ಮುಗಿಲು ಸುರಿಸುವುದು ನೀರು – ಅದ
ಮೇಲೆ ಸಲಿಸುವದು ಬೇರು
ಮುಗಿಲಿಗು ಬೇರಿಗು ಕೆಲಸವ ಹಚ್ಚಿ
ಮರವ ಬೆಳೆಸುವುದು ಯಾರು?
ಅರಳಿ ಬೀಗುವುದು ಹೂವು
ದುಂಬಿಗೆ ಕೆರಳಿಸಿ ಕಾವು,
ಹೂವಿನ ಹೊಕ್ಕಳ ದುಂಬಿಯು ಕಚ್ಚಿ
ಹಣ್ಣು ತರಿಸುವುದು ಯಾರು?
ಕವಿಯು ಹೊಗಳುವನು ಹಾಡಿ
ಸೃಷ್ಟಿಯ ಚೆಲುವನು ನೋಡಿ
ಸೃಷ್ಟಿಗು ಕವಿಗೂ ನೆಂಟನು ಮಾಡಿ
ಯಾರು ಮಾಡಿದರು ಜೋಡಿ?
ಕರೆಯುವ ನಗೆಯೂ ಆಗಿ-ಅದ
ಬಯಸುವ ಬಗೆಯೂ ಆಗಿ
ಎರಡರ ಹಿಂದೂ ಆಡುವುದು
ಯಾರು? ಯಾವುದಕಾಗಿ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.