ಹೋಟೆಲುಗಳೇಳುತ್ತವೆ ಹೊಟ್ಟೆಗಳ ಮೇಲೆ
ಎದ್ದು ಪೇಟೆ ಪಟ್ಟಣಗಳನ್ನು ಆಕ್ರಮಿಸಿಬಿಡುತ್ತವೆ!
ಆದರೆ ನಮ್ಮೂರ ಕಾಮತರ ಹೋಟೆಲು ಮಾತ್ರ
ಬೆಳೆದೂ ಬೆಳೆಯದಂತಿದೆ
ಇದು ವಸ್ತುಗಳ ಸ್ಥಿತಿಸ್ಥಾಪಕ ಗುಣದಲ್ಲಿ
ನನ್ನ ನಂಬಿಕೆಯನ್ನು ಹೆಚ್ಚಿಸಿದೆ
ಎಲ್ಲಾ ಕಳೆದು ಹೋಯಿತು ಎಂದಾಗ
ಇಲ್ಲ ಇನ್ನೂ ಇಲ್ಲ ಎನ್ನುವಂತೆ
ಬಾಣಲೆಯಲ್ಲಿ ಪೂರಿಗಳು ಕುಣಿದಾಡುತ್ತವೆ
ಭಜಿಗಳು ಕರಿಯುತ್ತವೆ–ಮುಳುಕಗಳು
ಮುಳುಗಿ ಏಳುತ್ತವೆ! ಅವು
ನಮ್ಮೆದುರು ಬರುವುದನ್ನೆ ಕಾಯುತ್ತೇವೆ
ವೇಣು, ಗಂಗಾಧರ ಹಾಗೂ ತಿಂಡಿಪೋತ ಶಂಕರ!
ಗಂಗಾಧರನ ಬಳಿ ನಿನ್ನೆಯಿಂದಲೂ
ಅತ ರಚಿಸತೊಡಗಿದ ಕವಿತೆ-ಅದರ ಅಕ್ಷರಗಳು ಸಹ
ಹಸಿವಿನಿಂದ ಎದ್ದು ಕುಳಿತಂತಿವೆ!
ನನ್ನ ಜೇಬಿನಲ್ಲೊಂದು ಹತ್ತರ ನೋಟು-ಮೊದಲ
ಪದ್ಯಕ್ಕೆ ಬಂದ ದುಡ್ಡು ! ಕಾಮತರ
ಗಲ್ಲಾ ಪೆಟ್ಟಿಗೆ ಯಾವಾಗ ಸೇರುವೆನೋ
ಎಂದು ಕಾತರದಿಂದಿದೆ!
ಕಾಮತರು ಮಾತ್ರ ಇದೆಲ್ಲದರ ಮಧ್ಯೆ
ಬುದ್ಧನಂತಿದ್ದಾರೆ ಎತ್ತರದ ಪೀಠದ ಮೇಲೆ
ನಾವು ತಿಳಿದಾಗಿನಿಂದಲೂ
ಹೀಗೆಯೇ ಇದ್ದಾರೆ!
*****