ಇವರ ಕಣ್ಣಿಗೆ ಇಲ್ಲೆಲ್ಲಾ ಓರೆಕೋರೆಗಳೇ ಕಾಣುತ್ತವೆ
ನೇರಮಾಡಲು ಇವರು ಸೆಣಸುತ್ತಾರೆ
ಇವರ ನೋಟಕತ್ತಿಗಳು ವಕ್ರತೆಗಳ ಕತ್ತರಿಸುವಂತೆ ನೋಡುತ್ತವೆ
ಇವರ ಎದೆ ಏನೇನೋ ಹಾಡುತ್ತದೆ
ಆ ಹಾಡ ಕಡಲಿಂದ ನುಡಿಬಟ್ಟಲಲ್ಲಿ ಇವರು ಮೊಗೆದೇ
ಮೊಗೆಯುತ್ತಾರೆ
ಅಸಂಖ್ಯ ಅಭಿನಯ ದೃಶ್ಯ ತರಂಗ
ಏನು ರಸತುಂಬಿ ಕಳಿಸಿರುವನೋ ಅವನು ಇವರೆದೆಯಲ್ಲಿ
ಅದು ಗಾಳಿಯಲೆಗೂ ಕಲಕಲಗೊಳ್ಳುತ್ತದೆ
ತುಮುಲಗೊಳ್ಳುತ್ತದೆ ಕೊನೆಗೆ ಕುದಿಯತೊಡಗುತ್ತದೆ
ಇವರು ಆ ಕುದಿಯನುಕ್ಕಿಸುತ್ತಾರೆ ಕಕ್ಕುತ್ತಾರೆ
ನೂರೆನೂರೆ ಬಿಸಿಬಿಸಿ ಸಿಡಿಲಂತೆ ಕೆಂಡದ ಮಳೆಯಂತೆ
ಇವರ ವೀಣೆಯ ತಂತಿ ಬಲು ಕೋಮಲ
ಇತರೆಲ್ಲ ತಂತಿಗಳು ಮಿಡಿಯದ ತಾನಗಳಲ್ಲಿ
ಇವು ಮಿಡಿಯುತ್ತವೆ ನುಡಿಯುತ್ತವೆ
ಇತರರು ಅಂದುಕೊಳ್ಳಲೂ ಆಗದುದನು
ಇವರು ಅನುಭವಿಸಿ ದನಿದೋರುತ್ತಾರೆ
ನಿಮ್ಮ ಕಟ್ಟೆಯೇರಿಗಳಿವರಿಗೆ ಸೆರೆಮನೆ
ನಿಂತ ಹೊಂಡು ನೀರೆಂದೂ ಇವರಾಗಲಾರರು
ಹನಿಹನಿ ಜಿನುಗುವ ಒರತೆಯಾದರೂ ಸರಿ
ಕ್ಷಣ ಕ್ಷಣಕೂ ಸೃಷ್ಟಿಯು ಇವರನ್ನು
ಕುಂತಲ್ಲಿ ಕುಳ್ಳಿರಿಸದೆ, ನಿಂತಲ್ಲಿ ನಿಲ್ಲಿಸದೆ, ಮಲಗಗೊಡದೆ
ಹರಿದಾಡಿಸುತ್ತದೆ ಸ್ವಚ್ಛಂಧ ನಿರ್ಝರಿಯಂತೆ
ಧಾರೆ ಧಾರೆ ಜಲಪಾತದಂತೆ, ನೆಲಮುದ್ದಿಸುವ ಮಳೆಯಂತೆ
ಇವರ ನೀರಾಳ ನಿಮ್ಮಳತೆಗೆ ಸಿಗುವುದಂತೂ ಅಲ್ಲ
ನಿಮಗಂತೂ ಇವರ ನಡೆ ಸೊಟ್ಟು, ಹೆಜ್ಜೆ ಹುಚ್ಚುಚ್ಚಾರ
ನುಡಿ ಒಗಟು, ಚರಿತ್ರೆ ವಿಚಿತ್ರ, ನೀತಿ ಅತೀತ
ಇವರ ಬಟ್ಟೆ ಕಂಡಾಬಟ್ಟೆ, ಇವರ ವರ್ತನೆ
ಅದ್ವೈತ-ಅಯೋಮಯ….
*****