ಮರವು ತೂಗಾಡಿದವು ಬಳ್ಳಿ ಓಲಾಡಿದವು
ಹೂವು ನಕ್ಕವು ಕುಲುಕಿ ಮೈಯನೆಲ್ಲ,
ಮಂದಮಾರುತ ಸುಳಿದು ಗಂಧವನು ಹಂಚಿದನು
ನೀ ಬಂದೆ ಎನ್ನುವುದು ತಿಳಿಯಲಿಲ್ಲ
ನದಿ ಹಾಡಿ ಓಡಿತು, ಬೆಳುದಿಂಗಳಾಡಿತು
ಮೆಚ್ಚಿ ಸವರಿತು ಬೆಳಕು ಮುಗಿಲ ಗಲ್ಲ,
ಮಣ್ಣ ಕಣ ಕಣವೂ ಚಿನ್ನವನು ಅಣಕಿಸಿತು
ನೀ ಬಂದೆ ಎನ್ನುವುದು ಹೊಳೆಯಲಿಲ್ಲ
ಗುಡ್ಡಗಳು ಅಡ್ಡ ಕೈ ಹಚ್ಚಿ ಮಾತಾಡಿದವು
ಪಿಸುಮಾತು ಏನೆಂದು ತಿಳಿಯಲಿಲ್ಲ,
ಹಕ್ಕಿಗಳು ಸುಖವುಕ್ಕಿ ದನಿಧಾರೆ ಹರಿಸಿದವು
ನೀ ಬಂದೆ ಎನ್ನುವುದು ಹೊಳೆಯಲಿಲ್ಲ
ಹೇಗೆ ಅದು ಹೊಳೆದೀತು, ಮೈಲಿಗೆಯ ಕಳೆದೀತು
ನಾನೆಂಬ ಹಮ್ಮಿನಲಿ ಮುಳುಗಿದವಗೆ?
ತನ್ನಾಚೆ ನಗುತಿರುವ ಸೃಷ್ಟಿಲೀಲೆಗಳಿರಲಿ
ತನ್ನಂತರಂಗವೇ ಸಿಗುವುದಿಲ್ಲ!
*****