ಏನು ಸಂಯಮ ನಿನ್ನದು
ಎಂಥ ತಾಳ್ಮೆಯು ನಿನ್ನದು!
ಎಲ್ಲ ಕಡೆಯೂ ಇರುವ ನಿನ್ನನೆ
ಅಲ್ಲಗಳೆದರೂ ತಾಳ್ವುದು,
ನಿನ್ನ ಕಾಣದ ಬೆರಳು ಸೋಕದೆ
ಹೂವು ದಳಗಳ ತೆರೆವುದೇ?
ನಿನ್ನ ಸನ್ನೆಯ ಆಜ್ಞೆ ಬಾರದೆ
ಗಾಳಿ ಕಂಪನು ಹೊರುವುದೇ?
ಗಿರಿಯು ನಿಲುವುದೆ, ಹೊನಲು ಹರಿವುದೆ
ದಡವು ಕಡಲನು ತಡೆವುದೇ?
ಮಂಜು ಭೂಮಿಗೆ ಇಳಿವುದೇ?
ಹುಲ್ಲೆಯಂತಹ ಮೊಲ್ಲೆಮೈಯಿನ
ಜೀವವನು ಸೃಷ್ಟಿಸುವುದು
ಹುಲಿಯ ಭೀಕರ ಉಗುರನು
ಮಸೆದು ಚೂಪಾಗಿಸುವುದು
ಬಿಸಿಲ ಉರಿಸಿ, ಮಳೆಯ ಸುರಿಸಿ
ಹಸಿರ ನೆಲದಲಿ ಬರೆವುದು
ಫಲವ ಮರದಲಿ ತೆರೆವುದು
ಸತತ ಸಾಗುವ ಚಕ್ರಸೃಷ್ಟಿಯ
ವಿವಿಧ ರೂಪಾಕೃತಿಯಲಿ
ಅಡಗಿ ಸಾಗುವ ಜೀವಸಾರವೆ
ನಮಿಸಿ ನಿಲ್ಲುವೆ ಸ್ತುತಿಯಲಿ;
ಅಲ್ಲಗಳೆವರು ಅಲ್ಲೆ ನಿಲ್ಲಲಿ
ನಾನು ಬರುವೆನು ಜೊತೆಯಲಿ
ಶ್ರದ್ಧೆ ಹೊಳೆಸುವ ಪಥದಲಿ
*****