ಒಂದು ಸುಡುಬಿಸಿಲು ಮಧ್ಯಾಹ್ನ
ನನ್ನ ನೆರಳು ನಾನೇ
ನೋಡುತ್ತ ನಿಂತಿದ್ದೆ
ಅಂದು ಸಂತೆಯ ದಿನ
ಒಬ್ಬರ ಸುಳಿವಿಲ್ಲ
ನಿದ್ದೆ ಬಂದಂತಾಗಿ ಆಕಳಿಸಿದೆ
ನಾಯಿಯೊಂದು ಬಂದು
ಕಾಲೆತ್ತಿ
ಉಚ್ಚೆ ಒಯ್ದು ಹೋಯಿತು
ನನ್ನ ನೆರಳು ಸ್ವಲ್ಫ09
ಸರಿದಂತೆನಿಸಿತು
ನಿರ್ದಯಿ ಸೂರ್ಯ
ನನ್ನೊಳಗಿನಿಂದ
ಉದುರಿ ಬಿದ್ದಿದ್ದ
ಒಣಗಿದ ಎಲೆಗಳ ಮೇಲೆ
ಆಕ್ರಮಣಕ್ಕೆ ಪ್ರಯತ್ನಿಸುತ್ತಿದ್ದ
ಗಾಳಿ ಉಸಿರುಗಟ್ಟಿದಂತೆ
ಆಗೊಮ್ಮೆ ಈಗೊಮ್ಮೆ ಬಿಕ್ಕುತ್ತಿತ್ತು
ನನ್ನ ನೆರಳು
ದೂರ
ನನ್ನ ಬಿಟ್ಟು ಜಾರಿದಂತಿತ್ತು
ನೋಡುತ್ತಿರುವಂತೆ
ಒಬ್ಬ ಹುಡುಗ ಒಂದು ಹುಡುಗಿ
ನನ್ನತ್ತಲೇ ಬಂದು
ಒತ್ತಿಕೊಂಡು
ಕುಳಿತರು
ತುಂಬಾ ಹೊತ್ತು
ಮಾತನಾಡಿದರು
ನಡು ನಡುವೆ ಅತ್ತರು
ಎದ್ದು ಹೋಗುವಾಗ
ನಕ್ಕರು
ಕದ್ದು ಕದ್ದು ನೋಡುತ್ತಿದ್ದ
ಸೂರ್ಯ
ಸೀದಾ ಬಂದವನೆ ಕೇಳಿದ
’ಏನು ಮಾಡಿದೆ,
ಸಾಯಲೆಂದು ಬಂದವರು
ಬದುಕಲೆಂದು ಹಿಂದಿರುಗಿದರು?’
ಏನು ಹೇಳಲಿ?
ಹಸಿರೆಲೆಯನೊಮ್ಮೆ
ಬಿದ್ದ ಒಣ ಎಲೆಯನೊಮ್ಮೆ
ಪ್ರೀತಿಯಿಂದ
ದಿಟ್ಟಿಸಿ ನೋಡಿ
ನಕ್ಕೆ
ಗಾಳಿ ತೆಳ್ಳಗೆ ಬೀಸಲು ಶುರುವಿಟ್ಟಿತು
ನನ್ನ ನೆರಳು
ನಾಳಿನ ಬೆಳಗಿಗಾಗಿ ಕಾಯುತ್ತ
ಒಡಲೊಳಗೆ ಸೇರಿಬಿಟ್ಟಿತು
*****