯರನ್ನು ಬಂಧಿಸುವ ಆನಂದದ ಗಂಟು’… ಎಂದು ಎಷ್ಟೊಂದು ಸೊಗಸಾಗಿ ಬಣ್ಣಿಸಿದ್ದಾನೆ!

ಇಂಥ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲೇಬೇಕಾದ ಪ್ರಥಮಾಚಾರ್ಯ ಸ್ಥಾನದಲ್ಲಿರುವ ತಂದೆ-ತಾಯಿಗಳು ತಾವೇ ಮಧ್ಯಪಾನ-ಧೂಮಪಾನ-ತಂಬಾಕು ಸೇವನೆ – ಮಾದಕ ಪದಾರ್ಥಗಳು – ಲೈಂಗಿಕ ವ್ಯಸನ – ಜೂಜಾಟಗಳಿಗೆ ಬಲಿಯಾದರೆ ಅವರ ತಮ್ಮ ಎಳೆಯರ ಮುಂಬರುವ ಬಾಳಿನ ಬಾಳೆಯ ತೋಟವನ್ನೇ ಹಾಳುಮಾಡುತ್ತಾರೆ.

ಎಷ್ಟೋ ಸಲ, ಮಹಾಮೂರ್ಖರಾದ ತಾಯ್ತಂದೆಯರು ರಾತ್ರಿಯ ಹೋಟೆಲುಗಳಿಗೆ ತಮ್ಮೊಂದಿಗೆ ಮಕ್ಕಳನ್ನು ಕರೆದೊಯ್ದು ಅವುಗಳ ಗುಲಾಬಿ ಹೊಟ್ಟೆಯಲ್ಲಿ ತುಂಬಬಾರದ ಹೊಲಸನ್ನೆಲ್ಲ ತುಂಬಿಬಿಡುತ್ತಾರೆ. ನಾವು ಕಳಕೊಂಡ ಸಂಯಮ ಮಕ್ಕಳ ಭವಿಷ್ಯದಲ್ಲಿ ಹುಡುಕಿದರೆ ಯಾವ ಕಾಲಕ್ಕೂ ಸಿಗಲಾರದು.

ಅತ್ತ… ಹಳ್ಳಿಗಳಲ್ಲಿ… ಕಡುಬಡವರಾದ ಶ್ರಮಜೀವಿ ರೈತರು ತಮ್ಮ ಹಾಲುಗಲ್ಲದ ಮಕ್ಕಳನ್ನು ದನಮೇಯಿಸಲು, ಇಲ್ಲವೆ ಅಡವಿಯಿಂದ ಕುರುಚಲು ಕಟ್ಟಿಗೆ ತರಲು ಕಾಡಿಗೆ ಅಟ್ಟುತ್ತಾರೆ. ಈ ಗುಡ್ಡದ ಮಕ್ಕಳು ಗುಡ್ಡದಷ್ಟೇ ಗಟ್ಟಿಗರು. ಅಲ್ಲಿ ಪ್ರಕೃತಿಯೇ ಶಿಕ್ಷಕಿಯಾಗುತ್ತದೆ. ಮಣ್ಣು-ನೀರು-ಗಾಳಿ-ಬಿಸಿಲು-ಬಯಲು…. ಈ ಪಂಚತತ್ವದಲ್ಲಿ ತಾಯಂದಿರು ಕೊಡುವ ಪ್ರಾಕೃತಿಕ ಪ್ರಾಕ್ಟಿಕಲ್ ಟ್ರೇನಿಂಗ್ ಎಷ್ಟೊಂದು ಅದ್ಭುತ! ಈ ಚಿಣಿಗಿ ಹಾವಿನ ಜಿಣ್ಣರು ಆಯುಷ್ಯದುದ್ದಕ್ಕೂ ರೋಗಪ್ರೂಫ್ ಆಗುತ್ತಾರೆ. ಗುಂಡಕಲ್ಲು ಗುಳ್ಳವ್ವ ಆಗುತ್ತಾರೆ. ಈ ಕಾಡಿನ ಮಕ್ಕಳು ಸುಮ್ಮನಿರುತ್ತಾರೆಯೇ? ಹುಣೀಸೆ ಮರ – ಬೇವು – ನೀರಲ – ಮಾವು – ಆಲ – ಅರಳೆ ಮರಗಳನ್ನೇರಿ ಗಿಡಮಂಗನಾಟ, ಕಲ್ಲು ಗುರಿ ಹೊಡೆಯುವ ಆಟ, ಹೆಂಟೆಪೆಂಟೆಗಳ ಮೇಲೆ ಮುಟ್ಟಾಟ ಇತ್ಯಾದಿ ಹುಂಬ ಹುಡದಿಯಲ್ಲಿ ತೊಡಗುತ್ತಾರೆ. ತೆರೆದ ಬಯಲಿನ ತಾವರೆಗಳಾದ ಈ ಖಾಲಿಹೊಟ್ಟೆಯ ಮಕ್ಕಳು ಪಟ್ಟಣದ ಏರಕಂಡೀಶನ್ಡ್ ಮಕ್ಕಳಿಗಿಂತ ನೂರುಪಾಲು ಸಾವಿರಪಾಲು ಆರೋಗ್ಯವಂತರು.

