ಬಯಲಲ್ಲಿ ಬಿಸಿಲಲ್ಲಿ ಆ ಬಾ-ಲೆ!
ಹಸಿಹುಲ್ಲು ಕುಯ್ದಾಡುವುದು ಕೇಳ್ದೆ!! ||ಪಲ್ಲ||
ಹಾಡೊಂದು ತನ್ನಪ್ಪ ಮರೆತಽದೊ,
ಅವಳಮ್ಮ ಹರೆಯದಲಗಲಿಽದೊ!
‘ಕಿವಿನಿಗುರಿ ಕಂಕೆರಳೀ ನಾ ಕೇಳಿ,
ಹೆಣ್ ಬಾಳ ಕಂಡು ಸೋಜಿಗ ತಾಳಿ! ||ಬಯ||
ತಾನೊರ್ವ ಕೊಡಗೂಸು ಎಂದಽಳು,
ಪುಡಿಕಾಸು ಬಿಸುಡೋದ ತೆಗೆದಽಳು!
ಸೆರಗು ಮೂಲೆಯಲಿಟ್ಟು ಬಿಗಿದಾಗ,
ಕಣ್ಣೀರ ಬಿಸಿಯೆನ್ನ ತಾಗಿಽತೊ! ||ಬಯ||
ತನ್ನಣ್ಣ ಚಿಕ್ದಾಗೆ ಸತ್ತೋಽದ,
ಮಾಂವಂದಿರಾರಿಲ್ಲ ಒಣಜೀವ!
ಸತಿಯಾಗೆ ಗತಿಯಿಲ್ಲ-ಈ ಹುಲ್ಲು,
ಹುಲ್ನೆಲ ಅವಳೊಂದು ಒಸಿಪಾಲು! ||ಬಯ||
ಹುಲ್ಲಿರಿವ ಕತ್ತಿಯ ಕೊರಳಿಽಗೆ,
ತಾನಾಗೆ ಮಡುಗ್ವಳು ಸಾಯೋಗೆ;
ತನತನಗೆ ತಾಳುಽವ ಬುದ್ದಿಯೋ
ಕಾಲಮಾನವ ನೂಕೆ ಧೈರ್ಯಽವೊ! ||ಬಯ||
ಹೂಜೀವ ಸೊಗಸೆಂದು ಹಾಡೋಳು,
ಬೆಂದ ಬಾಳಿನ ತಾಪ ನೆನೆಯೊಽಳು;
ಕಣ್ಣೀರುಮಯಲೋಕ-ಅನ್ನೋಽಳು,
ತನ್ನ ಬಾಳಿನ ಮರುಕ ಮರೆಯೋಳು! ||ಬಯ||
ಬಯಲ ಬಾನ್ ಸುತ್ತೆಲ್ಲ ಮೌನಽವೊ,
ಈ ಹುಡುಗಿಯ ಹಾಡಿನ ಮೇಳಽವೊ;
ಮಲೆನಾಡ ವಂಶದ ಸವಿಜೀಽವ,
ತಬ್ಬಲಿಯಾದ ಈ ಹೂಬಾಽಳ! ||ಬಯ||
ಕೆಂಬಕ್ಕಿ ಬಯಲಾಗೆ ಹಾರ್‍ವಾಗ
ಕೊರಳೆತ್ತಿ ಆ ಬಾಲೆ ದಿಟ್ಟಿಽಸಿ;
ತನ್ ತಾಯಿ ಸಾಕಿದ್ದ ಮರಿಕೋಳಿ,
ನೆನೆಯೋಳು ತನ್ನೊಂದು ಮರಿಬೆಽಕ್ಕ! ||ಬಯ||
ಹಾಡಲ್ಲೆ ಹನಿಯಾಗಿ ಜಿನುಗೋಳು!
ತನ್ನೆಸರು ಭೂರಮೆ-ಅನ್ನೋಳು!
ಗತಿ ತೋರದಲ್ಲಿಯೆ ಒರಗೋಽಳು,
ಏನಿದೀ ತರವಿದೊ ಜನಬಾಽಳು! ||ಬಯ||
*****