ಮೊನ್ನೆ ಸಂಜೆ ಗುರು ಶುಕ್ರರನ್ನೇ ಕಣ್ಣುಗಳಮಾಡಿ
ಆಕಾಶವೇ ನಕ್ಕಂತೆ ನೀ ಬಿಡಿಸಿಟ್ಟ ಚಿತ್ರ, ಬಹಳ ವಿಚಿತ್ರ.
ನಮ್ಮವರ ಚಂದ್ರಯಾನ ನಿನ್ನ ಮೇಲಿಳಿದಾಗ
ಆಗಿದ್ದರೂ ಆಗಿರಬಹುದು ನಿನಗೊಂದಿಷ್ಟು ಕಚಗುಳಿ.
ಆದರೆ ಮಧುಚಂದ್ರಕ್ಕೆ ಬಂದಿದ್ದಾರೆಂದೆಣಿಸಿ
ಉದಾಸೀನಮಾಡುವಂತದ್ದಲ್ಲ
ಈ ಲಿಲಿಪುಟ್ಟರ ದಾಳಿ.
ಭೂಮಿ ತಾಯಿಯ ಬಸಿರನ್ನೆ ಬಗೆಬಗೆದು ಬರಿದಾಗಿಸಿ
ಬರಡಾಗಿಸಿದ ಇವರ ಮಿತಿಯಿರದ ದುರಾಸೆ
ಈ ಕಳ್ಳರಿಗೀಗ ನಿನ್ನೊಳಗಿರುವ ಖನಿಜಗಳನ್ನೆಲ್ಲ ಕೊಳ್ಳೆ ಹೊಡಿವಾಸೆ
ಹೀಲಿಯಂ ಹೀರಿ ಸೂರ್ಯಚಂದ್ರರನ್ನೇ
ಪ್ರತಿಸೃಷ್ಟಿಸುವ ವಿಶ್ವಾಮಿತ್ರ ಹಮ್ಮಿನಹಮ್ಮಿನಮಲಲ್ಲಿ
ಹಾಡುತಿದ್ದಾರೆ ಧಮ್ಮಾರೇ ಧಮ್.
ನೀನೊಂದು ಮುದ್ದು ಮರಿ; ಅದೇನೊ ಸರಿ
ಆದರೆ ಆಗಬಾರದಿತ್ತು ಇಷ್ಟೊಂದು ಮೊದ್ದು
ನಿನ್ನ ಕಕ್ಷದ ಒಳಗೆ ಕಾಲಿಟ್ಟರೆಂದಾಕ್ಷಣವೆ ಕರುಣಿಸಬೇಕಿತ್ತು
ಸೂರ್ಯನಂತೆ ಅಂಜನೀಕುಮಾರಕಪಾಲಮೋಕ್ಷ
ಬಹುರಾಷ್ಟ್ರೀಯ ಕಂಪನಿಗಳಿಗೆ ಖಂಡಿತ ನೀಡಬೇಡ ಪರವಾನಿಗೆ
ಆತ್ಮ ರಕ್ಷಣೆಯ ವಿಷಯದಲ್ಲಿ ಬೇಡ ಅಸಡ್ಡೆ, ಅವಜ್ಞೆ
ಹೇಗೂ ಸಧ್ಯಕ್ಕೆ ನೀನೇ ರಾಜ ನೀನೇ ಪ್ರಜೆ
ಮೊದಲು ಗಣಿಗಾರಿಕೆ ನಿಷೇದಿಸಿ ತಕ್ಷಣವೇ ಹೊರಡಿಸು ಒಂದು
ಸುಗ್ರೀವಾಜ್ಞೆ
*****