ನನ್ನ ನಂಬು ಮೋನಾಲಿಸಾ
ನಾನು ಹಗಲು ಗಳ್ಳನೂ ಆಲ್ಲ ತಲೆಹಿಡುಕನೂ ಅಲ್ಲ
ಪೊಳ್ಳು ಭ್ರಮೆ ಎಂದರೂ ಅನ್ನಲಿ
ಈ ಜನ ಈ ನ್ಯಾಯಾಲಯ
ನೀನು ನನ್ನವಳೇ.
ಮರೆಯಲಾದೀತೆ ನಾನೂರು ವರ್ಷಗಳ
ಹಿಂದಿನ ನಮ್ಮ ಸಂಸಾರ?
ಹೇಗೆ ಹೇಳಲಿ ಇವರಿಗೆ
ಸಧೃಢ ದೇಹ ಮುಗುಳ್ನಗೆ
ಹೊಳಪು ಕಣ್ಣುಗಳ ನೀನು
ಹೊರಬಿದ್ದಾಗೆಲ್ಲ ನಾನದೆಷ್ಟು ಅಸೂಯೆ ಪಡುತ್ತಿದ್ದೆ ಗೊತ್ತೇ
ಲಿರ್ಯೊನಾರ್ಡ್ ಡಾ ವಿಂಚಿ ಕುಂಚಕ್ಕೆ
ನೀ ರೂಪದರ್ಶಿ ಯಾದಾಗ ನಾನು
ಚಡಪಡಿಸಿದ್ದೇನು ನಿನ್ನ ಕೆನ್ನಗೆ ಬಾರಿಸಿದ್ದೇನು
ಪೂನರ್ಜನ್ಮ ಇಲ್ಲದಿದ್ದರೆ
ಮತ್ತೆ ಹುಟ್ಟಿ ನಿನ್ನನ್ನು ನೆನಪಿಸಿಕೊಳ್ಳುವ
ಪ್ರಮೇಯವೇ ಇರುತ್ತಿರಲಿಲ್ಲವೇನೋ
ನಾನು ಮತ್ತೆ ಹುಟ್ಟಿದ್ದೇನೆ
ತೈಲ ಚಿತ್ರದ ನೀನು
ಮತ್ತೆ ಮತ್ತೆ ನನ್ನನ್ನು ಕಾಡುತ್ತಿರುವಿ
ಪ್ಯಾರಿಸ್ಸಿನ ಸುತ್ತಲ್ಲ ಹರಿದಾಡಿದ
ಸೈನ್ ನದಿಯಂತೆ ಕೆಂಪು ಹಸಿರು
ಮಿಶ್ರಿತ ಪ್ಲುಟೋಯ್ ಗಿಡಗಳಂತೆ.
ಲೂವೃ ಮ್ಯೂಸಿಯಂ
ಬಂಧಿಖಾನೆಯಲ್ಲೇಕಿರಬೇಕು ನೀನು
ಎಂದೇ ಭದ್ರತಾ ಪಡೆಯನ್ನೇ ಭೇದಿಸಿ
ನಿನ್ನ ಹೊರಕರೆದುಕೊಂಡು ಬಂದೆ
ಊರೂರು ಸುತ್ತಿದೆ.
“ನಿನ್ನ ಮುಗಳ್ನಗೆಯಿಂದ
ಪ್ಯಾರಿಸ್ಸಿನ ಮುಸ್ಸಂಜೆಗಳಿಗೆ ರಂಗೇರುತ್ತಿತ್ತು
‘ಶಾಂಪೇನ್’ ಬಾಟಲ್‌ಗಳು ಖಾಲಿಯಾಗುತ್ತಿದ್ದವು’
ಮೋನಾಲಿಸಾ ನೀನೂ ಲೂವೃದ ಮಹಾರಾಣಿ
ಜಗತ್ತಿನ ರಾಜಕುಮಾರಿ
ನನ್ನ ಗುಡಿಸಲಲ್ಲೇನು
ನಿನ್ನ ನಗು ಹೊಳಪು ಕಣ್ಣು ಕಂದಿಡುತ್ತಿದೆಯಲ್ಲ
ರೂಪರಾಶಿ ರೂಪಸಿ
ಇದೆಂತಹ ವಿರಹವೇದನೆ ನನಗೆ
ಚಿತ್ರ ಹರಿದು ಸುಡಲೂ ಮನಸ್ಸು ಬರುತ್ತಿಲ್ಲ
ನೀನು ನನ್ನವಳು.