ಆಧುನಿಕತೆ, ಶ್ರೀಮಂತಿಕೆಗಳ ಫ್ಯಾಷನ್ ಪರೇಡಿನಲ್ಲಿ ಉಗುರು – ತುಟಿಗಳಿಗೂ ಬಣ್ಣಬಳೆದ ಬೆಡಗಿನ ಲಲನೆಯರು, ಎಷ್ಟೋ ಸಲ ಎಳೆಬಿಸಿಲಿನಲ್ಲೂ ಬಣ್ಣದ ಕೊಡೆ ಬಿಚ್ಚಿಕೊಂಡು ಹೋಗುವುದನ್ನು ಕಂಡರೆ ಅಯ್ಯೋ ಅನ್ನಿಸುತ್ತದೆ. ಒಬ್ಬಳು ಫ್ಯಾಷನ್ನಾಗಿಯೇ ಹೇಳಿದಳು… ‘ಅಂಕಲ್… ನಾನು ಐದು ದ್ರಾಕ್ಷಿ ಹಣ್ಣು ತಿಂದರೂ ನನಗೆ ನೆಗಡಿ ಬರುತ್ತೆ? ಆದರೆ ಅತ್ತ ಆ ಕಡೆ… ಗುಡ್ಡದ ಮೇಲೆ ಧೋಧೋ ಎಂದು ಸುರಿವ ತಡಸಲು ಜಲವನ್ನು ಹೊಟ್ಟೆತುಂಬ ಕುಡಿಯುವ ಹಳ್ಳಿಯ ಪೆದ್ದಂಟಿ ಹುಡಿಗಿಯರು ಟಗರುಟಗರಾಗಿತ್ತಾರೆ!

ಒಬ್ಬಳು ಶ್ರೀಮಂತಿಕೆಯ ಶೋಮನ್‌ಶಿಪ್ಪಿನಲ್ಲಿರುವ ತಾಯಿ ಬಿನ್ನಾಣದಿಂದ ಹೇಳಿದಳು ‘ನನ್ನ ಮಗಳು ತುಂಭಾ ನಾಜೂಕು ಕಣ್ರಿ… ಅರ್ಧ ಚಪಾತಿ ತಿಂದರೂ ಅವಳ ಊಟ ಮುಗೀತು’. ಆ ಸೂಕ್ಷ್ಮಾತಿಸೂಕ್ಷ ಮಗಳು ಮುಂದೆ ಹೆರಿಗೆಯ ಕಾಲಕ್ಕೆ ಸಿಜೇರಿಯನ್ ಆಪರೇಷನ್ನಿನ ಬಾಗಿಲಿಗೆ ಬಂದು ನಿಂದಾಗಲೂ ಅವಳಿಗೆ ಸಮಸ್ಯೆ ಅರ್ಥವಾಗಲಿಲ್ಲ! ಆದರೆ… ನಮ್ಮ ಹಳ್ಳಿಯ ತಿಪ್ಪವ್ವ ದೂರದ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋದಾಗಲೇ, ಅಲ್ಲೇ ಅಡವಿಯಲ್ಲೇ ಪುಸಕ್ಕನೆ ಹಡೆದು, ಹೆತ್ತ ಕೂಸನ್ನೇ ಸೆರಗಿನ ಸಿಂಚಿನಲ್ಲಿ ಕಟ್ಟಿಕೊಂಡು ನಡೆಯುತ್ತ ಮನೆಗೆ ಬಂದದ್ದನ್ನು ಹೇಗೆ ಮರೆಯಲಿ?

