ಎಲ್ಲರೂ ಎದ್ದು ಹೋದರು ಒಬ್ಬೊಬ್ಬರಾಗಿ ಕೆಲವರು ಗುಂಪುಗಳಾಗಿ
ಇಲ್ಲಿ ಬಂದಿದ್ದ ಜನರು ಗಳಿಗೆಯ ಮೊದಲು ಇಲ್ಲಿ ಸೇರಿದ್ದವರು
ಸೇರಿ ಹೆಣ್ಣು ಗಂಡುಗಳು ಪಾನೀಯದಲ್ಲಿ ಸಂಗೀತದಲ್ಲಿ ನೃತ್ಯದಲ್ಲಿ
ಸೇರಿ ಒಂದಾಗಿ ಒಂದೆ ಕ್ರಯಾವಿಧಿಯಲ್ಲಿ ತೊಡಗಿಸಿಕೊಂಡವರು
ಟೇಬಲಿನ ಸುತ್ತ ಸೋಫಾದ ಸುತ್ತ ಪಿಯಾನೋದ ಸುತ್ತ
ವಿವಿಧ ಲಯಗಳಲ್ಲಿ ತಾಳಗಳಲ್ಲಿ ಮೇಳಗಳಲ್ಲಿ ಸುತ್ತಿದವರು
ಸುತ್ತಿ ಸುಳಿಸುಳಿಯಾಗಿ ಈ ಕೋಣೆಯೊಳಗೆ ಸುತ್ತ ಮುತ್ತ
ಸುತ್ತಿ ರಾತ್ರಿ ಬೆಳೆದಂತೆ ಆಕಳಿಕೆಯಿಂದ ತೂಕಡಿಸಿದವರು
ಎಲ್ಲರೂ ಎದ್ದು ಹೋದರೂ ಬೆಳಕು ಮಂಕಾದರೂ ಇಲ್ಲಿ
ನಾಲ್ಕು ಗೋಡೆಯೊಳಗೆ ಕೋಣೆ ಏಕಾಕಿಯಾದರೂ ಕೂಡ
ಇವರ ಈ ಹೋದವರ ಮಾತುಕತೆ ಮತ್ತೆ ಉದ್ಗಾರಗಳು
ಉದ್ದುದ್ದ ಚರ್ಚೆಯ ಟೊಳ್ಳುಗಳು ಇವರ ಹೆಂಡಂದಿರ ಒಜ್ಜೆಯ
ಒಯ್ಯಾರದ ಶಬ್ದಗಳು ಅವರ ಆಭರಣದ ಥಳಕುಗಳು
ಮೈ ಎಡೆಯ ಗಂಧಗಳು ಬೆಳೆದ ಕೊಬ್ಬಿನ ಬೇಸರಗಳು
ಇಲ್ಲಿ ಲಯವಾದ ಸ್ವರಗಳು ಕಪ್ಪು ಸಾಸರುಗಳು ತಲೆಕೂದಲುಗಳು
ಸಿಕ್ಕಿಕೊಂಡ ಹೂವಿನ ಚೂರುಗಳು ಮತ್ತು ಉಗಿದ ಮೂಳೆಯ ತುಂಡುಗಳು
ಹೋಮಿಸಿ ಉಳಿದ ಮಂತ್ರಗಳಂತೆ ಸಮಿತ್ತುಗಳಂತೆ ಹವಿಸ್ಸುಗಳಂತೆ
ಏನನ್ನೊ ಬಿಟ್ಟು ಹೋಗಿವೆ ಮಾತು ಕಳೆದ ಧ್ವನಿಗಳಿರಬಹುದು
ಸ್ವರೂಪ ಕಳೆದ ಆಕಾರಗಳಿರಬಹುದು ಅಸ್ತಿತ್ವ ಕಳೆದ ಭೂತಗಳಿರಬಹುದು
ಅಸ್ವಸ್ಥತೆಯಿಂದ ಹೊರಳುತ್ತಿವೆ ಖಾಲಿತನದಲ್ಲಿ ನರಳುತ್ತಿವೆ
*****