ಆಗ
ಭಾರತೀಯ ನಾರಿನ ಮಣಭಾರದ ಪಟ್ಟಾವಳಿಯನುಟ್ಟು
ಬಗೆಬಗೆಯಲಂಕಾರದದೊಡವೆಗಳನಿಟ್ಟು
ಭಾರಕ್ಕೆ ಬೆನ್ನುಬಾಗಿ, ಮೂಗಿನ ಗಾಡಿನತ್ತಿನಿಂದ ಕತ್ತು ಬಾಗಿ,
ಪಾದಪಾದಗಳಲ್ಲಿ ವೃತ್ತ ವೃತ್ತಾಕಾರದ ಕಡಗ ಕಂಕಣಗಳಿಂದ
ಛಂದೋ ಬದ್ಧ ಶಾಸ್ತ್ರ್‍ಈಯ ನಾಟ್ಯವಾಡಲು ಸೆಣಸುತಿದ್ದೆ,
ಬೆವರಿ ಬಿಳಿಚಿಕೊಂಡು ನಿರ್ಜೀವವಾಗಿ ರಸಹೀನವಾಗಿದ್ದರೂ
ಅಷ್ಟಾವಕ್ರವಾಗಿ ವಕ್ರಮತಿಯ ಸಂತೃಪ್ತಿಪಡಿಸುತ್ತಿದ್ದೆ
ಈಗ
ಪರದೇಶಿ ಬಟ್ಟೆಗಳ ಮೈಕಾಣುವಂತೆ ಉಟ್ಟು
ಮೀಸೆ ಚಿಗುರಿದ ಹರೆಯವು ಬೀದಿಯಲ್ಲಿ ಕಂಡು ಕಣ್ಣು
ಹೊಡೆಯುವಂತೆ,
ಅದರ ಹುರುಪನನುರಿಸಲು ಕೈಕಾಲು ಮಣಿಸಿ
ಸ್ವಚ್ಛಂದವಾಗಿ ಕುಣಿಯುತ್ತಿರುವೆ
ನಾಗರಿಕತೆಯ ಬಣ್ಣ ಗೊಂಬೆಯಾಗಿ,
ಹಳ್ಳಿಗರ ಮಣ್ಣ ಮೂರ್ತಿಯಾಗಿ,
ಹಣವಂತ ಬಿಳಿಯರ ದಾಸಿಯಾಗಿ,
ಕಲಿತವರ ಮನೆಯ ಕಾಲಕಸವಾಗಿ
ಮುಂದೋಡುವವರ ಹೆಜ್ಜೆಗಳನನುಸರಿಸಲಾಗದ
ಮಾತುಬಾರದ ಮೂಕಿಯೆಂದು ಮೂದೇವಿಯೆಂದು
ಮೂತಿ ಮೂತಿ ತಿವಿಸಿಕೊಂಡು
ಹಾಗೂ ಹೀಗೂ ಕಲಬೆರಕೆ ಕಲೆ ಕಲಿತು
ಪರದೆಯ ಮೇಲಾಡುವ ವೇಶ್ಯಾಗರತಿಯಾಗಿ
ಬೇರೆ ಬೇರೆ ಮಠಗಳ ಬೇರೆ ಬೇರೆ ಮುದ್ರೆಯೊತ್ತಿಸಿಕೊಂಡು
ಅವರನ್ನಿವರು ಇವರನ್ನವರು ಹೊಗಳಿ
ಬೇಡವಾದವರ ತೆಗಳಿ ಬೊಗಳಿ
ಹೊಸ ಮಾಲೆಂದು ಪೇಟೆಯಲ್ಲಿ ಮಾರಲಿಟ್ಟ
ಬೆಡಗಿನ ಸರಕಾಗಿ ಮೆರೆಯುತ್ತಿರುವೆ
ಈ ಗೊಂದಲ ಪುರದಲ್ಲಿ
ನಿನ್ನ ನೈಜರೂಪ ಯಾವುದು
ತೋರಿಸಬಾರದೇ
*****
(೨೨-೮-೭೭)