ಕಾಣಬಾರದ ಕದಳಿಯಲೊಂದು ಮಾಣಿಕ ಹುಟ್ಟಿತ್ತು.
ಇದಾರಿಗು ಕಾಣಬಾರದು.
ಮಾರೆನೆಂದರೆ ಮಾನವರಿಗೆ ಸಾಧ್ಯವಾಗದು.
ಸಾವಿರಕೆ ಬೆಲೆಯಾಯಿತ್ತು.
ಆ ಬೆಲೆಯಾದ ಮಾಣಿಕ ನಮ್ಮ
ಶರಣರಿಗೆ ಸಾಧ್ಯವಾಯಿತ್ತು.
ಆ ಮಾಣಿಕವ ಹೇಗೆ ಬೆಲೆಮಾಡಿ ಮಾರಿದರೆಂದರೆ,
ಕಾಣಬಾರದ ಕದಳಿಯ ಹೊಕ್ಕು,
ನೂನ ಕದಳಿಯ ದಾಂಟಿ, ಜಲವ ಶೋಧಿಸಿ,
ಮನವ ನಿಲಿಸಿ, ತನುವಿನೊಳಗಣ ಅನುವ
ನೋಡುವನ್ನಕ್ಕ ಮಾಣಿಕ ಸಿಕ್ಕದು.
ಆ ಮಾಣಿಕದ ಬೆಳಗ ನೋಡಿಹೆನೆಂದು
ಮನುಜರನೆ ಮರೆದು, ತಾನು ತಾನಾಗಿ
ಜ್ಞಾನಜ್ಯೋತಿಯ ಬೆಳಗಿನೊಳಗೋಲಾಡಿ
ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