ಅನಿಧಿಕೃತ ಸಮರದಲಿ
ಜೀವ ವಿಶೇಷಗಳ ತಾಣ
ಕ್ಷಣದಲ್ಲಾಯ್ತು ಮಸಣ
ಕುಡಿಯೊಡೆದು ಚಿಗುರಿದ
ನಂದನವನವೆಲ್ಲಾ
ನಿಮಿಷದಲಿ
ಮರುಭೂಮಿಯಾಯ್ತಲ್ಲಾ!
ಗಡಿಮೀರಿ
ಒಳನುಗ್ಗಿದ್ದು ಅವರ ತಪ್ಪೊ?
ಬಿಟ್ಟಿದ್ದು ಇವರ ತಪ್ಪೊ?
ಬೇಕಿಲ್ಲ ತಪ್ಪುಸರಿಗಳ ಅಳತೆ
ರಾಜಕೀಯ ಕುತಂತ್ರದಲಿ
ತಕ್ಕಡಿ ಸರಿದೂಗೀತೇ?
ಕಪಟದೂತ್ಯವ ಆಡುವವರಾರೋ?
ದಾಳ ಒಗೆದವರಾರೋ?
ಗೆದ್ದವರಾರೋ? ಸೋತವರಾರೋ?
ಮುನ್ನುಗ್ಗಿದವರಾರೋ? ಹಿಮ್ಮೆಟ್ಟಿದವರಾರೋ?
ಏನಿಲ್ಲಾ, ಎಂತಿಲ್ಲ
ಸುಮ್ಮಸುಮ್ಮನೆ ಮಣ್ಣೊಳಗೆ
ರಕ್ತದ ನದಿಯಾದವರ
ಲೆಕ್ಕವಿಟ್ಟವರಾರು?
ಅವರಿವರ ತಪ್ಪಿಗೆ.
ತಪ್ಪಿಲ್ಲದೆಯೂ
ಬಲಿಪಶುವಾದರು ಹಲರು.
ನಮ್ಮವನದೋ, ಪರಕೀಯನದೋ
ಜೀವ ಜೀವವೇ ತಾನೇ?
ದೇಶಕ್ಕೆ ಗಡಿಯಷ್ಟೆ
ಸೃಷ್ಟಿಗೆ ಗಡಿಗಳಿವೆಯೆ?
ನಾಳೆಗೇ ಬೆಂಕಿಯೆಲ್ಲವೂ ಆರಿ
ಬೂದಿಯುಳಿದೀತು ಬರಿ.
ಆದರೆ… ಆದರೆ ಹೇಗಳಿಸುವುದು?
ಹೇಗಳಿಸುವುದು ಬಿಸಿ ನೆತ್ತರಿನ ಗುರುತುಗಳನ್ನು?
ಹೇಗೆ ಒರೆಸುವುದು ಸಂಬಂಧಿಗಳ
ಕಣ್ಣೀರಿನ ಶರಧಿಗಳನು?
ಬೇಕೆಂದರೂ ಈಗ
ತರಲಾದೀತೆ ಮತ್ತೆ ಜೀವಗಳನ್ನು?
ಬದುಕೆಂದರೆ ಇಲ್ಲಿ ಹೇ ತಂದೆ
ಮಾರಕಾಸ್ತ್ರಗಳಾಟವೇ?
ರುಂಡ ಚೆಂಡಾಡುವ ಹೂಟವೇ?
ರಾಶಿಹೆಣಗಳ ಕೂಟವೇ?
ಕಣ್ಣಾಮುಚ್ಚೆ ಮಕ್ಕಾಳಾಟವೇ?
ಬದುಕಿಸುವ ಮಂತ್ರ ಅರಿಯದ
ಹುಲುಮನುಜ
ಬದುಕು ಅಳಿಸುವ ತಂತ್ರ ಅರಿತದ್ದು
ಸರಿಯೇ ಪ್ರಭುವೇ?
ಇಲ್ಲಿ ಜೀವಕ್ಕೆ
ಬೆಲೆ ಇದೆಯೇ?
*****