ಕಪ್ಪಡರಿದ ಕಂದೀಲು
ನಾನಿನ್ನೂ
ಉಜ್ಜಿ
ಹೊಳಪೇರಿಸೇ ಇಲ್ಲ!
ದೇವರ ಮುಂದಲ
ನಂದಾದೀಪ
ಯಾವಾಗಲೋ ಆರಿ
ಬತ್ತಿ ಸುಟ್ಟು ಕರಕಾಗಿತ್ತಲ್ಲ!
ಹೀಗೆ ಇದ್ದಕ್ಕಿದ್ದಂತೆ
ಮೋಡ ಮುಸುಕಿ
ಕತ್ತಲಾವರಿಸುತ್ತದೆಂದು
ಯಾರಿಗೆ ಗೊತ್ತಿತ್ತು?
ಗುಟ್ಟಾಗಿ ಬಸಿರಾದ ಮೋಡ
ಯಾವ ಕ್ಷಣದಲ್ಲಾದರೂ
ಹೀಗೆ ಹನಿಯೊಡೆಯಬಹುದೆಂದು
ನನಗೆಲ್ಲಿ ತಿಳಿದಿತ್ತು?
ಹನಿಹನಿಯೂ
ಭುವಿತಾಗಿ
ಈ ನಿಶೀಥದಲ್ಲಿ ಅಬ್ಬಾ!
ಎಂಥ ಕೊರೆವ ಚಳಿ?
ಅಗ್ಗಿಷ್ಟಗೆಗೊಡ್ಡಲು
ಒಂದು ತುಂಡು
ಇದ್ದಿಲೂ
ಉಳಿದಿಲ್ಲ ಇಲ್ಲಿ!
ಒಳಗಿನೆಲ್ಲಾ
ಚಡಪಡಿಕೆ ಮೀರಿ
ಅದೋ ಬಾಗಿಲು ತಟ್ಟುವ
ಸದ್ದು ಅಥವಾ ಭ್ರಾಂತು?
ಈ ನಿಶಿತ ಕತ್ತಲಿನಲ್ಲಿ
ಮುಖಗಳು
ಕಾಣುವುದಾದರೂ
ಎಂತು?
ಕನಸುಗಳಲ್ಲಿ ಪ್ರತ್ಯಕ್ಷವಾಗಿ
ವಾಸ್ತವದಲ್ಲಿ ಕನಸಾದದ್ದು
ಇದ್ದಕ್ಕಿದ್ದಂತೆ ಹೀಗೆ
ಎದುರಾದರೆ ಹೇಗೆ?
ಎಲ್ಲದರ ಕೊನೆಯೋ?
ಹೊಸದರ ಪ್ರಾರಂಭವೋ?
ಅಂತೂ ಯಾವುದೋ ಸಿದ್ಧವಿಲ್ಲದಲ್ಲಿ
ಬಂದುಬಿಡಬಹುದೇ ಹೀಗೆ?
*****