ನಮ್ಮ ಪ್ರೇಮದ ದಾರಿ ಕೊರಕಲನು ಸಮವಾಗಿ,
ದೂರವನು ಹತ್ತಿರಿರಿಸಿ-
ಸಂದ ಭಾಗ್ಯದ ಚೆನ್ನುಗನಸನ್ನು ನೆನೆಸನ್ನು
ತೋರಿದುಂಗುರವ ಕಳೆದೆ!
ಸಂಜೆ ತಾರೆಯ ನೋಡಿ ಅದರ ಕಾಂತಿಯ ಹಳಿದ
ಸರಸಿ ಉಂಗುರವವಳು;
ಮೊಲ್ಲೆ ಮಲ್ಲಿಗೆ ವರ್ಣದೀಪ್ತಿಯನು ತಾಕಂಡು
ಮುಡಿಯಲೆಂದಳು ನನಗೆ!
ರಮಣನಂದೆನಗಿತ್ತ ಅಂದಿನಾ ದಿನದಿಂದ
ನನ್ನೊಡನಾಡಿ ಅವಳು,
ಪತಿಭವನ ವಾರ್ತೆಯನು ಪತಿಯೊಲುಮೆ ತೆರವನ್ನು
ಅಂದವಳವಳೆ ನನಗೆ!
ಕ್ಷಣಕ್ಷಣಕು ದಿನದಿನಕು ಉಂಗುರದ ಸ್ಪರ್ಶವೇ
ನನ್ನ ಪ್ರೇಮದ ಹರುಷ
ಹೃದಯ ಸಾಮಿಪ್ಯವನು ಪ್ರಣಯ ಸಾರೂಪ್ಯವನು
ತೋರಿತದು-ಅಹಾ ಎಲ್ಲಿ?
ಕೆರೆಯಲ್ಲಿ ಕೈತೊಳೆಯೆ ಅದು ನಕ್ಕು ಹೊಳೆಹೊಳೆದು
ನನ್ನ ಮುತ್ತನ್ನು ಕೊಂಡು-
ನಿನ್ನ ರಮಣನ ಪ್ರೇಮ ಸಾಕ್ಷ್ಯ ರೂಪಿಯೆ ನಾನು-
ಎಂದು ಗೇಲಿಯನು ಮಾಡಿ.
ಕೈಯ ನೀರೊಳಗಿಡಲು-ಅದರ ಹೊಳಪನು ನೋಡಿ
ಬರಲು ಬೆರಗಿಂ ಮೀಂಗಳು,
ಮುಗ್ದೆ ಶಕುಂತಲೆಯ ಉಂಗುರವ ಕದ್ದಂತೆ
ಸಿಗಲಾರೆ-ತಾನು ಎಂದು
ಓಡಿಸುತ ಮೀಂಗಳನು-ಪ್ರೇಮಪುರಿ ದಾರಿಯನು
ತೋರುವೆನು-ಅಂದಿತೆನಗೆ.
ಬೆರಳ ನಡುವಲಿ ಸಿಲುಕಿ ಓಡಲಾರೆನು, ಮೋಡಿ
ವಿದ್ಯೆಯಾ ಗಾಡಿ-ಎಂದು.
ಪ್ರೇಮವಾರ್ತೆಯ ದೂತಿ, ನಲ್ಮೆ ಕಾಯುವ ದಾಸಿ
ಮಾಯವಾದಳೇ ಇಂದು?
ಜಗದ ಪ್ರೇಮಿಗಳ ಹೃತ್ಕಮಲಗಳ ಹೆಣೆಯುತಿಹ
ಮಾಯ ಮುದ್ರಾ ಸ್ವರೂಪಿ!
*****