ಊರಗುಬ್ಬಿ ಕಾಣದಾದ್ವಲ್ಲೆಽಽಽ ಯಮ್ಮಾಽಽಽ
ಊರಗುಬ್ಬಿ ಮಾಯವಾದ್ವಲ್ಲೊಽಽಽ ಯಪ್ಪಾಽಽಽ
ಬೆಳಕು ಹರಿದರೆ ಬೆಳಕಿನಂಗೆ ತೂರಿ ಬರುತಿದ್ವಲ್ಲೇಽಽಽ
ಗಾಳಿಯಂಗೇ ಗಾಳಿ ಜೊತೆಗೆ ಹಾರಿ ಬರುತಿದ್ವಲ್ಲೋಽಽಽ
ಪುರ್ರಂತ ರೆಕ್ಕೆ ಬಿಚ್ಚಿ ಸೊರ್ರಂತ ಹಾರುತಿದ್ವಲ್ಲೋಽಽಽ
ಮರದ ತುಂಬಾ ಗಿಲಕಿ ಸದ್ದು ಗಿಲಕುತಿದ್ವಲ್ವೋಽಽಽ
ಅಂಗಳದಾಗ ಅಕ್ಕಿ ಆಯ್ದು ಹಸನು ಮಾಡ್ತಿದ್ವಲ್ಲೇಽಽಽ
ಕಡ್ಡಿ ಕಾಲಿಗೆ ಗೆಜ್ಜೆ ಕಟ್ಟಿ ತಕ ಥೈ ಕುಣಿಯುತಿದ್ವಲ್ಲೋಽಽಽ
ಗುಡಿಸಲಿಗೆ ಗೂಡು ಕಟ್ಟಿ ಜೋಗುಳ ಹಾಡ್ತಿದ್ವಲ್ಲೇಽಽಽ
ಬಾಯಿ ತುಂಬಾ ಬುತ್ತಿ ತಂದು ಉಣ್ಣಾಕಿಡ್ತಿದ್ವಲ್ಲೋಽಽಽ
ಹಠ ಮಾಡಿ ಅಳುವ ಕಂದ ನಿನ್ನ ನೋಡಿ ನಗ್ತಿದ್ದಲ್ಲೇಽಽಽ
ಆಕಾಡೀಕಡೆ ಗೋಣು ತಿರುಗಿಸಿ ನಿನ್ನಂದಾ ನೋಡ್ತಿದ್ವಲ್ಲೋಽಽಽ
ಜ್ವಾಳದೊಲದಾಗ ಬೆಳಸಿ ತಿಂದು ಜೋಕಾಲಿ ಜೀಕತಿದ್ವಲ್ಲೇಽಽಽ
ಮುಚ್ಚಳದಾಗಿನ ನೀರಿನಾಗ ಮುಳುಮುಳುಗಿ ಏಳತಿದ್ವಲ್ಲೋಽಽಽ
ಹಳ್ಳಿ ಮಂದಿಗೂ ಡಿಳ್ಳಿ ರೋಗ ಹೆಂಗ ಬಡದೈತಲ್ಲೇಽಽಽ
ಮಾತಾಡೋ ‘ಮಷಿನು’ ಮಾಯಾ ಮಾಡ್ಯಾವಂತಲ್ಲೋಽಽಽ
ಈ ಹರಕು ಬಾಯಿಗೆ ದೊಡ್ಡರೋಗ ಬಂದು ಸಾಯಬಾರ್ದೇಽಽಽ
ಗುಬ್ಬಿ ಸೆಟೆದಂಗೆ ಸೆಟೆಯೋ ರೋಗ ಅವ್ರುಗು ಬರಬಾರ್ದೆಽಽಽ
ಕಾಗೆ ಗುಬ್ಬಿ ಇಲ್ಲದಾಂಗ ಹೆಂಗೆ ಬದುಕ್ತಾರೋ ಯಮ್ಮಾಽಽಽ
ಎಂಡ್ರು ಮಕ್ಳು ಅಷ್ಟೇ ಅಂದ್ರೆ ಬದುಕು ಯಂಗೋ ಯಪ್ಪಾಽಽಽ
ನೋಡಾನಂದರೆ ಒಂದೂ ಇಲ್ಲಾ ಎಲ್ಲಿ ಹೋಗೀರೇಽಽಽ ಗುಬ್ಬೀಽಽಽ
ಕೇಳಾನಂದರೆ ಸದ್ದೇ ಇಲ್ಲಾ ಎಲ್ಲಿ ಅಡಗೀರೇಽಽಽ ಗುಬ್ಬೀಽಽಽ
ಊರಗುಬ್ಬಿ ಕಾಣದಾದ್ವಲ್ಲೇಽಽಽ ಯಮ್ಮಾಽಽಽ
ಊರಮಂದಿ ದೂರವಾಗೋ ಕಾಲ ಬರ್ತೈತೋಽಽಽ ಯಪ್ಪಾಽಽಽ
*****