ಪೋಲೀಸ ವಶಕ್ಕೆ ನಾನು ಸೇರಿದ್ದೇನು ಮಹಾ ಬಿಡು
ನನ್ನಿಂದ ಅವರು ಕಿತ್ತುಕೊಂಡರಲ್ಲ ನಿನ್ನ
ನ್ಯಾಯಾಲಯ ಹುಚ್ಚ ಮನೋರೋಗಿ ಎಂದಿತೇನೋ
ನಿಜವಾಗಿಯೂ ನಾನೇನೂ ಅಲ್ಲ
ಪುನರ್ಜನ್ಮದಲ್ಲಿ ನಂಬಿಕೆ ಇರುವವನು ಮಾತ್ರ.
ಜೈಲಿನಿಂದ ಹೊರಬಿದ್ದು ಎಷ್ಟೋ ವರ್ಷಗಳಾದವು
ಈಗ ನೂರರ ಮುದುಕ
ಲುವೃದ ಎದುರಿನ ಸೈನ್ ನದಿಯ
ದಡದಲ್ಲೇ ಕುಳಿತು
ಹದಿಹರೆಯರ ಮುಗುಳ್ನಗೆಯಲಿ
ನಿನ್ನ ಕಾಣುತ್ತ ಬೆಚ್ಚಗಾಗುತ್ತಿದ್ದೇನೆ ಲೀಸಾ
ಮತ್ತೆ ಮತ್ತೆ ಅವರಲ್ಲಿ
ನೀ ಹುಟ್ಟಿ ಬರುತ್ತಲೇ ಇರುವಿಯೆಂದು.
(ಪ್ಯಾರಿಸ್ಸಿನ ಲೂವೃ ಮ್ಯೂಸಿಯಂದಲ್ಲಿ ಮೋನಾಲಿಸಾ ಚಿತ್ರ ನೋಡಿದಾಗ – ೧೫೦೬ರಲ್ಲಿ ಲಿರ್ಯೊನಾರ್ಡ್ ಡಾ ವಿಂಚಿ ಮೋನಾಲಿಸಾ ತೈಲ ಚಿತ್ರ ತೆಗೆದ. ಅದು ಜಗತ್ತ್ರಸಿದ್ದವಾಯಿತು. ೧೯೧೧ ರಲ್ಲಿ ಪುನರ್ಜನ್ಮದಲ್ಲಿ ನಂಬಕೆ ಇರುವ ಪೆರೂಗೀ ಎನ್ನುವ ವ್ಯಕ್ತಿ ಈ ಚಿತ್ರ ಕಳವು ಮಾಡಿವ. ಕೊನೆಗೆ ಇವನು ಸಿಕ್ಕಿಬಿದ್ದು ವಿಚಾರಣೆ ನ್ಯಾಯಾಲಯದಲ್ಲಿ ನಡೆದಾಗ ಇವನೊಬ್ಬ ಮನೋರೋಗಿ ಎಂದು ಜೈಲಿನಿಂದ ಬಿಡುಗಡೆ ಮಾಡಿದರು. ಕಳುವಿನ ಉದ್ದೇಶ ಏನಿರಬಹುದು? ದೇಶ ವಿದೇಶದಲ್ಲಿ ಸುದ್ದಿ ಹಬ್ಬಿತ್ತು.)
*****