ಈ ದೇಶದಲ್ಲಿ ಒಂದು ಅಂದಾಜಿನ ಪ್ರಕಾರ ಕೂಳಿಲ್ಲದೆ ಸಾಯುವವರಿಗಿಂತ, ಹೆಚ್ಚು ಕೂಳು ತಿಂದು ಸಾಯುವವರೇ ಅಧಿಕವೆಂದು ತಿಳಿದು ಬಂದಿದೆ! ಬಿಳಿ ಜೋಳದ ರೊಟ್ಟಿ, ನುಚ್ಚು, ಹಕ್ಕರಿಕೆ, ಮೂಲಂಗಿ, ಮೆಂತೆಸೊಪ್ಪು, ಉಂಡು ಕಿಚ್ಚಿನಂತಿದ್ದ ನಮ್ಮ ಅಜ್ಜ ನೂರಾಐದು ವರ್ಷದವರೆಗೂ ಗಟ್ಟಿಯಾಗಿದ್ದ. ಅವನಿಗೆ ಕೊನೆಯವರೆಗೂ ಕಣ್ಣು ಕಂಡವು, ಕಿವಿ ಕೇಳಿದವು. ರೋಗಗಳು ಅವನ ಮನೆ ಹತ್ತಿರ ಕೂಡ ಸುಳಿಯಲಿಲ್ಲ. ಅಬ್ಬಬ್ಬಾ… ನಮ್ಮ ಅಜ್ಜಿ… ನೂರು ವರ್ಷದ ಮುದಿಕಿ ಆದರೂ ಅವಳ ಕೂದಲು ಗುಂಗೀ ಹುಳದಂತೆ ಕರಿದೋ ಕರಿದು! ನಿಜವಾದ ವಿಶ್ವಸುಂದರಿ ಅವಳೇ! ಇಂದು ಹೊಸಹರೆಯದ ಯೌವನಿಗರು ತಲೆಗೂದಲಿಗೆ ಬಣ್ಣ ಬಳಿದುಕೊಳ್ಳುವ ದುರಂತಕ್ಕೆ ಏನು ಕಾರಣ ಎಂದು ನಾವು ಕೇಳಿದ್ದೇವೆಯೇ?

ಇನ್ನೊಬ್ಬರ ಬೆವರಿನಲ್ಲಿ ಪುಕ್ಕಟೆಯಾಗಿ ಉಂಡುಮಲಗುವ ಏರಕಂಡೀಶನ್ಡ್ ಬದುಕಿನ ಪಾಪಕ್ಕಿಂತ ಇನ್ನೊಂದು ಪಾಪವಿಲ್ಲ. ನಿಜವಾದ ನೈತಿಕತೆ ಗುಡಿ-ಮಠಗಳಲ್ಲಿಲ್ಲ, ನಮ್ಮ ಬದುಕಿನ ಪ್ರಜ್ಞೆ – ಪ್ರಯೋಗ – ಪ್ರಾಮಾಣಿಕತೆಯಲ್ಲಿದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧಾರೆ
Next post ನೆನಪು

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…