ಹನಿ ಹನಿ ಬೆವರಿಳಿದ ಹನಿ
ಮನಸ್ಸು ಅಂವ ಹೊರಟಿದ್ದಾನೆ
ಸುಡು ಬಿಸಿಲಿನಲಿ ತುಸುವೇ ದೂರ.
ಯಾರೋ ದುಂಬಾಲು ಬಿದ್ದು
ಬೆನ್ನಟ್ಟಿದವರ ಹಾಗೆ ನಡು ಮಧ್ಯಾಹ್ನದಲಿ.
ಟ್ರಕ್‌ಗಳು ಬಸ್ಸುಗಳು ದಾರಿಯಲಿ
ಹಾಯ್ದು ಹೋಗುತ್ತವೆ ಬಿಸಿಲು ಗುದುರೆಯ
ತಿಳಿ ತಿಳಿ ಜಲದ ಬಿಂಬದಲಿ ಯಾವುದೋ
ಊರು ಯಾರೋ ಸಂಬಂಧಿಕರ ನೆನಪಿನಲಿ,
ಸೂರ್ಯನ ಯಾತ್ರೆ ಸಾಗಿದೆ ದಾರಿಗುಂಟ.
ಸೀಮೆಎಣ್ಣೆ ಹಾಕಿ ಹತ್ತಿಸಿದ
ಒಲೆಯ ಮೇಲೆ ಕಾದ ಹಂಚಿನಲಿ,
ಸೂರ್ಯ ತೆಳು ತೆಳು ರೊಟ್ಟಿಯಾಗಿ
ಮೇಲೇಳುತ್ತಿದ್ದಾಳೆ ಅವ್ವ ಬೆನ್ನಗುಂಟ ಇಳಿದ
ಬೆವರ ಸ್ನಾನ ಎದೆಯ ಬದುವನ್ನೆಲ್ಲಾ ತೋಯಿಸಿದೆ.
ಬಿಸಿ ಕಿರಣಗಳು ಮೈ ಸವರುತ್ತವೆ.
ಒಳಗೂ ಹೊರಗೂ ಅತ್ತ ಇತ್ತ ಕಾಲದ ಚಲನೆ.
ಜೀವನ ಹರಿದು ಮೋಡಗಳ ಗುರಾಣೆ ಹಿಡಿದ ಸೂರ್ಯ,
ಪ್ರತಿಶಬ್ದಗಳ ಸಾಲುಗಳಿಗೆ ಸರಿದ ಕವಿತೆ,
ಭಾಷೆಯ ಸೆಳವಿನಲಿ ಅರಳಿದ ಗುಲ್‌ಮೋಹರ್,
ಯಾವ ಗುಟ್ಟೂ ರಟ್ಟು ಮಾಡಿಲ್ಲ ಗಿಡಮರಗಳು.
*****