ಬೆಳಕಿನ ಮುಖಗಳಿವೆ
ಮಣ್ಣಿನ ಮುಖಗಳಿವೆ
ಇವೆರಡರ ನಡುವೆಯೊಂದು
ದಾರಿ ಹುಡುಕುತ್ತೇನೆ:
ಮನುಷ್ಯರ ಮುಖಗಳತ್ತ
ಕೊಂಡೊಯ್ಯುವ ದಾರಿ
ಮುಖವಿಲ್ಲದವನು ನಾನು.
ನಿನ್ನ ಮುಖ ನನ್ನದು
ಅವನದೂ ನನ್ನದೇ
ಅವಳದೂ ಹೌದು.
ಕೆಲವೊಮ್ಮೆ ಮಂದಿಯ ಮುಂದೆ ಬಂದಾಗ
ನನ್ನ ಸ್ವರೂಪವೇ ಬಿಂಬಿಸಿದಂತೆ
ಅನಿಸುತ್ತದೆ.
ಮತ್ತು ಈ ಬೃಹತ್ ಕೋಣೆಯಲಿ ನನ್ನ ಸ್ವಗತವೇ
ಧ್ವನಿಯಾಗಿ ಪ್ರತಿಧ್ವನಿಯಾಗಿ
ತಮ್ಮಟೆ ಬಾರಿಸುತ್ತದೆ ನಿರಂತರ.
ಇಷ್ಟೆ ಅಲ್ಲ.
ಈಡಿಪಸ್, ನೀರೊ, ಶಾಜಹಾನ್
ಹೀಗೆ ಸೀರೆನಿರಿಯಂತೆ
ಅಕ್ಷಯ ಅವತಾರಿಯಾಗಿ
ಕೊರೆದಿದ್ದೇನೆ ಚರಿತ್ರೆಯಲಿ
ನನ್ನ ಮುಖಗಳ ಏರುತಗ್ಗು.
ಆಕಾರಕ್ಕೆ ಬಾರದೆ
ನೆರಳಾಗಿ, ನೆರಳೂ ಅಲ್ಲದಾಗಿ
ಅಗೋಚರವಾಗಿ
ಯಾರಿಗೂ ಏನೂ ಅಲ್ಲದೆ
ತೊಟ್ಟು ಕಳಚಿ
ಆಕಾಶದಲ್ಲಿ ತ್ರಿಶಂಕುವಾಗಿ
ತೊನೆಯುತ್ತಿರುವ,
ಇರವಿನರಿವಿಲ್ಲದೆ, ಇರವೂ ಇಲ್ಲದೆ,
ಬದುಕಿ ಸತ್ತಿರುವ
ಸತ್ತು ಬದುಕಿರುವ
ಸಾವು ಬದುಕಿನ ಮಧ್ಯೆ ಪ್ರೇತಾತ್ಮವಾಗಿರುವ
ಆತ್ಮವೇ ಇಲ್ಲದ ಹಲವು ಸಾವಿರ
ಮುಖಗಳೂ ಇವೆ ನನಗೆ.
ಇವೆಲ್ಲವನು ಹೊತ್ತು
ಈಜಿಪ್ತದ ಸ್ಫಿಂಕ್ಸೆನ ಹಾಗೆ
ಭೂತದಿಂದ ಭವಿಷ್ಯತ್ತಿನ ಕಡೆಗೆ
ನಾನು ಮುಂದೊತ್ತಿ ಬರುತ್ತಿದ್ದೇನೆ ಮೆಲ್ಲಗೆ
ಆದರೂ ನನಗೆ ಇವೆಲ್ಲವೂ ಮಸಕು
ಎಲ್ಲ ಮುಖಗಳಿಗೂ ಅಪರಿಚಿತ ಮುಸುಕು
ನಿನ್ನದೂ
ನನ್ನದೂ.
*****