ಏನೇನು ಇಲ್ಲದಾಗ ನೀವಿಲ್ಲದಿದ್ದರೆ,
ನಾನಾಗಬಲ್ಲೆನೇ ಅಯ್ಯ?
ಆದಿಅನಾದಿ ಇಲ್ಲದಂದು ನೀವಿಲ್ಲದಿದ್ದರೆ,
ನಾನಾಗಬಲ್ಲೆನೇ ಅಯ್ಯ?
ಮುಳುಗಿ ಹೋದವರ ತೆಗೆದುಕೊಂಡು ನಿಮ್ಮ
ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು,
ರಕ್ಷಣೆಯ ಮಾಡಿದ ಶಿಸುವಾದ ಕಾರಣ
ಹಡಪದಪ್ಪಣ್ಣನೆ ಎನ್ನ ಕರಸ್ಥಲಕ್ಕೆ
ಲಿಂಗವಾಗಿ ಬಂದು ನೆಲೆಗೊಂಡರು.
ಚನ್ನಮಲ್ಲೇಶ್ವರನೆ ಎನ್ನ ಮನಸ್ಥಲಕೆ
ಪ್ರಾಣವಾಗಿ ಮೂರ್ತಗೊಂಡರು
ಆ ಕರಸ್ಥಲದ ಲಿಂಗವನರ್ಚಿಸಿ ಪೂಜಿಸಿ,
ವರವ ಬೇಡಿದರೆ, ತನುವ ತೋರಿದರು.
ಆ ತನುವಿಡಿದು ಮಹಾಘನವ ಕಂಡೆ.
ಆ ಘನವಿಡಿದು ಮನವ ನಿಲಿಸಿದೆ.
ಮನವ ನಿಲಿಸಿ ನೋಡುವನ್ನಕ್ಕ
ಪ್ರಾಣದ ನೆಲೆಯನರಿದೆ. ಪ್ರಾಣವನೊಂದುಗೂಡಿದೆ.
ಕಾಣಬಾರದ ಕದಳಿಯನೆ ಹೊಕ್ಕು
ನೂನ ಕದಳಿಯ ದಾಂಟಿದೆ.
ಜ್ಞಾನಜ್ಯೋತಿಯ ಕಂಡೆ.
ತಾನುತಾನಾಗಿಪ್ಪ, ಮಹಾಬೆಳೆಗಿನಲ್ಲಿ
ಓಲಾಡಿ ಸುಖಿಯಾದೆನಯ್ಯ
ಚನ್ನಬಸವಣ್ಣನ ಕರುಣದ ಶಿಸುವಾದ ಕಾರಣದಿಂದ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