ಈ ಎಲ್ಲ ವಿಶ್ವವನು ನಮ್ಮ ತಂದೆಯು ಋಷಿಯು
ಹೋತಾರನಾಗಿ ಯಜ್ಞದಲಿ ಅರ್ಪಿಸಿದ
ಆಶಿಸಿದ ಸೃಷ್ಟಿಸಿದ ಈ ತನ್ನ ಆಸ್ತಿಯಲಿ
ಮೊದಲಿಗನು ತಾನಾಗಿ ಸೇರಿಹೋದ
ಸೃಷ್ಟಿಯಾರಂಭದಲಿ ಈ ವಿಶ್ವವೇನಿತ್ತು
ಯಾವುದದು ತಾನಿತ್ತು ಹೇಗೆ ಇತ್ತು
ವಿಶ್ವಚಕ್ಷುವು ವಿಶ್ವಕರ್ಮನಾ ಮಹಿಮೆಯದು
ಈ ಭೂಮಿಗಗನಗಳ ಸೃಷ್ಟಿಸಿತ್ತು
ವಿಶ್ವವೆಲ್ಲಾ ಕಣ್ಣು ವಿಶ್ವವೆಲ್ಲಾ ಬಾಯಿ
ವಿಶ್ವವೆಲ್ಲಾ ಬಾಹು ಪಾದವಿರುವ
ಹಕ್ಕಿ ರೆಕ್ಕೆಗಳಂತೆ ತೆಕ್ಕೆಯಲಿ ಆ ದೇವ
ಬಾನು ಭೂಮಿಗಳನ್ನು ನಿರ್ಮಿಸಿರುವ
ಯಾವ ವನವದು ಅಲ್ಲಿ ಯಾವ ವೃಕ್ಷವು ಇತ್ತು
ಎಲ್ಲಿ ಈ ಭೂ ಬಾನು ಅಡಗಿದ್ದವು
ಮತಿವಂತ ಮಾನವರೆ ಮನದೊಳಗೆ ಚಿಂತಿಸಿರಿ
ಯಾವುದದು ಭುವನವನು ಧರಿಸಿರುವುದು
ಮೇಲಿರುವುದೆಲ್ಲವೂ ಕೆಳಗಿರುವುದೆಲ್ಲವೂ
ನಡುವಿರುವುದೆಲ್ಲವೂ ನೀ ವಿಶ್ವಕರ್ಮ
ಹವಿಸ್ಸನರ್ಪಿಸುವುದನು ಕಲಿಸು ಗೆಳೆಯರಿಗೆಲ್ಲ
ತನ್ನ ಅರ್ಪಿಸಿ ತಾನು ವೃದ್ಧಿಸುವ ಮರ್ಮ
ವಿಶ್ಚಕರ್ಮನೆ ಸ್ವತಃ ಈ ಭೂಮಿ ಸ್ವರ್ಗಗಳ
ಯಜ್ಞದಲ್ಲಾಜ್ಯ ಮಾಡಿದ ಪರಿಯಲಿ
ಸುತ್ತಲಿನ ಜನ ಮರುಳುತನದಲ್ಲಿ ಮುಳುಗಿರಲಿ
ಇಹದಿ ಸಂಪದ ಜ್ಞಾನ ನಮಗಾಗಲಿ
ವೇಗಮತಿ ವಾಕ್ಪತಿಯೆ ವಿಶ್ಚಕರ್ಮನೆ ನಿನ್ನ
ಬೇಡುವೆವು ಕಾರ್ಯಗಳ ವೃದ್ಧಿಗಾಗಿ
ವಿಶ್ವಂಭರನೆ ಸತ್ಯಕರ್ಮ ಕರುಣಿಸು ನಮ್ಮ
ಯಜ್ಞಹವಿಸುಗಳ ಸಂತುಷ್ಟಿಗಾಗಿ ||
(ಋಗ್ವೇದದ ೧೦ನೆ ಮಂಡಲ)
*****