ಶ್ರೀರಾಮಚಂದ್ರ ಹುಟ್ಟಿದ ದಿನವೇ
ಡೋಂಟ್ ಕೇರ್ ಅಂತ ನೀವೇ ಫೇರ್‌ವೆಲ್
ಏರ್ಪಾಡು ಮಾಡುಕೊಂಡಿದ್ದು ನೋ ಒನ್ ವಾಸ್ ಅವೇರ್
ನಮಗಾರಿಗೂ ಗೊತ್ತೇ ಮಾಡದಂತೆ ಹೊರಟು ಬಿಟ್ಟಿದ್ದು
ವಾಸ್ ಇನ್ ಎ ವೇ ಅನ್‌ಫೇರ್
ನಿಮ್ಮ ಪಾಂಡಿತ್ಯ ನೀವು ಕನ್ನಡ ಕಾವ್ಯಕ್ಕೆ ಕಲ್ಪಿಸಿದ ಕಾಯಕಲ್ಪ
ಓದಿ, ಕೇಳೀ ಅರ್ಥಮಾಡಿಕೊಂಡಿದ್ದೇನೆ ಅಲ್ಪಸ್ವಲ್ಪ
ಜೊಳ್ಳು ಕವನಗಳ ಬಗ್ಗೆ ನಿಮ್ಮ ಜಿಗುಪ್ಸೆ
ಪೊಳ್ಳು ಕವನಗಳ ಕ್ಯಾಸೆಟ್ಟು ಬಗ್ಗೆ ಕೆಟ್ಟ ಸಿಟ್ಟು
ಬೊಗಳೆಗಳ ಜತೆ ನಿಮ್ಮ ಜಗಳ
ನೇರನುಡಿ, ಹಾಸ್ಯ, ಪರಿಹಾಸ್ಯ
ಜಂಟಲ್‌ಮಾನ್ ಪದದ ಅರ್ಥ ವಿವರಣೆಯಂತಿದ್ದ ವ್ಯಕ್ತಿ
ಇವೆಲ್ಲವೂ ಅರ್ಥವಾಗಿದ್ದವು ಬಿಡಿ ಯತಾನುಶಕ್ತಿ
ಆದರೆ ಕಡೆವರೆಗೂ ಅರ್ಥವಾಗದುಳಿದ ಅಚ್ಚರಿಯಂದರೆ
ಎಂಥ ಕೋಪ, ವಿಕೋಪಗಳ ಮದ್ಯದಲ್ಲೂ ಎದುರಾಳಿಗಳನ್ನು
ನಿರಾಯುಧರನ್ನಾಗಿಸಿ ದಿಡೀರ್ ಎಂದು
ನಿಮ್ಮ ಮುಖದಲ್ಲಿ ನಿರಪೇಕ್ಷವಾಗಿ ಮೂಡಿ ಬಿಡುತ್ತಿದ್ದ
ಬಿದಿಗೆ ಚಂದ್ರಮನ ಮಗು ಮುಖದ ಗಾಂಧಿನಗು.
*****