ಅಂಗಳಕ್ಕಿಳಿದು ತಮ್ಮಟೆ ಬಾರಿಸಿ
ಶಂಖ ಊದಿ
ದೇವರ ಬಲ ಹೆಚ್ಚಲಿ
ಹಾವಿನ ಬಲ ಕುಂದಲಿ ಹರಿಯೋ ಹರಿ
ಎನ್ನುತ್ತಾ ಸುತ್ತಿದರು
ಮುಳುಗಿ ಮಿಂದು ಉಂಡು ಮಲಗಿದರು
ಅಂದಿಗೆ ಧನ್ಯತೆ
ಫ್ಯಾಕ್ಟರಿಗಳ ಚಿಮಿಣಿಗಳ ದಟ್ಟ ನೆರಳುಗಳ
ಹಿರೋಶಿಮಾ ಅಣಬೆಗಳ ಪಾಷಾಣ ಮೋಡಗಳ
ಕೆಳಗೆ ಮಂದಿ ಮೇಲಕ್ಕೆ ನೋಡಿ
ಮಳೆ ಬೆಳೆಯ ಭವಿಷ್ಯ ಗುಣಿಸಿದರು
ಚಂದ್ರ ವರ್ಷಾಧಿಪತಿ ಶನಿ ಮಂತ್ರಾಧಿಪತಿ ಇತ್ಯಾದಿ
ಮತ್ತೆ ಈ ಸಂಕ್ರಾಂತಿ ರಕ್ತವಸ್ತ್ರಾಲಂಕೃತೆ ಶ್ವೇತಾಶ್ವವೇರಿ
ಕಂಚಿನ ಪಾತ್ರೆಯಲ್ಲಿ ಪಾಯಸ ಮೆಲ್ಲುತ್ತ
ದಕ್ಷಿಣಕ್ಕೆ ಹೋಗುತ್ತಾಳೆ.
ಬೆಲೆಗಳು ಏರುವುದುಂಟು
ರೋಗ ರುಜಿನಗಳ ಪೀಡೆಯುಂಟು
ಸರ್ವನಾಶಕ್ಕೆ ಎಡೆಯುಂಟು
ಇವರಿಗೆ ಪರಿಶಾಂತಿ ಮಂತ್ರಗಳಲ್ಲಿ ವಿಶ್ವಾಸವುಂಟು
ಕಾಲೇಜಿನ ಗಂಟೆಯ ಸದ್ದು ಅನುರಣಿಸುತ್ತದೆ
ಮನಸ್ಸಿನ ಅಗಾಧ ಜಗತ್ತಿನಲ್ಲಿ ನೋವು ಚಡಪಡಿಸುತ್ತಿದೆ
ದಿನನಿತ್ಯ ವ್ಯಾಪಾರ ವ್ಯವಹಾರ ಪ್ರವರ್ತನೆ ಆವರ್ತನೆ
ಪಾಠ ಹೇಳುವುದು
ಶಬ್ದಕ್ಕೆ ಶಬ್ದ ಜೋಡಿಸುವುದು
ಉದ್ದೇಶರಹಿತ ಮಾತು ಬೆಳೆಸುವುದು
ಹತ್ತು ಜನರಲ್ಲಿ ಬೆರೆತು ನಗುವುದು
ಗುಂಪಿನಿಂದ ತಲೆಮರೆಸಿ ಅಳುವುದು
ಕ್ಷಣಕ್ಷಣಕ್ಕೂ ಸಾಯುವುದು
ಒಂದೊಂದೇ ನಂಬಿಕೆಗಳು ಕಳೆದು
ಬಂಧಗಳು ತುಂಡಿರಿಸಿಕೊಂಡು ತಿರಸ್ಕರಿಸಿ
ಲಿಮೊಸಿನುಗಳಂತೆ ಹಾದು ಹೋದಾಗ-
ಹೇಳಿದ ಮಾತು, ಕೊಟ್ಟ ಭಾಷೆ, ಬರೆದ ಕವಿತೆ, ಚಿಂತಿಸಿದ ಮನಸ್ಸು,
ಹಿಡಿದ ಕೈ ಬಿಟ್ಟಮೇಲೆ
ಸಾವು ಬದುಕಿನ ನಡುವೆ ಯಾವುದನ್ನೂ ಆರಿಸಲಾರದೆ
ಉಳಿದಿರುವುದು ಇದು ಘೋರ
ಈ ಸಹಿಸಲಾಗದ ಯಾತನೆ ಯಾರಿಗೆ ತಾನೆ ತಲುಪುತ್ತದೆ?
ತಲುಪಿದರೂ ಅದರಿಂದ ತಾನೆ ಏನು?
*****